ಟ್ಯಾಂಕರ್‌ನಿಂದ ಅನಧಿಕೃತ ನೀರುಸರಬರಾಜು ನಿಲ್ಲಿಸಲು ಪ್ರತಿಭಟನೆ

| Published : Feb 01 2024, 02:03 AM IST

ಟ್ಯಾಂಕರ್‌ನಿಂದ ಅನಧಿಕೃತ ನೀರುಸರಬರಾಜು ನಿಲ್ಲಿಸಲು ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ದಿನ 70ಕ್ಕೂ ಅಧಿಕ ಟ್ಯಾಂಕರ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ತೆಗೆದು ಅಪಾರ್ಟ್‌ಮೆಂಟ್‌, ಪಿಜಿ, ಹಾಸ್ಟಲ್‌, ಟೆಕ್ ಪಾರ್ಕ್, ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಹಣ ಮಾಡಲಾಗುತ್ತಿದೆ. ಇದರಿಂದ ಕಳೆದ ಒಂದು ತಿಂಗಳಿನಿಂದ ಮೂಕಾಬಿಂಕಾ ಲೇಔಟ್‌ನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡುತ್ತಿರುವುದರಿಂದ ಅಂತರ್ಜಲ ಮಟ್ಟ ಕಡಿಮೆಯಾಗಿದ್ದು, ಕೊಳವೆ ಬಾವಿಗಳು ಬತ್ತಿ ಹೋಗುತ್ತಿವೆ. ಹಾಗಾಗಿ, ಟ್ಯಾಂಕರ್‌ ನೀರು ಸರಬರಾಜು ನಿಲ್ಲಿಸುವಂತೆ ಆಗ್ರಹಿಸಿ ಕೆಂಗೇರಿಯ ಮೂಕಾಬಿಂಕಾ ಲೇಔಟ್ ನಿವಾಸಿಗಳು ಬುಧವಾರ ಪ್ರತಿಭಟನೆ ನಡೆಸಿದರು.

ಅನಧಿಕೃತವಾಗಿ ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಬೆಂಗಳೂರು ಜಲಮಂಡಳಿ ಹಾಗೂ ಬಿಬಿಎಂಪಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಬುಧವಾರ ನೀರಿನ ಟ್ಯಾಂಕರ್‌ಗಳನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಪ್ರತಿಭಟನೆ ನಡೆಸಿ ಮೈಲಸಂದ್ರ ಟ್ಯಾಂಕರ್‌ ಹಾಗೂ ಕೊಳವೆ ಬಾವಿ ಮಾಲೀಕರ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಪ್ರತಿ ದಿನ 70ಕ್ಕೂ ಅಧಿಕ ಟ್ಯಾಂಕರ್‌ಗಳ ಮೂಲಕ ಕೊಳವೆ ಬಾವಿಯಿಂದ ನೀರು ತೆಗೆದು ಅಪಾರ್ಟ್‌ಮೆಂಟ್‌, ಪಿಜಿ, ಹಾಸ್ಟಲ್‌, ಟೆಕ್ ಪಾರ್ಕ್, ಖಾಸಗಿ ಆಸ್ಪತ್ರೆಗಳಿಗೆ ಸರಬರಾಜು ಮಾಡಿ ಹಣ ಮಾಡಲಾಗುತ್ತಿದೆ. ಇದರಿಂದ ಮೂಕಾಂಬಿಕಾ ಲೇಔಟ್‌ನ 30ಕ್ಕೂ ಅಧಿಕ ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಕಳೆದ ಒಂದು ತಿಂಗಳಿನಿಂದ ಲೇಔಟ್‌ನಲ್ಲಿ ನೀರಿನ ಹಾಹಾಕಾರ ಶುರುವಾಗಿದೆ.

ಲೇಔಟ್‌ನ ನಾಗರಿಕರಿಗಾಗಿ, ಬಿಬಿಎಂಪಿ ಕೊರೆಸಿದ ಕೊಳವೆ ಬಾವಿ ಸಹ ಬತ್ತಿ ಹೋಗಿದೆ. ಹೀಗಾಗಿ, ಟ್ಯಾಂಕರ್‌ ನೀರು ಸರಬರಾಜು ಮಾಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಸ್ಥಳೀಯರು ಆಗ್ರಹಿಸಿದರು. ಈ ವೇಳೆ ಟ್ಯಾಂಕರ್ ಮಾಲೀಕರು ಮತ್ತು ನಾಗರಿಕರ ನಡುವೆ ವಾಗ್ವಾದ ಉಂಟಾಯಿತು. ಈ ಹಿನ್ನೆಲೆಯಲ್ಲಿ ಕೆಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ದಿನಕ್ಕೆ 5 ಟ್ಯಾಂಕರ್‌ ಪೂರೈಕೆಗೆ ಅನುಮತಿ

ಪ್ರತಿಭಟನಾಕಾರರು ಮತ್ತು ಟ್ಯಾಂಕರ್‌ ಮಾಲೀಕರೊಂದಿಗೆ ರಾಜಿ-ಸಂಧಾನ ನಡೆಸಿದ ಪೊಲೀಸರು, ದಿನಕ್ಕೆ 5 ಟ್ಯಾಂಕರ್ ನೀರು ಸಪ್ಲೈಗೆ ಮಾತ್ರ ಟ್ಯಾಂಕರ್‌ ಮಾಲೀಕರಿಗೆ ಅವಕಾಶ ನೀಡಲಾಯಿತು. ಅನುಮತಿ ಇಲ್ಲದೇ ನೀರು ಸರಬರಾಜಿ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದರು.