ಮೆಕ್ಕೆಜೋಳ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಸೋಮವಾರ ಕೊಪ್ಪಳ ನಗರದಲ್ಲಿ ಎತ್ತಿನಬಂಡಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಕೊಪ್ಪಳ: ಮೆಕ್ಕೆಜೋಳ ಬೆಂಬಲ ಬೆಲೆ ಕೇಂದ್ರ ತೆರೆಯುವಂತೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ಮುಖಂಡರು ಸೋಮವಾರ ನಗರದಲ್ಲಿ ಎತ್ತಿನಬಂಡಿಯೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ನಗರದ ಗಡಿಯಾರ ಕಂಬದಿಂದ ಪ್ರಾರಂಭವಾದ ಮೆರವಣಿಗೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ, ಜವಾಹರ ರಸ್ತೆಯಲ್ಲಿ ಸಾಗಿತು. ಅಶೋಕ ವೃತ್ತದಲ್ಲಿ ಕಾರ್ಯಕರ್ತರು ಕೆಲಕಾಲ ಪ್ರತಿಭಟನೆ ನಡೆಸಿದರು.

ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್. ನಡಹಳ್ಳಿ ಮಾತನಾಡಿ, ರಾಜ್ಯದಲ್ಲಿ ಆಡಳಿತ ನಡೆಸುವ ಸರ್ಕಾರ ಜನರ ಹಿತ ಕಾಯಬೇಕಾಗಿತ್ತು. ಆದರೆ, ಅದು ಖುರ್ಚಿ ಗುದ್ದಾಟದ ಗದ್ದಲದಲ್ಲಿದೆ. ಹೀಗಾಗಿ ಸರ್ಕಾರಕ್ಕೆ ರೈತರ ಸಂಕಷ್ಟ ಅರ್ಥವಾಗುತ್ತಿಲ್ಲ. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲ ಬೆಲೆ ಅಡಿಯಲ್ಲಿ ಮೆಕ್ಕೆಜೋಳ ಬೆಂಬಲ ಕೇಂದ್ರ ತೆರೆದಿದ್ದರೆ ರೈತರು ಬೆಲೆ ಕುಸಿತದ ಸಂಕಷ್ಟದಿಂದ ಪಾರಾಗುತ್ತಿದ್ದರು. ಆದರೆ, ಸರ್ಕಾರಕ್ಕೆ ಅರಿವೇ ಇಲ್ಲ. ಬರಿ ತಮ್ಮ ಖುರ್ಚಿಗಾಗಿ ಕಿತ್ತಾಟ ನಡೆಸಿದ್ದಾರೆ. ರಾಜ್ಯದ ಜನರ ಸಮಸ್ಯೆ, ರೈತರ ಸಮಸ್ಯೆ, ನೀರಿನ ಸಮಸ್ಯೆಯ ಕುರಿತು ಚರ್ಚೆ ಮಾಡುವುದಕ್ಕೆ ಹಾಗೂ ಅದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕೆ ಬಿಡುವೇ ಇಲ್ಲ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಈ ಬಾರಿ ಮೆಕ್ಕೆಜೋಳ ಬೆಳೆದ ರೈತ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದಿದ್ದಾನೆ. ಕೊಪ್ಪಳದಲ್ಲಿ ರೈತ ರಸಗೊಬ್ಬರ ಸಿಗದೆ ಮಣ್ಣು ತಿಂದು ಪ್ರತಿಭಟಿಸಿದ್ದು, ಈ ಸರ್ಕಾರ ರೈತರಿಗೆ ಮಣ್ಣು ತಿನ್ನಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಈ ಭಾಗದ ರೈತರಿಗೆ ತುಂಗಭದ್ರಾ ಜಲಾಶಯದಿಂದ ಎರಡನೇ ಬೆಳೆಗೆ ನೀರು ಬಿಡದೆ ಅನ್ಯಾಯ ಮಾಡುತ್ತಿದೆ. ಆದ್ದರಿಂದ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು.

ಸರ್ಕಾರ ಈಗಲೂ ಎಚ್ಚೆತ್ತುಕೊಳ್ಳದೆ ಇದ್ದರೆ ಚಳಿಗಾಲದ ಅಧಿವೇಶನದಲ್ಲಿ ರೈತರ ಪರವಾಗಿ ಸರ್ಕಾರದ ಚಳಿ ಬಿಡಿಸಲಾಗುತ್ತದೆ. ಸರ್ಕಾರವನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿ, ರೈತರ ನೆರವಿಗೆ ಧಾವಿಸುವಂತೆ ಮಾಡುವುದಾಗಿ ಎಚ್ಚರಿಸಿದರು.

ರಾಜ್ಯ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ೫೦ ಸಾವಿರಕ್ಕೂ ಹೆಚ್ಚು ರೈತರು ಬೆಳಗಾವಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ, ಹೋರಾಟ ನಡೆಸಲಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತು ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತಿದೆಯೇ ಹೊರತು, ರಾಜ್ಯದ ರೈತರ ಸಮಸ್ಯೆ ಇತ್ಯರ್ಥ ಮಾಡುವ, ಬೆಲೆ ಕುಸಿತದಿಂದ ಪಾರು ಮಾಡುವ ಪ್ರಯತ್ನ ಮಾಡುತ್ತಲೇ ಇಲ್ಲ ಎಂದರು.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಕುರ್ಚಿಯ ಕಾದಾಟದಲ್ಲಿ ಮುಳುಗಿದ್ದಾರೆ. ಜನರ ಎದುರಿಗೆ ಬೇರೆಯದ್ದೇ ಹೇಳುತ್ತಾರೆ, ಆದರೆ, ಕುರ್ಚಿಗಾಗಿ ಮಾಡಬಾರದ್ದೆಲ್ಲವನ್ನು ಮಾಡುತ್ತಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಸಂಸದ ಶಿವರಾಮಗೌಡರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಕೆ. ಬಸವರಾಜ, ಮಾಜಿ ಸಚಿವ ನಾಗಪ್ಪ ಸಾಲೋಣಿ, ಮುಖಂಡರಾದ ಜಿ. ವೀರಪ್ಪ, ಮತ್ತು ಕೆ. ಶರಣಪ್ಪ, ಚಂದ್ರಶೇಖರಗೌಡ ಪಾಟೀಲ್ ಹಲಗೇರಿ, ನವೀನ್ ಗುಳಗಣ್ಣನವರ ಉಪಸ್ಥಿತರಿದ್ದರು.

ಸರ್ಕಾರ ಕೂಡಲೇ ಬೆಂಬಲ ಬೆಲೆ ಕೇಂದ್ರ ತೆರೆಯಬೇಕು ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಎರಡನೇ ಬೆಳೆಗೆ ನೀರು ಬಿಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೊಪ್ಪಳ ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು ಹೇಳಿದರು. ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವುದನ್ನು ಬಿಟ್ಟು, ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಬೆಂಬಲಯಂತೆ ಮೆಕ್ಕೆಜೋಳ ಖರೀದಿ ಮಾಡಬೇಕು ಎಂದು ವಿಧಾನಸಭೆ ವಿರೋಧಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್ ಹೇಳಿದರು.