ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ಇಂಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಹಾಗೂ ಸಂವಿಧಾನದ ವಿಧಿ 371(ಜೆ) ಗೆ ಸೇರ್ಪಡೆಗೆ ಒತ್ತಾಯಿಸಿ ಸಿ.ವಿ.ರಾಮನ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಹಾಗೂ ತೇಜಸ್ ಸಾಮಾಜಿಕ ಸಂಘಟನೆಯ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ, ಎಸಿ ಅಬೀದ್ ಗದ್ಯಾಳ ಅವರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.ವಿಜಯಪುರ ಜಿಲ್ಲೆಯಲ್ಲಿ ಇಂಡಿ ತೀರಾ ಹಿಂದುಳಿದ ಪ್ರದೇಶವಾಗಿದ್ದು, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಔದ್ಯೋಗಿಕವಾಗಿ ಪ್ರಗತಿ ಸಾಧಿಸಬೇಕಾದರೆ ಆಡಳಿತಾತ್ಮಕ ದೃಷ್ಟಿಯಿಂದ ಇಂಡಿ ಪ್ರತ್ಯೇಕ ಜಿಲ್ಲೆಯ ರಚನೆ ಅವಶ್ಯಕತೆ ಇದೆ. ಇದಕ್ಕೆ ಪೂರಕ ಅಂಶಗಳು ಸಾಕಷ್ಟಿವೆ. ಪದವಿ ಕಾಲೇಜುಗಳು, ತಾಂತ್ರಿಕ, ಡಿಪ್ಲೊಮಾ, ಪ್ಯಾರಾ ಮೆಡಿಕಲ್, ನರ್ಸಿಂಗ್ ಹಾಗೂ ಸ್ನಾತಕೊತ್ತರ ಪಿಜಿ ಕಾಲೇಜುಗಳು ಈ ಭಾಗದಲ್ಲಿ ಇಲ್ಲದೇ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತಗೊಂಡಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಇರುವಂತೆ, ಉಪ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ, ಈಶಾನ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 5 ತಾಲೂಕುಗಳನ್ನು ಒಳಗೊಂಡ ಪ್ರತ್ಯೇಕ ಕಚೇರಿಯಲ್ಲಿ ಸ್ಥಾಪಿಸುವುದು, ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಆರಂಭಿಸಿ, ಇಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಬೇಕು ಹಾಗೂ ಇಂಡಿಯನ್ನು 371ನೇ ಜೆ ವಿಧಿಗೆ ಸೇರ್ಪಡೆ ಮಾಡಬೇಕು ಎಂದು ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ರಾಜ್ಯದ ಗಡಿ ಭಾಗದಲ್ಲಿರುವ ಇಂಡಿ ಪಟ್ಟಣವು 50 ಸಾವಿರ ಜನಸಂಖ್ಯೆ ಹೊಂದಿರುವ ಹಾಗೂ ಜಿಲ್ಲೆಯಲ್ಲಿಯೇ ಎರಡನೇ ದೊಡ್ಡ ಪಟ್ಟಣವಾಗಿದೆ. ಜಿಲ್ಲೆಯಲ್ಲಿ ಸದ್ಯ 13 ಕಂದಾಯ ತಾಲೂಕುಗಳಿದ್ದು, ಭೌಗೋಳಿಕವಾಗಿ ಅತ್ಯಂತ ದೊಡ್ಡದಾಗಿದೆ. ಚಡಚಣ, ಇಂಡಿ, ಆಲಮೇಲ, ಸಿಂದಗಿ ಮತ್ತು ದೇವರ ಹಿಪ್ಪರಗಿ ತಾಲ್ಲೂಕುಗಳ ಸಾರ್ವಜನಿಕರು ದೂರದ ವಿಜಯಪುರ ಜಿಲ್ಲಾಧಿಕಾರಿಗಳ ಕಚೇರಿಗೆ ಕಾರ್ಯನಿಮಿತ್ತ ಸಂಚರಿಸುವುದು ಕಷ್ಟಕರವಾಗಿದೆ. ಇದರಿಂದ ಸುಗಮ ಆಡಳಿತಕ್ಕಾಗಿ ಹಾಗೂ ಅಭಿವೃದ್ಧಿಯ ಹಿತದೃಷ್ಟಿಯಿಂದ ದೊಡ್ಡ ಜಿಲ್ಲೆಯನ್ನು ಪ್ರತ್ಯೇಕಿಸಿ ಹೊಸದಾಗಿ ಇಂಡಿ ಜಿಲ್ಲೆಯನ್ನು ರಚನೆ ಮಾಡುವುದು ಅತೀ ಅವಶ್ಯಕವಾಗಿದೆ. ಭೀಮಾ ನದಿತೀರದ ಚಡಚಣ, ಇಂಡಿ, ಆಲಮೇಲ, ಸಿಂದಗಿ ಮತ್ತು ದೇವರಹಿಪ್ಪರಗಿ ಸೇರಿದಂತೆ ಐದು ತಾಲ್ಲೂಕುಗಳನ್ನು ಒಳಗೊಂಡು ಇಂಡಿ ಜಿಲ್ಲೆಯನ್ನಾಗಿ ರಚಿಸಿ ಆದೇಶಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಎಸ್.ಜಿ.ಕಾಮಗೊಂಡ, ಸನ್ಮತಿ ಹಳ್ಳಿ, ಶೈಲೇಶ ಬಿಳಗಿ, ಮಹಾವೀರ ವರ್ಧಮಾನ ಹಾಗೂ ವಿದ್ಯಾರ್ಥಿಗಳಾದ ಕಾವೇರಿ ಬರಡೋಲ, ಐಶ್ವರ್ಯಾ ಹಿಳ್ಳಿ, ರಾಧಿಕಾ ಗಂಗಣ್ಣನವರ, ಮಂಜುನಾಥ ಬಾಬಳಗಾಂವ, ಸಂದೀಪ ಸಾತಿಹಾಳ ಹಾಗೂ ಹೋರಾಟ ಸಮಿತಿಯ ಗೌರವಾಧ್ಯಕ್ಷ ಎ.ಸಿ.ಪಾಟೀಲ, ಅಧ್ಯಕ್ಷ ಮಂಜುನಾಥ ಕಾಮಗೊಂಡ, ಕಾರ್ಯದರ್ಶಿ ಸಂತೋಷ ಪರಸೆನವರ, ಇತರರು ಈ ಸಂದರ್ಭದಲ್ಲಿ ಇದ್ದರು.