ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಪ್ರತಿಭಟನೆ

| Published : Nov 27 2024, 01:00 AM IST

ಸಾರಾಂಶ

ರಾಜಕುಮಾರ ಸಿದ್ಧಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ.

ಹೊಸಪೇಟೆ: ವಿಜಯನಗರ ಜಿಲ್ಲಾ ಬಾಬಾ ಸಾಹೇಬ್ ಡಾ.ಬಿ.ಆರ್. ಅಂಬೇಡ್ಕರ್ ಸಂಘದ ವತಿಯಿಂದ ಸಂವಿಧಾನ ದಿನಾಚರಣೆ ಪ್ರಯುಕ್ತ ದೇಶವ್ಯಾಪಿ ಬೌದ್ಧರ ಧಾರ್ಮಿಕ ಹಕ್ಕಿಗಾಗಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು.

ಸಂಘದ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಮಾತನಾಡಿ, ಬುದ್ಧಗಯಾ ಜಗತ್ತಿನ ಬೌದ್ಧರಿಗೆಲ್ಲ ಪರಮ ಪವಿತ್ರವಾದ ಸ್ಥಳ. ರಾಜಕುಮಾರ ಸಿದ್ಧಾರ್ಥ ಬೋಧಿ ಜ್ಞಾನ ಪಡೆದು ಭಗವಾನ್ ಬುದ್ಧನಾದ ಪಾವನ ಸ್ಥಳ. ಈ ಕ್ಷೇತ್ರ ಬುದ್ಧನ ಕಾಲದಿಂದಲೂ ಪೂಜ್ಯನೀಯವಾಗಿದೆ. ಸಾಮ್ರಾಟ್ ಅಶೋಕನು ಸೇರಿ ಈ ದೇಶದ ಅನೇಕ ರಾಜ, ಮಹಾರಾಜರು ಮತ್ತು ಬರ್ಮಾ, ಶ್ರೀಲಂಕಾ, ಥೈಲ್ಯಾಂಡ್, ಜಪಾನ್ ಮತ್ತು ಇನ್ನಿತರ ದೇಶಗಳ ರಾಜರು ಹಾಗೂ ಬೌದ್ಧ ಉಪಾಸಕರು ಈ ಕ್ಷೇತ್ರದ ಅಭಿವೃದ್ಧಿಗಾಗಿ ಶ್ರದ್ಧಾ ಪೂರ್ವಕ ಕೊಡುಗೆ ನೀಡಿರುವುದು ಇತಿಹಾಸ ಎಂದರು.

ಕ್ರಿ.ಶ.1150ರಿಂದ ಕ್ರಿ.ಶ. 1800ರನ್ನು ಬೌದ್ಧ ಚರಿತ್ರೆಯಲ್ಲಿ ಕತ್ತಲೆಯುಗ ಎಂದು ದಾಖಲಿಸಲಾಗಿದೆ. ಈ ಕರಾಳ ಕಾಲಘಟ್ಟದಲ್ಲಿ ಶಂಕರಾಚಾರ್ಯರ ಪಂಥಕ್ಕೆ ಸೇರಿದ ಗೋಸಾಯಿ ಗಮಂಡಿಗಿರಿ ಎಂಬ ಶೈವ ಬ್ರಾಹ್ಮಣ ಬುದ್ಧಗಯಾದ ಮಹಾಬೋಧಿ ಮಹಾವಿಹಾರ ಕ್ಷೇತ್ರವನ್ನು ಅತಿಕ್ರಮಣ ಮಾಡಿ ತನ್ನ ನೆಲೆ ಸ್ಥಾಪಿಸಿದ. ಭಾರತದ ಸಂವಿಧಾನದ ಪ್ರಕಾರ ಎಲ್ಲ ಧರ್ಮಗಳ ಧಾರ್ಮಿಕ ಕೇಂದ್ರಗಳ ಆಡಳಿತವನ್ನು ಆಯಾ ಧರ್ಮದವರೇ ನಿರ್ವಹಿಸುತ್ತಿದ್ದಾರೆ. ಸಿಖ್‌ ಗುರುದ್ವಾರ ಕಾಯ್ದೆ 1925ರ ಪ್ರಕಾರ ಕೇಶಧಾದಾರಿ ಸಿಖ್ ರಲ್ಲದವರು ಗುರುದ್ವಾರ ಆಡಳಿತ ಮಂಡಳಿ ಸದಸ್ಯರಾಗಲು ಸಾಧ್ಯವಿಲ್ಲ. ದರ್ಗಾ ಖ್ವಾಜಾ ಕಾಯ್ದೆ -1955 ರಂತೆ ಹನಫಿ ಮುಸ್ಲಿಮರು ಮಾತ್ರ ಅಜ್ಮೀರ್ ದರ್ಗಾ ಕಮಿಟಿ ಸದಸ್ಯರಾಗುತ್ತಾರೆ. ಈ ದೇಶದ ಬೌದ್ಧ ಸಮುದಾಯ ಮತ್ತು ಅಂಬೇಡ್ಕರ್ ಅನುಯಾಯಿಗಳು ಸಂವಿಧಾನದತ್ತ ಧಾರ್ಮಿಕ ಅವಕಾಶಗಳಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೌದ್ಧರಿಗೆ ತಮ್ಮ ಧಾರ್ಮಿಕ ಕ್ಷೇತ್ರ ಸ್ವತಂತ್ರವಾಗಿ ನಿರ್ವಹಿಸುವ ಅವಕಾಶಕ್ಕಾಗಿ ಬುದ್ಧಗಯಾದ ಮಹಾಬೋಧಿ ಮಹಾವಿಹಾರದ ಆಡಳಿತ ಸಂಪೂರ್ಣವಾಗಿ ಬೌದ್ಧರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜೈಭೀಮ್ ವಿದ್ಯಾರ್ಥಿ ಯುವ ಜನ ಒಕ್ಕೂಟ ಜಿಲ್ಲಾಧ್ಯಕ್ಷ ಜೆ.ಶಿವಕುಮಾರ್, ಚಿಂತಕ ಪೀರ್‌ಬಾಷ, ಮುಖಂಡರಾದ ಸಣ್ಣಮಾರೆಪ್ಪ, ನಿಂಬಗಲ್ ರಾಮಕೃಷ್ಣ, ಜಯಪ್ಪ ಪಟ್ಟಿ, ಚಂದ್ರಶೇಖರ್, ಈರಣ್ಣ, ಕಾರಿಗನೂರು ರಾಮಕೃಷ್ಣ, ಮುಖಂಡರಾದ ರಾಮಚಂದ್ರ, ವೀರಭದ್ರ ನಾಯಕ, ವಿಶಾಲ್‌ ಮ್ಯಾಸರ್, ಅಂಜಲಿ ಬೆಳಗಲ್ ಮತ್ತಿತರರಿದ್ದರು.

ವಿಜಯನಗರ ಜಿಲ್ಲಾ ಅಂಬೇಡ್ಕರ್ ಸಂಘದಿಂದ ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ ಅವರಿಗೆ ಮನವಿ ಸಲ್ಲಿಸಲಾಯಿತು.