ಹಾವೇರಿ-ಶಿರಸಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ತಾಲೂಕಿನ ಬಿಸಿಲಕೊಪ್ಪದ ಬಳಿ ಹಾವೇರಿ- ಶಿರಸಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿರಸಿ

ಹಾವೇರಿ-ಶಿರಸಿ ರಸ್ತೆ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ತಾಲೂಕಿನ ಬಿಸಿಲಕೊಪ್ಪದ ಬಳಿ ಹಾವೇರಿ- ಶಿರಸಿ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಾಂಗ್ರೆಸ್ ಮುಖಂಡ ಸುನಿಲ್ ನಾಯ್ಕ್ ನೇತೃತ್ವದಲ್ಲಿ ಸುಮಾರು 2-3 ಗಂಟೆಗಳ ಕಾಲ ರಸ್ತೆ ತಡೆ ನಡೆಸಿ, ಅಣುಕು ಶವ ಪ್ರದರ್ಶನ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಘೋಷಣೆಗಳನ್ನು ಕೂಗಿ ರಸ್ತೆ ತಡೆ ನಡೆಸಿ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪಟ್ಟು ಹಿಡಿದರು.

ಸುದ್ದಿ ತಿಳಿದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಜನರ ಮನವೊಲಿಸುವ ಪ್ರಯತ್ನ ಮಾಡಿದರು. ಆ ಸಂದರ್ಭದಲ್ಲಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.

ನಂತರ ಸುನಿಲ್ ನಾಯಕ್ ಮಾತನಾಡಿ, ಅವಧಿ ಮುಗಿದರೂ ಇದುವರೆಗೂ ಸರಿಯಾಗಿ ರಸ್ತೆ ನಿರ್ಮಾಣ ಮಾಡಿಲ್ಲ. ಇದರಿಂದ ವಾಹನ ಸವಾರರು ದಿನನಿತ್ಯ ಜೀವ ಭಯದಲಿಯೇ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಈಗಾಗಲೇ ಅನೇಕರಿಗೆ ಗಂಭೀರ ಗಾಯಗಳಾಗಿವೆ. ಇದಕ್ಕೆ ಹೊಣೆ ಯಾರು ಎಂದು ಪ್ರಶ್ನಿಸಿದರು.

ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇ ಅಂತ್ಯದೊಳಗಾಗಿ ರಸ್ತೆಯನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದರಿಂದ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿತ್ತು.ಭಾರೀ ವಾಹನಗಳಿಗೆ ತಾತ್ಕಾಲಿಕ ನಿಷೇಧ:

ಮೇ 7ರ ವರೆಗೆ ಶಿರಸಿ ಬಿಸಿಲಕೊಪ್ಪ ಮಾರ್ಗದಲ್ಲಿ ಭಾರೀ ವಾಹನಗಳ ಸಂಚಾರ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.ಮಂಗಳವಾರ ಸಾರ್ವಜನಿಕರು, ರೈತ ಸಂಘಟನೆಯವರು ಸೇರಿ ನಡೆಸಿದ ಪ್ರತಿಭಟನೆಯಲ್ಲಿ ಸಾರ್ವಜನಿಕರ ಅಹವಾಲು ಕೇಳಿದ ಸಹಾಯಕ ಆಯುಕ್ತರು, ತಾಲೂಕು ದಂಡಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಶಿರಸಿ-ಬಿಸಿಲುಕೊಪ್ಪ ಮಾರ್ಗದಲ್ಲಿ ಯಾವುದೇ ಭಾರಿ ಗಾತ್ರದ ವಾಹನಗಳಿಗೆ, ಲಾರಿ ಟಿಪ್ಪರ್‌ಗಳಿಗೆ ಸರ್ಕಾರಿ ಮತ್ತು ಖಾಸಗಿ ಬಸ್‌ಗಳಿಗೆ, ಪ್ರವಾಸಿಗರ ಟೆಂಪೋ ಟ್ರಾವೆಲ್ಲರ್‌ಗಳಿಗೆ ಸಂಚಾರವನ್ನು ಮೇ 7ವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕಾರಣ ಭಾರಿ ವಾಹನಗಳಾದ ಬಸ್, ಟಿಪ್ಪರ್, ಟೆಂಪೋ ಟ್ರಾವೆಲರ್, ಖಾಸಗಿ ವಾಹನಗಳಿಗೆ ಶಿರಸಿ-ಬಿಸಲ್ಕೊಪ್ಪ ಮಾರ್ಗ ಬಿಟ್ಟು ಹುಬ್ಬಳ್ಳಿ ಕಡೆಯಿಂದ ಬರುವ ವಾಹನಗಳು ಮಳಗಿ-ದಾಸನಕೊಪ್ಪ-ಬನವಾಸಿ-ಶಿರಸಿ ಹಾಗೂ ಹಾವೇರಿ ಕಡೆಯಿಂದ ಬರುವ ವಾಹನಗಳು ದಾಸನಕೊಪ್ಪ-ಬನವಾಸಿ-ಶಿರಸಿ ಮಾರ್ಗದಲ್ಲಿ ಸಂಚರಿಸಬೇಕೆಂದು ತಿಳಿಸಲಾಗಿದೆ.