ಸಾರಾಂಶ
ಕನ್ನಡಪ್ರಭ ವಾರ್ತೆ ತರೀಕೆರೆ
ತಾಲೂಕು ಭಾರತೀಯ ಜನತಾ ಪಾರ್ಟಿ, ತಾಲೂಕು ಜೆಡಿಎಸ್ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಲಾಯಿತು.ಪಕ್ಷದ ಕಾರ್ಯಕರ್ತರು ಪಟ್ಟಣದ ಮಹಾತ್ಮಾ ಗಾಂಧಿ ಸರ್ಕಲ್‌ನಿಂದ ಪುರಸಭೆ ವರೆಗೆ ದ್ವಿಚಕ್ರ ವಾಹನವನ್ನು ಎತ್ತಿನಗಾಡಿಯಲ್ಲಿ ಇರಿಸಿ ಮೆರವಣಿಗೆ ನೆಡೆಸಿ, ಮಾನವ ಸರಪಳಿ ನಿರ್ಮಿಸಿ, ಟೈರ್‌ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ನಂತರ ನಡೆದ ಸಭೆಯಲ್ಲಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ತೈಲ ಬೆಲೆ ಏರಿಸಿ ರೈತರ ಮೇಲೆ ಬರೆ ಎಳೆದಿದೆ. ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ, ಸಾಗಾಣಿಕೆ ಹೀಗೆ ಎಲ್ಲದರ ಬೆಲೆಯೂ ಹೆಚ್ಚುತ್ತದೆ. ಭ್ರಷ್ಟಾಚಾರದ, ರೈತ ವಿರೋಧಿ ಸರ್ಕಾರವಾಗಿದೆ. ಮಟ್ಕಾ, ಅಂದರ್ ಬಾಹರ್ ಹೆಚ್ಚಾಗಿದೆ, ಪೊಲೀಸ್ ಇಲಾಖೆ ಮೌನವಾಗಿದೆ ಎಂದು ಹೇಳಿದರು.
ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಮೂಲಕ ಮೊಣಕೈಗೆ ತುಪ್ಪ ಹಚ್ಚಿದೆ. ಇದು ಜನವಿರೋಧಿ ಸರ್ಕಾರ ತೊಲಗಬೇಕು, ಜನರ ದೈನಂದಿನ ಜೀವನ ದುಸ್ತರ ಗೊಳಿಸಿದೆ, ವಾಲ್ಮೀಕಿ ನಿಗಮದ ಹಣ ನುಂಗಿಹಾಕಿದೆ ಎಂದು ಆರೋಪಿಸಿದರು.ಜೆಡಿಎಸ್ ತಾಲೂಕು ಅಧ್ಯಕ್ಷರು ಎಂ.ನರೇಂದ್ರ ಮಾತನಾಡಿ, ಪೆಟ್ರೋಲ್, ಡೀಸಲ್ ಬೆಲೆ ಏರಿಸಿ ಅನ್ಯಾಯವೆಸಗುತ್ತಿದ್ದು ಬೆಲೆ ಏರಿಕೆ ಹಿಂದಕ್ಕೆ ಪಡೆಯಬೇಕು ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷರು, ಹಾಲಿ ನಿರ್ದೇಶಕರು ಟಿ.ಎಚ್.ಎಲ್.ರಮೇಶ್ ಮಾತನಾಡಿ ಸರ್ಕಾರ ಪೆಟ್ರೋಲ್ ಡೀಸಲ್ ಬೆಲೆ ಏರಿಸಿದೆ, ಅಗತ್ಯ ವಸ್ತುಗಳ ಬೆಲೆಯನ್ನು ಏರಿಸಿದೆ, ತಾಲೂಕು ಆಡಳಿತ ನಿಷ್ಕ್ರಿಯವಾಗಿದೆ. ಜನರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.ಬಿಜೆಪಿ ತಾಲೂಕು ಅಧ್ಯಕ್ಷರು ಪ್ರತಾಪ್ ಗರಗದಹಳ್ಳಿ, ಜಿಪಂ ಮಾಜಿ ಅಧ್ಯಕ್ಷರು ಕೆ.ಆರ್.ದೃವಕುಮಾರ್, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷರು ಶಂಭೈನೂರು ಆನಂದಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರು ಕೆ.ಆರ್.ಆನಂದಪ್ಪ ಮತ್ತಿತರರು ಮಾತನಾಡಿದರು.
ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್, ರೈತ ಮೋರ್ಚಾ ತಾಲೂಕು ಅಧ್ಯಕ್ಷರು ಓಂಕಾರಮೂರ್ತಿ, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚರಣ್ ಕುಮಾರ್, ಮುಖಂಡರಾದ ಸಂಜೀವ್ ಕುಮಾರ್, ಶಿವಯೋಗಿ, ಶ್ರೇಯಸ್, ಬಿಜೆಪಿ ಮತ್ತು ಜೆ.ಡಿ.ಎಸ್. ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.