ಸಾರಾಂಶ
ಕಾರಟಗಿ: ಗ್ರಾಮದೇವತೆ ದ್ಯಾವಮ್ಮ ದೇವಿ ದೇವಸ್ಥಾನದ ನಿರ್ಮಾಣ ಯೋಜನೆ ಜಾರಿಗೆ ಹಿನ್ನೆಲೆಗೆ ಸುತ್ತಲೂ ವಾಸಿಸುತ್ತಿದ್ದ ಬಡ ಜನತೆಗೆ ಪರ್ಯಾಯ ಜಾಗದ ವ್ಯವಸ್ಥೆ ಮಾಡದೆ ಅವರನ್ನು ಒಕ್ಕಲೆಬ್ಬಿಸಿರುವುದು ಅಮಾನವೀಯ. ಕೂಡಲೇ ಅಧಿಕಾರಿಗಳು ಬೀದಿಗೆ ಬಿದ್ದಿರುವ ಬಡವರಿಗೆ ನಿವೇಶನ ನೀಡಿ, ಮೂಲ ಸೌಲಭ್ಯ ನೀಡಬೇಕು ಎಂದು ಮಾಜಿ ಶಾಸಕ ಬಸವರಾಜ್ ದಢೇಸೂಗೂರು ಒತ್ತಾಯಿಸಿದ್ದಾರೆ.
ಇಲ್ಲಿನ ೧೧ನೇ ವಾರ್ಡ್‌ನ ಕೋಟೆ ಪ್ರದೇಶದಲ್ಲಿನ ಗ್ರಾಮದೇವತೆ ದ್ಯಾವಮ್ಮ ದೇವಿ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಸಂತ್ರಸ್ತರೊಂದಿಗೆ ಚರ್ಚಿಸಿದ ಬಳಿಕ ಪುರಸಭೆ ಮುಖ್ಯಾಧಿಕಾರಿ, ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳ ನಡೆಯನ್ನು ತೀವ್ರವಾಗಿ ಖಂಡಿಸಿ, ದೇವಸ್ಥಾನದ ಹೆಸರಿನಲ್ಲಿ ಬಡವರನ್ನು ಒಕ್ಕಲೆಬ್ಬಿಸುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಗ್ರಾಮದೇವತೆ ದೇವಸ್ಥಾನ ನಿರ್ಮಾಣ ಮಾಡಲಿ, ಆದರೆ ಈ ದೇವಸ್ಥಾನದ ಸುತ್ತಲೂ ೨-೩ ದಶಕಗಳಿಂದಲೂ ವಾಸವಿರುವವರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ಅವರ ಮನೆ, ಗುಡಿಸಲುಗಳನ್ನು ಏಕಾಏಕಿ ತೆರವು ಮಾಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಕ್ಯಾರೆ ಅನ್ನದ ಅಧಿಕಾರಿಗಳು: ನಾಲ್ಕು ತಿಂಗಳ ಹಿಂದೆ ಸಚಿವ ಶಿವರಾಜ್ ತಂಗಡಗಿ ಸ್ಥಳಕ್ಕೆ ಭೇಟಿ ನೀಡಿದ ಇಲ್ಲಿನ ನಿವಾಸಿಗಳಿಗೆ ಪರ್ಯಾಯ ಜಾಗೆ ನೀಡಿಯೇ ನಿಮ್ಮೆಲ್ಲ ಮನೆ-ಶೆಡ್ಡುಗಳನ್ನು ತೆರವುಗೊಳಿಸುವುದಾಗಿ ಹೇಳಿ ಹೋಗಿದ್ದರು. ಈ ವೇಳೆ ತಹಸೀಲ್ದಾರ್, ಮುಖ್ಯಾಧಿಕಾರಿ ಮತ್ತು ಪಿಐ ಮೂವರಿಗೂ ಸೂಚನೆ ನೀಡಿ ಮೂರು ತಿಂಗಳೊಳಗೆ ದೇವಿಕ್ಯಾಂಪ್‌ನಲ್ಲಿ ಇವರಿಗೆ ಪರ್ಯಾಯ ಜಾಗ ನೀಡಿ, ಅಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸೂಚಿಸಿದ್ದರು. ಆದರೆ ನಾಲ್ಕು ತಿಂಗಳು ಕಳೆದರೂ ಆಗಿಲ್ಲ. ಈಗ ಬಡಕುಟುಂಬಗಳ ಗುಡಿಸಲು, ಶೆಡ್‌ಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿರುವುದು ನಾಚಿಕೇಗೇಡಿನ ಸಂಗತಿ ಎಂದು ದಢೇಸೂಗೂರು ತರಾಟೆಗೆ ತೆಗೆದುಕೊಂಡರು.ತಹಸೀಲ್ದಾರ್ ತೋರಿಸಿದ ೨೩ನೇ ವಾರ್ಡ್ ದೇವಿಗುಡ್ಡದ ಜಾಗದಲ್ಲಿ ನಿರಾಶ್ರಿತರಿಗೆ ಶೆಡ್ ನಿರ್ಮಿಸಲು ದೇವಿಕ್ಯಾಂಪ್‌ನವರು ಬಿಡುತ್ತಿಲ್ಲ. ‘ಇದು ಕ್ಯಾಂಪ್‌ನ ಸ್ಮಶಾನ ಜಾಗ, ಇಲ್ಲಿ ಗುಡಿಸಲು, ಶೆಡ್ಡು ಹಾಕಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಇತ್ತ ಕುಟುಂಬಸ್ಥರು ಬೀದಿಗೆ ಬೀಳುವಂತಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇನಾಂ ಜಾಮೀನು ಕೊಡಿ: ಮಾನವೀಯ ದೃಷ್ಟಿಯಿದ ದೇವಸ್ಥಾನ ನಿರ್ಮಾಣಕ್ಕೆ ಮುಂದಾದವರು ಅಧಿಕಾರಿಗಳೊಂದಿಗೆ ಚರ್ಚಿಸಿ ರೈಲ್ವೆ ನಿಲ್ದಾಣದ ಬಳಿ ದೇವಸ್ಥಾನಕ್ಕೆ ಸೇರಿದ ಮೂರೂವರೆ ಎಕರೆ ಇನಾಂ ಜಾಮೀನು ಪ್ರದೇಶದಲ್ಲಿ ಕನಿಷ್ಠ ಒಂದು ಎಕರೆಯಲ್ಲಿ ಈ ಬಡಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಬೇಕು ಎಂದು ನಿರಾಶ್ರಿತರು ಒತ್ತಾಯಿಸಿದರು.ಗ್ರಾಮದೇವತೆ ದ್ಯಾವಮ್ಮದೇವಿ ದೇವಸ್ಥಾನಕ್ಕೆ ಸೇರಿದ ಜಮೀನು ರೈಲ್ವೆ ನಿಲ್ದಾಣಕ್ಕೆ ಸ್ವಾಧೀನ ಪಡಿಸಿಕೊಂಡಿದ್ದು, ಈ ಇನಾಂ ಭೂಮಿಯಿಂದ ದೇವಸ್ಥಾನದ ಅರ್ಚಕರಿಗೆ ₹೧೭ ಕೋಟಿ ಪರಿಹಾರ ಬಂದಿದೆ. ಜತೆಗೆ ಇನ್ನು ಅಲ್ಲಿ ಮೂರೂವರೆ ಎಕರೆ ಜಮೀನು ಉಳಿದಿದೆ. ಈಗ ಉಳಿದ ಜಾಗದಲ್ಲಿ ಸಂತ್ರಸ್ತರಿಗೆ ೧ ಎಕರೆ ಜಾಗ ಕೊಡಬೇಕು, ಇನ್ನುಳಿದಂತೆ ಅರ್ಚಕರಿಗೆ ಬಂದಿರುವ ₹೧೭ ಕೋಟಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ರೈತ ಸಂಘದ ಮರಿಯಪ್ಪ ಸಾಲೋಣಿ ಹೇಳಿದರು.
ಈ ದೇವಸ್ಥಾನದ ಸುತ್ತಲು ಒತ್ತುವರಿ ತೆರವಿಗೆ ಜು. 13ರ ವರೆಗೆ ಕಾಲವಕಾಶ ಪಡೆದಿದ್ದಾರೆ. ಒಂದು ವೇಳೆ ಒತ್ತುವರಿ ತೆರವುಗೊಳಿಸದಿದ್ದರೆ ಮತ್ತು ಇಲ್ಲಿನ ಸಂತ್ರಸ್ತರಿಗೆ ರೈಲ್ವೆ ನಿಲ್ದಾಣದ ಬಳಿ ಜಾಗ ನೀಡದಿದ್ದರೆ ದೇವಿ ದೇವಸ್ಥಾನದ ಸುತ್ತಲೂ ಮತ್ತೆ ಗುಡಿಸಲು, ಶೆಡ್‌ಗಳನ್ನು ನಿರ್ಮಿಸುತ್ತೇವೆ ಎಂದು ಮರಿಯಪ್ಪ ಸಾಲೋಣಿ ಎಚ್ಚರಿಕೆ ನೀಡಿದರು.