ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಡ ಕಚೇರಿ ಎದುರು ಪ್ರತಿಭಟನೆ

| Published : Sep 03 2024, 01:32 AM IST

ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಡ ಕಚೇರಿ ಎದುರು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕಿನ ಖಾಂಡ್ಯ ನಾಡ ಕಚೇರಿ ಎದುರು ಸಿಪಿಐ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಕಡಬಗೆರೆ ಗ್ರಾಮದಲ್ಲಿ ಮೆರವಣಿಗೆ, ಸಿಪಿಐ ನೇತೃತ್ವ ನಡೆದ ಪ್ರತಿಭಟನೆ,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ತಾಲೂಕಿನ ಖಾಂಡ್ಯ ನಾಡ ಕಚೇರಿ ಎದುರು ಸಿಪಿಐ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.

ಕಡಬಗೆರೆ ಗ್ರಾಮದ ಮುಖ್ಯ ರಸ್ತೆಯಿಂದ ನಾಡ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಬಳಿಕ ಉಪ ತಹಸೀಲ್ದಾರ್‌ ಸುಜಾತ ಹಾಗೂ ಕಂದಾಯ ನಿರೀಕ್ಷಕ ಎಸ್‌. ಪ್ರಕಾಶ್‌ ಅವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆರೆಮಕ್ಕಿ ರಮೇಶ್, ಖಾಂಡ್ಯ ಹೋಬಳಿ ಕೆಲವು ಗ್ರಾಪಂಗಳಲ್ಲಿ ವಸತಿ ರಹಿತರ ಪಟ್ಟಿಯನ್ನು ಒಂದೆಡೆ ತಯಾರಿಸಿಲ್ಲ. ಇನ್ನೊಂದೆಡೆ ಹೆಸರಿರುವ ವಸತಿ ರಹಿತರಿಗೆ ನಿವೇಶನ ನೀಡಲು ಜಾಗ ಗುರುತು ಮಾಡದೇ ಬಹಳಷ್ಟು ಕುಟುಂಬಗಳು ವಸತಿಯಿಲ್ಲದೇ ನಿರ್ಗತಿಕರಾಗಿದ್ದಾರೆ ಎಂದರು.

ಫಾರಂ ನಂ.94ಸಿ ಯಡಿ ಭೂಮಿಗಾಗಿ ಅರ್ಜಿ ಸಲ್ಲಿರುವ ಅನೇಕ ಕುಟುಂಬಗಳಿಂದ ಸರ್ಕಾರ ಸರ್ವೆ ನಡೆಸಿ ಮಂಜೂರಾತಿ ಹಣ ಕಟ್ಟಿಸಿಕೊಂಡಿದೆ. ಆದರೆ, ಹಲವಾರು ಕುಟುಂಬಗಳಿಗೆ ಹಕ್ಕುಪತ್ರ ನೀಡದೇ ಇರುವುದು ಸರ್ಕಾರದ ಅಸಡ್ಡೆ ಧೋರಣೆ ಎತ್ತಿ ತೋರಿಸುತ್ತಿದ್ದು, ಆ ನಿಟ್ಟಿನಲ್ಲಿ ಕೂಡಲೇ ಶಾಸಕರು ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಜೀವನೋಪಾಯಕ್ಕಾಗಿ ಕಾಫಿ, ಅಡಕೆ ಸೇರಿದಂತೆ ಮುಂತಾದ ಬೆಳೆಗಳನ್ನು ಅವಲಂಬಿಸಿರುವ ಬಡ ಕೃಷಿಕರ ಜಮೀನು ಗಳಿಗೆ ಅರಣ್ಯ ಇಲಾಖೆ ಒತ್ತುವರಿ ತೆರವಿನ ಹೆಸರಿನಲ್ಲಿ ಏಕಾಏಕಿ ದಾಳಿ ನಡೆಸಿ ಫಸಲು ಮತ್ತು ಬೆಳೆಗಳನ್ನು ನಾಶ ಗೊಳಿಸುತ್ತಿದೆ. ಇದರಿಂದ ಕೃಷಿಯನ್ನೇ ನಂಬಿರುವ ಬಡ ಕೃಷಿಕರು ಆತಂಕದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಹೇಳಿದರು.ಪ್ರಸ್ತುತ ಆರ್ಥಿಕ ಸ್ಥಿತಿಗತಿನುಸಾರ ಬಿಪಿಎಲ್ ಕಾರ್ಡ್‌ದಾರರಿಗೆ ಆದಾಯದ ಮಾನದಂಡಗಳನ್ನು 1 ಲಕ್ಷದಿಂದ 2 ಲಕ್ಷ ರು.ಗೆ ಹೆಚ್ಚಳ ಮಾಡಬೇಕು. ಹೊಸ ಬಿಪಿಎಲ್ ಕಾರ್ಡ್ ವಿತರಣೆಯಲ್ಲಿ, ತಿದ್ದುಪಡಿ ಆಗುತ್ತಿರುವ ವಿಳಂವನ್ನು ಸರಿಪಡಿಸಿ ತಕ್ಷಣವೇ ಅರ್ಹ ಬಿಪಿಎಲ್ ಕಾರ್ಡ್ ವಿತರಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಜಿ.ರಘು ಮಾತನಾಡಿ, ಈಚೆಗೆ ಸುರಿದ ಅಕಾಲಿಕ ಮಳೆಯಿಂದ ರಸ್ತೆ, ವಿದ್ಯುತ್ ಕಂಬಗಳು ನೆಲಕ್ಕುರುಳಿದ ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ರಸ್ತೆಗಳು ತೀವ್ರ ಹದಗೆಟ್ಟ ಕಾರಣ ಈ ಭಾಗದ ಶಾಲಾ ಮಕ್ಕಳು, ಗ್ರಾಮಸ್ಥರು ಜೀವ ಭಯದಿಂದಲೇ ಪ್ರಯಾಣಿಸುವಂತಾಗಿದ್ದು ಸಂಬಂಧಿಸಿದ ಅಧಿಕಾರಿಗಳು ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಳ್ಳಬೇಕು ಎಂದರು.ರೈತರು ಬೆಳೆ ಫಸಲು ಭಾರೀ ಮಳೆಯಿಂದ ನೆಲಕಚ್ಚಿದ್ದು ಬೆಳೆಸಮೀಕ್ಷೆ ನಡೆಸಿ ಹಾನಿಗೊಳಗಾದ ತೋಟಗಳಿಗೆ ಪರಿಹಾರ ನೀಡಬೇಕು. ಶೃಂಗೇರಿಗೆ ತೆರಳುವ ರಸ್ತೆಗಳು ಬಹುತೇಕ ಗುಂಡಿಗಳಿಂದ ಕೂಡಿದ ಪರಿಣಾಮ ಸಂಚಾರಕ್ಕೆ ತೀವ್ರ ಅಡಚಣೆ ಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗುಂಡಿ ಮುಚ್ಚುವ ಕಾರ್ಯಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಸಿಪಿಐ ಮುಖಂಡರಾದ ವಿಜಯ್‌ಕುಮಾರ್, ಕಳಸಪ್ಪ, ಜಾರ್ಜ್ ಆಗಸ್ಟೀನ್ ಹಾಗೂ ಸ್ಥಳೀಯ ಗ್ರಾಮಸ್ಥರು ಪಾಲ್ಗೊಂಡಿದ್ದರು. 2 ಕೆಸಿಕೆಎಂ 5ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ನಾಡ ಕಚೇರಿ ಎದುರು ಸಿಪಿಐ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.