ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಡಾ. ಮಂತರ್ ಗೌಡ ಕಳೆದ ಎರಡೂವರೆ ವರ್ಷದಲ್ಲಿ ನೂರಾರು ಕೋಟಿ ರು.ಗಳ ಅನುದಾನಗಳನ್ನು ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ತಿಳಿಸಿದರು.ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಶಾಸಕ ಅಪ್ಪಚ್ಚು ರಂಜನ್ ನೀಡಿರುವ ಹೇಳಿಕೆಯನ್ನು ಖಂಡಿಸಿದರು. ನೂತನ ಶಾಸಕರಾದ ಅಲ್ಪ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿ, ಸೇತುವೆಗಳ ನಿರ್ಮಾಣ, ಸುಗ್ಗಿಕಟ್ಟೆಗಳ ಅಭಿವೃದ್ಧಿ, ಹಾರಂಗಿ ಕಾಲುವೆಗಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳು ಸೇರಿದಂತೆ ಅಗತ್ಯ ಕಾಮಗಾರಿಗಳಿಗೆ ಮಂತರ್ ಗೌಡ ಅವರು ಅನುದಾನ ಒದಗಿಸುತ್ತಿದ್ದಾರೆ. ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಲಾಗಿತ್ತಾದರೂ ಮಳೆ ಹಿನ್ನೆಲೆಯಲ್ಲಿ ಕಾಮಗಾರಿ ಕೈಗೊಂಡಿರಲಿಲ್ಲ. ಇದನ್ನೇ ದೊಡ್ಡ ವಿಚಾರ ಎನ್ನುವಂತೆ ಬಿಂಬಿಸಿ ಮಾಜಿ ಶಾಸಕ ಅಪ್ಪಚ್ಚುರಂಜನ್ ನೇತೃತ್ವದಲ್ಲಿ ರಸ್ತೆ ಗುಂಡಿ ಮುಚ್ಚುವ ಹೆಸರಿನಲ್ಲಿ ಪ್ರತಿಭಟನೆ ನಡೆಸಿರುವುದು ಹಾಸ್ಯಾಸ್ಪದ ಎಂದರು.
ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ:ಮಳೆಗಾಲ ಹಿನ್ನೆಲೆಯಲ್ಲಿ ಡಾಮರೀಕರಣ ಅಸಾಧ್ಯ ಗುಣಮಟ್ಟದ ಕಾಮಗಾರಿ ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರಸ್ತೆ ಕಾಮಗಾರಿ ಸದ್ಯದಲ್ಲಿ ನಡೆಯಲಿದೆ ಎಂದು ಹೇಳಿದರು. ಕೂಡಿಗೆ ಕುಶಾಲನಗರ ರಸ್ತೆ ಕಾಮಗಾರಿ 4.5 ಕೋಟಿ ರು. ವೆಚ್ಚದಲ್ಲಿ ನಡೆಯಲಿದ್ದು ಟೆಂಡರ್ ಪ್ರಕ್ರಿಯೆ ಆಗಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದು ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಲ್ಲಾ ಯುವ ಕಾಂಗ್ರೆಸ್ ನ ಹಕೀಂ, ಕುಡ ನಿರ್ದೇಶಕರಾದ ಸಜಿ, ಪುರಸಭೆ ಸದಸ್ಯ ಜಿ.ಬಿ.ಜಗದೀಶ್, ಪ್ರಮುಖರಾದ ರಾಜಶೇಖರ್, ಚಿರಂಜೀವಿ, ನಾಗರಾಜು, ರಮಣಿ, ಆಜೀಜ್ ಮತ್ತಿತರರು ಇದ್ದರು.