ಸರ್ಕಾರಿ ಪಿಯು ಕಾಲೇಜಿನಿಂದ ಹೊರಟ ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಉಪನ್ಯಾಸಕನ ವಿರುದ್ಧ ಘೋಷಣೆ ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿವಾಜಿ ಮಹಾರಾಜ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು ರಸ್ತೆತಡೆ ನಡೆಸಿದರು.
ನರಗುಂದ: ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಜತೆ ಚೆಲ್ಲಾಟವಾಡುತ್ತಿರುವ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ಮನ್ಸೂರ್ ಅಲಿ ಹೊಸಪೇಟ ಖಾಜಿ ಅವರನ್ನು ಅಮಾನತು ಮಾಡುವಂತೆ ಆಗ್ರಹಿಸಿ ಸೋಮವಾರ ಸರ್ಕಾರಿ ಪಿಯು ಕಾಲೇಜು ವಿದ್ಯಾರ್ಥಿಗಳು ಹಾಗೂ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸರ್ಕಾರಿ ಪಿಯು ಕಾಲೇಜಿನಿಂದ ಹೊರಟ ನೂರಾರು ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಉಪನ್ಯಾಸಕನ ವಿರುದ್ಧ ಘೋಷಣೆ ಕೂಗುತ್ತಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಶಿವಾಜಿ ಮಹಾರಾಜ್ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ನಿರ್ಮಿಸಿದ ವಿದ್ಯಾರ್ಥಿಗಳು ರಸ್ತೆತಡೆ ನಡೆಸಿದರು. ನಂತರ ಎರಡು ಕಿಮೀ ಅಂತರದಲ್ಲಿರುವ ತಹಸೀಲ್ದಾರ್ ಕಚೇರಿಗೆ ಕಾಲ್ನಡಿಗೆಯಲ್ಲಿ ತೆರಳಿ ಉಪ ತಹಸೀಲ್ದಾರ್ ಪರಶುರಾಮ ಕಲಾಲ ಅವರಿಗೆ ಮನವಿ ಅರ್ಪಿಸಿದರು.ಎಬಿವಿಪಿ ತಾಲೂಕು ಸಹ ಸಂಚಾಲಕ ಮಲ್ಲನಗೌಡ ಹಿರೇಗೌಡ್ರ ಮಾತನಾಡಿ, ವಿದ್ಯಾರ್ಥಿಗಳಿಗೆ ಅಶ್ಲೀಲ ಪದ ಬಳಸುವುದು, ಸಮಯಪ್ರಜ್ಞೆ ಇಲ್ಲದೇ ಕಾಲೇಜಿಗೆ ಬರುವುದು, ಪ್ರಶ್ನೆ ಮಾಡಿದ ಪ್ರಾಂಶುಪಾಲರಿಗೆ ಅಸಹ್ಯ ರೀತಿಯಲ್ಲಿ ಮಾತನಾಡುತ್ತಾ ಅವರ ಘನತೆ, ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ.
ಅವರು ಹೇಳುವ ಪಾಠ ಯಾರಿಗೂ ಅರ್ಥವಾಗಲ್ಲ. ಇಂಥದ್ದರಲ್ಲಿ ಕಾಲೇಜಿಗೆ ಚಕ್ಕರ್ ಹೊಡೆಯುವುದು ಅವರ ಖಯ್ಯಾಲಿಯಾಗಿದೆ. ವಿದ್ಯಾರ್ಥಿನಿಯರೊಂದಿಗೆ ಅವರ ವರ್ತನೆ ಸರಿಯಿಲ್ಲ. ವಿದ್ಯಾರ್ಥಿನಿಯರು ಕಾಲೇಜಿಗೆ ಬರಲು ಭಯಪಡುತ್ತಿದ್ದಾರೆ. ಮನ್ಸೂರ್ ಅಲಿ ಖಾಜಿ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ನಗರ ಕಾರ್ಯದರ್ಶಿ ಅಭಿಷೇಕ ನವಲಗುಂದ ಮಾತನಾಡಿ, ಪಾಠ ಹೇಳದ ಉಪನ್ಯಾಸಕನನ್ನು ವಿದ್ಯಾರ್ಥಿನಿಯರು ಪ್ರಶ್ನೆ ಮಾಡಿದರೆ, ಹಣೆಗೆ ಹಚ್ಚುವ ಕುಂಕುಮ, ಹೂವು, ಬಳೆ, ಕಾಲ್ಗೆಜ್ಜೆ ಇವುಗಳ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡುತ್ತಾರೆ. ಈ ಬಗ್ಗೆ ಕಳೆದ ಆ. 11ರಂದು ಶಾಸಕ ಸಿ. ಸಿ. ಪಾಟೀಲ ಅವರ ಮನೆಗೆ ತೆರಳಿದ ನೂರಾರು ವಿದ್ಯಾರ್ಥಿಗಳು ಉಪನ್ಯಾಸಕನ ವಿರುದ್ಧ ಆರೋಪ ಮಾಡುತ್ತಾ ಶೀಘ್ರ ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಶಾಸಕರು ಕೂಡ ವಿದ್ಯಾರ್ಥಿಗಳಿಗೆ ಸ್ಪಂದನೆ ಮಾಡಿ ಅವರು ಆಗಿಂದಾಗಲೇ ಡಿಡಿಪಿಯು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು, ಜಿಪಂ ಸಿಇಒ ಅವರೆಲ್ಲರಿಗೂ ದೂರವಾಣಿ ಕರೆ ಮಾಡಿ ಕ್ರಮಕ್ಕಾಗಿ ತಿಳಿಸಿದ್ದರು. ಮರುದಿನ ನರಗುಂದ ಪಿಯು ಕಾಲೇಜಗೆ ಭೇಟಿ ನೀಡಿದ ಡಿಡಿಪಿಯು ಅವರು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.ಆದರೆ 20 ದಿನ ಗತಿಸಿದರೂ ಉಪನ್ಯಾಸಕನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ರೊಚ್ಚಿಗೆದ್ದ ವಿದ್ಯಾರ್ಥಿಗಳು ಮತ್ತೆ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ. ವಿದ್ಯಾರ್ಥಿಗಳ ಶಕ್ತಿ ಪರೀಕ್ಷೆ ಮಾಡಬೇಡಿ. ತಾಳ್ಮೆ ಕಳೆದುಕೊಳ್ಳುವ ಮೊದಲೇ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಉಪನ್ಯಾಸಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದರು.
ಎಬಿವಿಪಿ ನಗರ ಕಾರ್ಯದರ್ಶಿ ಅಭಿಷೇಕ ನವಲಗುಂದ, ಮನೋಜ್ ನಾಗಠಾಣ, ಮಲ್ಲನಗೌಡ ಹಿರೇಗೌಡ್ರ, ಆಕಾಶ ಕಲಾಲ, ರುದ್ರೇಶ ಕೊಣ್ಣೂರ, ಅನ್ವರ್, ವಿದ್ಯಾರ್ಥಿಗಳಾದ ಕವಿತಾ ಮಾಳವಾಡ, ಸ್ನೇಹಾ ಮಾದರ, ಅಫಿಯಾ ಕೊಣ್ಣೂರ, ಸುಮಿತ್ರಾ, ಭಾಗ್ಯ, ಲಕ್ಷ್ಮಿ, ಸೌಜನ್ಯ, ಸ್ವಾತಿ, ಸುಪ್ರಿತಾ, ಹಣಮಂತ, ಅಕ್ಷಯ, ರಾಹುಲ್, ಆಕಾಶ ಹಾಗೂ ನೂರಾರು ವಿದ್ಯಾರ್ಥಿಗಳಿದ್ದರು.