ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜನರ ಆರೋಗ್ಯ ರಕ್ಷಣೆಯಲ್ಲಿ ತೊಡಗಿರುವ ಗ್ರಾಮೀಣ ವೈದ್ಯರಿಗೆ ಆಂಧ್ರ ಪ್ರದೇಶ ರಾಜ್ಯದ ಮಾದರಿಯಲ್ಲಿ ಪಿಎಂಪಿ ಪ್ರಮಾಣ ಪತ್ರ ನೀಡುವ ಮೂಲಕ ಈ ವೈದ್ಯರಿಗೆ ನೀಡುತ್ತಿರುವ ಅನಗತ್ಯ ಕಿರುಕುಳ ನಿಲ್ಲಿಸಬೇಕೆಂದು ಒತ್ತಾಯಿಸಿ, ಫೆ.12ರಂದು ಬೆಳಗ್ಗೆ 11ಕ್ಕೆ ಗ್ರಾಮೀಣ ವೈದ್ಯರು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಗ್ರಾಮೀಣ ವೈದ್ಯರ ಅಭಿವೃದ್ಧಿಪರ ಸಂಘದ ಅಧ್ಯಕ್ಷ ಅಮೃತ ಪಾಟೀಲ್ ಸಿರನೂರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳುವ ಗ್ರಾಮೀಣ ವೈದ್ಯರು ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ನಂತರ ಮನವಿ ಪತ್ರ ಸಲ್ಲಿಸಲಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಪತ್ರ ಸಲ್ಲಿಸಲಾಗುವುದು ಎಂದರು.
ರಾಜ್ಯಾದ್ಯಂತ ಸುಮಾರು 1.5 ಲಕ್ಷ ಗ್ರಾಮೀಣ ವೈದ್ಯರು ಹಳ್ಳಿಗಾಡಿನ ಜನರ ಆರೋಗ್ಯ ಸೇವೆ ಮಾಡುತ್ತಿದ್ದಾರೆ. ಈ ವೈದ್ಯರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದೆ.
ಇಂತಹ ಕಿರುಕುಳ ನಿಲ್ಲಿಸಿ ನೆರೆಯ ಆಂಧ್ರ ಪ್ರದೇಶ ರಾಜ್ಯದಲ್ಲಿ ದಿ. ಡಾ. ವೈ.ಎಸ್. ರಾಜಶೇಖರ ರೆಡ್ಡಿ ಅವರು 2008-09ರಲ್ಲಿ ಕೈಗೊಂಡ ಕ್ರಮದಂತೆ ಕರ್ನಾಟಕ ರಾಜ್ಯದಲ್ಲಿಯೂ ಗ್ರಾಮೀಣ ವೈದ್ಯರಿಗೆ ಪ್ರೈವೇಟ್ ಮೆಡಿಕಲ್ ಪ್ರಾಕ್ಟೀಷನರ್ (ಪಿಎಂಪಿ) ಪ್ರಮಾಣ ನೀಡಬೇಕು. ಆ ಮೂಲಕ ಗ್ರಾಮೀಣ ಜನರ ಆರೋಗ್ಯ ಸೇವೆ ಮುಂದುವರೆಸಲು ಅನುಕೂಲ ಮಾಡಿಕೊಡಬೇಕೆಂದು ಅಮೃತ ಪಾಟೀಲ್ ಮನವಿ ಮಾಡಿದರು.
ರಾಜ್ಯ ಸರ್ಕಾರ ಕೂಡಲೆ ಉನ್ನತ ಮಟ್ಟದ ಸಭೆ ಕರೆದು ಗ್ರಾಮೀಣ ವೈದ್ಯರಿಗೆ ಪಿಎಂಪಿ ಪ್ರಮಾಣ ನೀಡುವ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳಬೇಕೆಂದರು. ಗ್ರಾಮೀಣ ವೈದ್ಯರಾದ ಬಸವರಾಜ ಪಾಟೀಲ್ ಮರತೂರ, ಸುರೇಶ ದೇಶಮುಖ, ಶಶಿಕುಮಾರ್, ಆನಂದ ಪಾಟೀಲ್, ಶಂಕರ ಯಾದವ್, ಶಿವಶರಣ ಭಾವೆ, ರವಿ ಒಂಟಿ, ಶಿವಾನಂದ ಚಿಕ್ಕಾಣಿ, ಶಿವಾಜಿ ಚವ್ಹಾಣ, ಪ್ರಶಾಂತ ಕುಮಾರ ಸೇರಿ ಇತರರಿದ್ದರು.