Protest tomorrow demanding that the KPSC scandal be handed over to the CBI.

-ಶಿವಮೊಗ್ಗ ಬರಪೀಡಿತ ಘೋಷಣೆಗೆ ಕೆ.ಎನ್. ರಾಮಕೃಷ್ಣ ಆಗ್ರಹ

----

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ, ಕೆಪಿಎಸ್‌ಸಿಯಲ್ಲಿ ನಡೆದಿರುವ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು ಎಂದು ಆಗ್ರಹಿಸಿ ಸೆ.18ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮಲೆನಾಡಿನ ಜನರ ಮೇಲೆ ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಕುರಿತು ಸೆ.21ರಿಂದ 23ರವರೆಗೆ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ ಪಕ್ಷಾತೀತವಾಗಿ ಚರ್ಚಿಸಿ, ಕೇಂದ್ರ ಸರ್ಕಾರಕ್ಕೆ ಒಕ್ಕೊರಲಿನಿಂದ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನಲ್ಲಿ ಹಲವು ಸಮಸ್ಯೆಗಳು ಸೃಷ್ಟಿಯಾಗಿದ್ದು, ಕೃಷಿ ಸೇರಿದಂತೆ ಜನಜೀವನದ ಮೇಲೆ ಪರಿಣಾಮ ಬೀರುತ್ತಿದೆ. ವರದಿ ಜಾರಿಯಾದರೆ ಶಿವಮೊಗ್ಗ ಜಿಲ್ಲೆಯ 1,675 ಗ್ರಾಮಗಳಿಗೆ ಸಂಕಷ್ಟ ಎದುರಾಗಲಿದೆ.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಣಾಮಕಾರಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.

ಕೆಪಿಎಸ್‌ಸಿಯಲ್ಲಿ ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಕುರಿತು ಸಿಐಡಿ ತನಿಖೆ ನಡೆಯುತ್ತಿದ್ದು, ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಡಲೇ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಮುಂಗಾರು ಮಳೆ ಕೊರತೆಯಿಂದ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಬರದ ಛಾಯೆ ಆವರಿಸಿದೆ. ಆದ್ದರಿಂದ ಶಿವಮೊಗ್ಗ ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಬರಪೀಡಿತ ತಾಲೂಕುಗಳನ್ನು ಹೆಲಿಕಾಪ್ಟರ್ ಮೂಲಕ ಪರಿಶೀಲಿಸಿರುವ ಮುಖ್ಯಮಂತ್ರಿ, ಸಂಬಂಧಿಸಿದ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಖುದ್ದು ಪರಿಶೀಲಿಸಬೇಕು ಎಂದು ಮನವಿ ಮಾಡಿದರು.

ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೀತಾ ಸತೀಶ್, ಪ್ರಮುಖರಾದ ತ್ಯಾಗರಾಜ್, ಎಚ್.ಎಂ. ಸಂಗಯ್ಯ, ನರಸಿಂಹ ಗಂಧದ ಮನೆ, ಯೋಗೀಶ್, ಸತೀಶ್ ಕಸಟ್ಟಿ, ಬಿ.ಎಸ್. ವಿನಯ್ ಹಾಗೂ ಅಬ್ದುಲ್ ವಾಜೀದ್ ಉಪಸ್ಥಿತರಿದ್ದರು.

ಪೋಟೊ: 16ಎಸ್‌ಎಂಜಿಕೆಪಿ04

ಶಿವಮೊಗ್ಗದ ಪತ್ರಿಕಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎನ್. ರಾಮಕೃಷ್ಣ ಮಾತನಾಡಿದರು.