ಸಾರಾಂಶ
ಹೊಸಪೇಟೆ: ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲೆ ಹೊರಗುತ್ತಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ವಾರ್ಷಿಕ ಅನುದಾನ ₹೧೦ ಕೋಟಿ ಬಿಡುಗಡೆ ಮಾಡಲು ಒತ್ತಾಯಿಸಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ವತಿಯಿಂದ ಡಿಸಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ರವಾನಿಸಲಾಯಿತು.
ಕಳೆದ 20 ವರ್ಷಗಳಿಂದ ಕಡಿಮೆ ಸಂಬಳಕ್ಕೆ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ನಿಲಯಗಳಲ್ಲಿ ಹೊರಗುತ್ತಿಗೆ ನೌಕರರು ದುಡಿಯುತ್ತಿದ್ದಾರೆ. ಈ ನೌಕರರು ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಡಿಯಲ್ಲಿ ಬರುವ ಹಾಸ್ಟೆಲ್‌ಗಳಲ್ಲಿ ಅಡುಗೆಯವರಾಗಿ, ಸ್ವಚ್ಛತಾಗಾರರಾಗಿ ಕಾವಲುಗಾರರಾಗಿ, ಡಿ. ಗ್ರೂಪ್, ಅಟೆಂಡರ್ಸ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಯಾವುದೇ ಕೆಲಸದ ಭದ್ರತೆ ಇಲ್ಲದೆ ನಿರಂತರವಾಗಿ ಕೆಲಸ ಮಾಡುತ್ತ ಬಂದಿದ್ದಾರೆ. ಅವರ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಹಾಗಾಗಿ ೧೮.೧೨. ೨೦೨೪ರಂದು ಬೆಳಗಾವಿಯ ಸುವರ್ಣ ಸೌಧದ ಎದುರು ಸರ್ಕಾರಿ ಹಾಸ್ಟೆಲ್ ನೌಕರರ ಈ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅನಿರ್ದಿಷ್ಠಿತ ಮುಷ್ಕರ ನಡೆಸಲು ನಿರ್ಧರಿಸಲಾಗಿದೆ. ಹಾಗಾಗಿ, ಡಿ. 18ರಂದು ಬೆಳಗಾವಿ ಸುವರ್ಣಸೌಧದ ಎದುರು ಧರಣಿ ನಡೆಸಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು.ಹಂಪಿ ಕನ್ನಡ ವಿಶ್ವವಿದ್ಯಾಲಯ ಗಂಭೀರವಾದ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. 32 ವರ್ಷಗಳ ಹಿಂದೆ ಸ್ಥಾಪನೆಗೊಂಡ ಕನ್ನಡ ವಿಶ್ವವಿದ್ಯಾಲಯ ಸಂಶೋಧನೆ ಮತ್ತು ಕ್ರಿಯಾಶೀಲ ಕಾರ್ಯಕ್ರಮಗಳ ಮೂಲಕ ರಾಜ್ಯದ, ದೇಶದ, ಹಾಗೂ ಜಗತ್ತಿನ ಗಮನ ಸೆಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜ್ಯ ಸರ್ಕಾರಗಳಿಂದ ಬರಬೇಕಾದ ವಾರ್ಷಿಕ ಅನುದಾನ ಬಾರದೆ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಅಲ್ಲಿರುವ ಹೊರಗುತ್ತಿಗೆ, ದಿನಗೂಲಿ, ಅರೆಕಾಲಿಕ ಸಿಬ್ಬಂದಿಗೆ ವರ್ಷಗಟ್ಟಲೆ ವೇತನ ಪಾವತಿ ಮಾಡಿಲ್ಲ. ಹಾಗೆ ಆಡಳಿತಾತ್ಮಕ ಮೂಲಕ ಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದೆ ನರಳುತಿದೆ. ಜಗತ್ತಿನಲ್ಲಿ, ದೇಶದಲ್ಲಿ, ರಾಜ್ಯದಲ್ಲಿ ಇರುವುದು ಒಂದೇ ವಿಶ್ವವಿದ್ಯಾಲಯ. ಅದು ಹಂಪಿ ಕನ್ನಡ ವಿಶ್ವವಿದ್ಯಾಲಯ. ಕನ್ನಡ ನಾಡಿನ, ಕನ್ನಡಿಗರ ಅಸ್ಮಿತೆಯಾಗಿರುವ ಕನ್ನಡ ವಿಶ್ವವಿದ್ಯಾಲಯವನ್ನು ಉಳಿಸಲು ಮತ್ತು ಸಂರಕ್ಷಿಸಲು ತಕ್ಷಣ ₹10 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಬೇಡಿಕೆಗಳು:ಹಾಸ್ಟೆಲ್ ಗುತ್ತಿಗೆ ನೌಕರರಿಗೆ ನೇರವಾಗಿ ಇಲಾಖೆಯಿಂದ ವೇತನ ಕೊಡಬೇಕು. ನಿವೃತ್ತಿ ವರೆಗೆ ಸೇವಾ ಭದ್ರತೆ ಕೊಡಬೇಕು. ಹತ್ತು ವರ್ಷ ಸೇವೆ ಸಲ್ಲಿಸಿರುವ ಹೊರಗುತ್ತಿಗೆ ಸಿಬ್ಬಂದಿಯನ್ನು ದಿನಗೂಲಿ ನೌಕರರ ಕ್ಷೇಮಾಭಿವೃದ್ಧಿ ಅಧಿನಿಯಮದಡಿ ತರಬೇಕು. ಕನಿಷ್ಠ ವೇತನ ಮಾಸಿಕ ₹31 ಸಾವಿರ ಕೊಡಬೇಕು. ಬೀದರ್ ಜಿಲ್ಲೆಯ ಮಾದರಿಯಲ್ಲಿ ಜಿಲ್ಲಾ ಕಾರ್ಮಿಕ ಸೇವೆಗಳ ವಿವಿಧೊದ್ದೇಶ ಸಹಕಾರ ಸಂಘ (ನಿ)ವನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಬೇಕು. ಕಾರ್ಮಿಕ ಕಾನೂನು ಪ್ರಕಾರ ವಾರದ ರಜೆ ಕೊಡಬೇಕು. ಕೆಲಸದ ಸಮಯ ನಿಗದಿ ಆಗಬೇಕು ಎಂದು ಆಗ್ರಹಿಸಿದರು.
ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐಡಿ ಕಾರ್ಡ್, ಸರ್ವೀಸ್ ಸರ್ಟಿಫಿಕೇಟ್, ಇ.ಎಸ್.ಐ. ಮತ್ತು ಪಿ.ಎಫ್. ಹಣ ತುಂಬಿದ ರಶೀದಿ ಕೊಡಬೇಕು. ಪ್ರತಿ ತಿಂಗಳು ಐದನೇ ತಾರೀಖು ಸಂಬಳ ಕೊಡಬೇಕು. ಬಾಕಿ ಇರುವ ಸಂಬಳವನ್ನು ತಕ್ಷಣ ಪಾವತಿ ಮಾಡಬೇಕು. ಸೇರಿ ಇತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.ಮುಖಂಡರಾದ ಮರಡಿ ಜಂಬಯ್ಯ ನಾಯಕ, ಬಿ. ರಮೇಶ್ ಕುಮಾರ್, ನಾಗು ನಾಯ್ಕ, ಬಿಸಾಟಿ ತಾಯಪ್ಪ ನಾಯಕ, ಸೂರ್ಯನಾರಾಯಣ, ಶರಣಪ್ಪ, ತಿಮ್ಮಣ್ಣ, ದೇವಕ್ಕ,ಶಂಕ್ರಮ್ಮ, ಪರಶುರಾಮ, ಎಂ. ಸೀತಮ್ಮ, ಪ್ರಕಾಶ್, ತಿಪ್ಪಯ್ಯ, ಮಲ್ಲಮ್ಮ, ಪಾರ್ವತಿ ಮತ್ತಿತರರಿದ್ದರು.
;Resize=(128,128))
;Resize=(128,128))