ಚಿಕ್ಕ ನೀರಾವರಿ ಇಲಾಖೆಯವರು 1983ರಿಂದ ಈವರೆಗೆ ಹಳಿಯಾಳ ಕ್ಷೇತ್ರದಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳು, ಆದ ಕಾಮಗಾರಿಗಳು, ಆಗಬೇಕಾದ ಕಾಮಗಾರಿಗಳು, ಅವುಗಳ ಸ್ಥಿತಿಗತಿ, ಮಂಜೂರಾದ ಒಟ್ಟು ಅನುದಾನ, ಈ ಯೋಜನೆಗಳಿಂದ ಎಷ್ಟು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆತವು ಎಂಬುದರ ಸಮಗ್ರ ಮಾಹಿತಿ ನನಗೆ ಬೇಕಾಗಿದೆ.

ತಾಲೂಕು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ಸೂಚನೆ

ಕನ್ನಡಪ್ರಭ ವಾರ್ತೆ ಹಳಿಯಾಳ

ಚಿಕ್ಕ ನೀರಾವರಿ ಇಲಾಖೆಯವರು 1983ರಿಂದ ಈವರೆಗೆ ಹಳಿಯಾಳ ಕ್ಷೇತ್ರದಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳು, ಆದ ಕಾಮಗಾರಿಗಳು, ಆಗಬೇಕಾದ ಕಾಮಗಾರಿಗಳು, ಅವುಗಳ ಸ್ಥಿತಿಗತಿ, ಮಂಜೂರಾದ ಒಟ್ಟು ಅನುದಾನ, ಈ ಯೋಜನೆಗಳಿಂದ ಎಷ್ಟು ಎಕರೆ ಭೂಮಿಗೆ ನೀರಾವರಿ ಸೌಲಭ್ಯ ದೊರೆತವು ಎಂಬುದರ ಸಮಗ್ರ ಮಾಹಿತಿ ನನಗೆ ಬೇಕಾಗಿದೆ. ಮುಂದಿನ ಹತ್ತು ದಿನದೊಳಗಾಗಿ ವರದಿ ನೀಡಬೇಕೆಂದು ಶಾಸಕ ಆರ್.ವಿ. ದೇಶಪಾಂಡೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ನೀರಾವರಿ ಯೋಜನೆಗೆ ನಾನು ಲೆಕ್ಕವಿಲದಷ್ಟು ಅನುದಾನಗಳನ್ನು ತಂದೇ ಅವುಗಳ ಸಮಗ್ರ ಅನಾವರಣ ಆಗಬೇಕು ಎಂದರು. ಜವಾಬ್ದಾರಿಯಿರಲಿ: ಜಿಪಂ, ಪುರಸಭೆ, ಕುಡಿಯುವ ನೀರಿನ ಪೂರೈಕೆ, ಅಕ್ಷರ ದಾಸೋಹ, ಸಾರಿಗೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಆಲಿಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ಇಲಾಖಾ ವ್ಯಾಪ್ತಿಯಲ್ಲಿ ಯೋಜನೆ ಅನುಷ್ಠಾನ ಮಾಡಲು ಎದುರಾಗುವ ಸಮಸ್ಯೆಗಳಿದ್ದರೇ ಅವುಗಳನ್ನು ತಮ್ಮ ಗಮನಕ್ಕೆ ತರಬೇಕೇ ಹೊರತು, ಕೆಡಿಪಿ ಸಭೆಯವರೆಗೂ ಕಾಯಬಾರದು ಎಂದರು.

ನಿವೃತ್ತರಾದ ಬಿಸಿಯೂಟ ಸಿಬ್ಬಂದಿ ಸ್ಥಾನಕ್ಕೆ ಹೊಸ ನೇಮಕಾತಿ ಮಾಡುವ ಮುನ್ನ ನನ್ನ ಗಮನಕ್ಕೆ ತರಬೇಕು ಎಂದು ತಾಕೀತು ಮಾಡಿದರು. ತಾಪಂ ಇಒ ಹಾಗೂ ತಹಸೀಲ್ದಾರರು ಎಲ್ಲಾ ಇಲಾಖೆಗಳ ಕಾಮಗಾರಿ ಪ್ರಗತಿಯ ಮೇಲೆ ನಿಗಾ ಇರಿಸಬೇಕು ಎಂದರು. ಸರ್ಕಾರಿ ಸೇವೆಯಲ್ಲಿರುವ ವೈದ್ಯರು ತಾವು ನೀಡುವ ಚಿಕಿತ್ಸೆ ಉಚಿತವಾಗಿ ಮಾಡಬೇಕೆ ಹೊರತು ಹಣ ಪಡೆಯಬಾರದೆಂದು ಎಚ್ಚರಿಸಿದರು.

ನೀರಿನ ಸಮಸ್ಯೆ:ಮುಂಬರುವ ದಿನಗಳಲ್ಲಿ ಜೀವಜಲದ ಸಮಸ್ಯೆ ಎದುರಾಗಬಾರದು ಹಾಗೂ ಮುಚ್ಚಲ್ಪಟ್ಟಿರುವ ಕುಡಿಯುವ ನೀರಿನ ಘಟಕಗಳನ್ನು ಮರುಚಾಲನೆ ಮಾಡಲು ತಾಪಂ ಇಒ, ತಹಸೀಲ್ದಾರ ಹಾಗೂ ಪಿಡಿಒಗಳು ಕ್ರಮಕೈಗೊಳ್ಳಬೇಕು ಎಂದು ದೇಶಪಾಂಡೆ ಸೂಚಿಸಿದರು. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕ ಮತ್ತು ಸರ್ಕಾರಿ ಸ್ಥಳಗಳಲ್ಲಿ ಬೆಳೆದಿರುವ ತ್ಯಾಜ್ಯವನ್ನು ಶುಚಿಗೊಳಿಸಬೇಕು, ಬಸ್ ತಂಗುದಾಣಗಳನ್ನು ಹಾಗೂ ಗ್ರಾಪಂ ಕಾರ್ಯಗಳ ಶುಚಿತ್ವ ನಡೆಸಿ ಸುಣ್ಣ ಹಚ್ಚಬೇಕು ಎಂದರು.

ದಾಖಲೆ ಪುಸ್ತಕ ಇಡಬೇಕು:

ಕ್ಷೇತ್ರದಲ್ಲಿ ಕೈಗೊಳ್ಳುವ ಪ್ರತಿಯೊಂದು ಅಭಿವೃದ್ಧಿ ಕಾಮಗಾರಿಗಳ ಕುರಿತು ದಾಖಲೆ ಇಡಬೇಕು, ಕಾಮಗಾರಿಗಳ ಪರಿಶೀಲನೆಗೆ ಬಂದ ಅಧಿಕಾರಿಗಳು, ಜನಪ್ರತಿನಿಧಿಗಳು ಅದರಲ್ಲಿ ತಮ್ಮ ಅಭಿಪ್ರಾಯ ಬರೆದಿಡಬೇಕು ಎಂದರು.

ಅಭಿವೃದ್ಧಿ ಕಾಮಗಾರಿಗಳು ಮುಕ್ತಾಯಗೊಂಡಾಗ ಅವುಗಳನ್ನು ತಾಪಂ ಇಒ ಹಾಗೂ ತಹಸೀಲ್ದಾರ ಮತ್ತು ಕಾಮಗಾರಿ ಕೈಗೊಂಡ ಇಲಾಖಾ ಅಧಿಕಾರಿಗಳು ಜಂಟಿಯಾಗಿ ಪರಿಶೀಲನೆ ಮಾಡಿ ಕಾಮಗಾರಿ ಮುಕ್ತಾಯವಾದ ಬಗ್ಗೆ ಪತ್ರ ನೀಡಬೇಕು ಎಂದರು. ಈ ಮೂಲಕ ಸರ್ಕಾರದ ಯೋಜನೆಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿವೆಯೋ ಎಂಬುದನ್ನು ಪರಿಶೀಲಿಸಿದಂತಾಗುವುದು ಎಂದರು.

ಗೋಶಾಲೆಗೆ ನೆರವು ನೀಡಿ:

ತಾಲೂಕಿನಲ್ಲಿರುವ ಜಿಲ್ಲಾ ಗೋಶಾಲೆಯನ್ನು ರಾಜ್ಯದಲ್ಲಿಯೇ ಮಾದರಿ ಮಾಡುವ ಯೋಜನೆ ನನ್ನದಾಗಿದೆ ಎಂದ ದೇಶಪಾಂಡೆ, ಸಹಕಾರಿ ಸಂಘಗಳು, ಸಂಘಟನೆಗಳು ಹಾಗೂ ಸ್ಥಿತಿವಂತರು, ರೈತರು ಈ ಗೋಶಾಲೆಯ ನೆರವಿಗೆ ಮುಂದಾಗಬೇಕೆಂದರು.

ಗೋಶಾಲೆಯಲ್ಲಿರುವ ಗೋವು-ಜಾನುವಾರುಗಳ ರಕ್ಷಣೆಗೆ ಬೇಕಾಗಿರುವ ಎಲ್ಲಾ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗೋಶಾಲೆಯ ಅಭಿವೃದ್ಧಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಲ್ಲಿ ನಿರ್ಲಕ್ಷ್ಯವನ್ನು ನಾನು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.

ಸಭೆಯಲ್ಲಿ 28 ಇಲಾಖೆಗಳು ಪ್ರಗತಿ ವರದಿ ಮಂಡಿಸಿದರು. ತಾಪಂ ಆಡಳಿತಾಧಿಕಾರಿ, ಚಿಕ್ಕ ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್ ನಾಗರಾಜ್, ಕೆಡಿಪಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.