ಸಾರಾಂಶ
ಕ್ಷೇತ್ರದ ಅಪಪ್ರಚಾರ ಮಾಡುವವರ ವಿರುದ್ಧ ಸೂಕ್ತ ತನಿಖೆಗೆ ಒತ್ತಾಯಕನ್ನಡಪ್ರಭ ವಾರ್ತೆ ಮಡಿಕೇರಿ
ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಯಿತು.ನಗರದ ಗಾಂಧಿ ಮೈದಾನದಿಂದ ಮೆರವಣಿಗೆ ನಡೆಸಿ, ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಮಡಿಕೇರಿ ತಾಲೂಕು ಸಂಚಾಲಕ ಧನಂಜಯ್ ಅಗೋಳಿಕಜೆ ಮಾತನಾಡಿ, ಈ ಹಿಂದೆಯಿಂದಲೂ ಧಾರ್ಮಿಕ ಕೇಂದ್ರಗಳ ಮೇಲೆ ಬೌದ್ಧಿಕ ದಾಳಿಯನ್ನು ಮಾಡಲಾಗುತ್ತಿದೆ. ಹತ್ತಾರು ವರ್ಷಗಳಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದರು. ಪ್ರಸ್ತುತ ವಿಪರೀತಕ್ಕೆ ಹೋಗಿದ್ದು, ಧಾರ್ಮಿಕ ನಂಬಿಕೆಯುಳ್ಳ ಪುಣ್ಯಕ್ಷೇತ್ರದ ಮೇಲೆ ಗಿರೀಶ್ ಮಟ್ಟೆಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ, ಸಂತೋಷ್ ಶೆಟ್ಟಿ ಸೇರಿದಂತೆ ಇತರರು ಸೇರಿಕೊಂಡು ದೇವಾಲಯಕ್ಕೆ ಮತ್ತು ವಿರೇಂದ್ರ ಹೆಗ್ಗಡೆಯವರಿಗೆ ಕಳಂಕ ತರುವ ಕೀಳುಮಟ್ಟದ ಭಾಷೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುತ್ತಿದ್ದಾರೆ. ಇಂಥವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಾಬೇಕು ಎಂದರು.ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿಯೋರ್ವ ತೋರಿಸಿದ ೧೩ ಜಾಗಗಳಲ್ಲಿ ಮಣ್ಣನ್ನು ಅಗೆಯಲಾಗಿದೆ. ಈಗ ಅಲ್ಲಿನ ಡ್ಯಾಂ ಸಮೀಪ ತೋರಿಸಿ ಇಲ್ಲಿ ಅಗೆಯಬೇಕು ಎಂದು ಹೇಳುತ್ತಾನೆ. ಈತ ಮಾನಸಿಕ ಅಸ್ವಸ್ಥ ಆಗಿರಬೇಕು ಎಂದ ಅವರು, ಇದನ್ನು ನಂಬುತ್ತಿರುವುದು ನಮ್ಮ ದುರಂತ. ಎಸ್‌ಐಟಿ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಜನರಮುಂದೆ ನಗಪಾಟಲಿಗೆ ಒಳಗಾಗುತ್ತದೆ ಎಂದು ಹೇಳಿದರು.
ಸುಳ್ಳು ಆರೋಪ ಮಾಡಲು ಯಾರು ಪ್ರಚೋದನೆ ಮಾಡುತ್ತಿದಾರೆ ಅವರನ್ನು ತನಿಖೆಗೊಳಪಡಿಸಬೇಕು. ಅಲ್ಲದೇ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಹತ್ತಿರ ಮೊಬೈಲ್‌ನಲ್ಲಿ ಸಾಕ್ಷ್ಯಾಧಾರಗಳು ಇವೆ ಎಂದು ಘಂಟಾಘೋಷವಾಗಿ ಕೆಲವು ವ್ಯಕ್ತಿಗಳು ಸಾರುತ್ತಿದ್ದಾರೆ. ಇವರ ಮೊಬೈಲ್, ಮನೆ ಹಾಗೂ ಕಚೇರಿಗಳನ್ನು ತನಿಖೆ ಮಾಡಬೇಕು. ಸತ್ಯಾಂಶವನ್ನು ಬಯಲಿಗೆ ಎಳೆಯಲು ಈಗಿರುವ ತನಿಖಾ ತಂಡದಿಂದ(ಎಸ್‌ಐಟಿ) ಅಥವಾ ಮತ್ತೊಂದು ತನಿಖಾ ತಂಡವನ್ನು ರಚಿಸಿ ತನಿಖೆಯನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಮತ್ತು ಧರ್ಮಸ್ಥಳ ಭಕ್ತಾಭಿಮಾನಿ ವೇದಿಕೆ ಜಿಲ್ಲಾ ಸಂಚಾಲಕ ಎ.ಟಿ.ರಂಗಸ್ವಾಮಿ ಮಾತನಾಡಿ, ಧರ್ಮಸ್ಥಳ ಭಾರತ ದೇಶದ ಶ್ರದ್ಧಾ ಕೇಂದ್ರವಾಗಿದೆ. ಎಲ್ಲ ಜನಾಂಗದ ಶಾಂತಿಯ ತೋಟ ಎಂದರೆ ಧರ್ಮಸ್ಥಳ. ಇಲ್ಲಿ ಮಾತ್ರ ಒಗ್ಗಟ್ಟನ್ನು ಕಾಣಲು ಸಾಧ್ಯ. ಆದರೆ ಇಂದು ಕೆಲವು ಪೇಮೆಂಟ್ ಗಿರಾಕಿಗಳು ಧರ್ಮಸ್ಥಳಕ್ಕೆ ಧಕ್ಕೆ ತರುವಂತ ಕೆಲಸಕ್ಕೆ ಕೈ ಹಾಕಿದ್ದಾರೆ. ಇಂತಹ ವ್ಯಕ್ತಿಗಳನ್ನು ಬಂಧಿಸುವಂತಾಗಬೇಕು ಎಂದರು.
ತನಿಖೆ ನಡೆದು ಮಂಜುನಾಥ ಸ್ವಾಮಿ ಮತ್ತು ಡಾ.ಡಿ.ವಿರೇಂದ್ರ ಹೆಗ್ಗಡೆಯವರು ದೋಷ ಮುಕ್ತರಾಗಬೇಕೆಂದು ಆಗ್ರಹಿಸಿ ರಾಜ್ಯದಲ್ಲಿ ಎಲ್ಲೆಡೆ ಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ನಂತರ ಉಜಿರೆಯಲ್ಲಿ ಸಮಾವೇಶಗೊಂಡು ಉಜಿರೆಯಿಂದ ಧರ್ಮಸ್ಥಳದ ವರೆಗೆ ಪಾದಯಾತ್ರೆ ನಡೆಸಲಾಗುತ್ತದೆ. ಜತೆಗೆ ಹೋರಾಟ ಕೂಡ ಮಾಡುತ್ತೇವೆ ಎಂದು ಹೇಳಿದರು.ಈ ಸಂದರ್ಭ ಧರ್ಮಸ್ಥಳ ಕುರಿತು ಅಪಪ್ರಚಾರ ಮತ್ತು ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿರುವವರ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿ ಪ್ರತಿಭಟನಾ ನಿರತರು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ದೈವ ನರ್ತಕರ ಸಂಘದ ಅಧ್ಯಕ್ಷ ರವಿ ಮೊಗೇರ, ಹಿರಿಯರಾದ ಕೆ.ಎಸ್.ದೇವಯ್ಯ, ದೀರ್ಘಕೇಶಿ ಶಿವಣ್ಣ, ಸಂಘಟಕರಾದ ಕೆ.ಕೆ.ಮಹೇಶ್ ಕುಮಾರ್, ರಮೇಶ್ ಹೊಳ್ಳ ಸೇರಿದಂತೆ ಜಿಲ್ಲೆಯ ವಿವಿಧೆಡೆಯಿಂದ ೨೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಧರ್ಮಸ್ಥಳ ಭಕ್ತರು ಆಗಮಿಸಿದ್ದರು.