ಶಿಕ್ಷಕರಿಗೆ ಸೂಕ್ತ ಬೆಂಬಲ ನೀಡಿ: ಬುರಡಿ

| Published : Oct 20 2024, 01:51 AM IST

ಸಾರಾಂಶ

ನಮ್ಮೆಲ್ಲರ ಸಮಯ ಹಾಗೂ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಂಕಣ ಬದ್ಧರಾಗೋಣ

ಗದಗ: ಪ್ರತಿ ಮಗು ಓದುವ ಪ್ರವೃತ್ತಿ ಬೆಳೆಸಿಕೊಂಡು ಶುದ್ಧವಾದ ಬರವಣಿಗೆ ಅರ್ಥಪೂರ್ಣ ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವಂತಾಗಲು ಶಿಕ್ಷಕರು ಪಾಠದ ಉದ್ದೇಶವನ್ನರಿತು ಪೂರ್ವ ತಯಾರಿಯೊಂದಿಗೆ ಲಭ್ಯವಿರುವ ಬೋಧನಾ, ಕಲಿಕೋಪಕರಣ ಬಳಸಿಕೊಂಡು ಮಗುವಿನ ಭಾಗವಹಿಸಿಕೆಯೊಂದಿಗೆ ಅರ್ಥಪೂರ್ಣ ಕಲಿಕೆಯಾಗಲು ಬೆಂಬಲಿತ ವ್ಯವಸ್ಥೆಯಾದ ಮೇಲ್ವಿಚಾರಣೆ ಅಧಿಕಾರಿಗಳು ತಂಡವಾಗಿ ಶಿಕ್ಷಕರಿಗೆ ಸೂಕ್ತ ಬೆಂಬಲ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಆರ್.ಎಸ್. ಬುರಡಿ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ನಡೆದ ಶೈಕ್ಷಣಿಕ ಗುಣಮಟ್ಟ ಸುಧಾರಣೆಗಾಗಿ ಮಾರ್ಗದರ್ಶನ, ಮೇಲ್ವಿಚಾರಣಾ ಅಧಿಕಾರಿಗಳ ಪ್ರಗತಿ ಪರಿಶೀಲನೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಶೈಕ್ಷಣಿಕ ವರ್ಷದ ಇನ್ನುಳಿದ ಅವಧಿ ಹಾಗೂ ನವಂಬರ್ ತಿಂಗಳಲ್ಲಿ ಶಾಲೆ ಬಿಟ್ಟ ಮಕ್ಕಳು ಮುಖ್ಯವಾಹಿನಿಗೆ ಬರುವಂತೆ.ಎಲ್ಲ ವಿದ್ಯಾರ್ಥಿಗಳು ಶುದ್ಧ ಬರವಣಿಗೆ ಹೊಂದುವಂತೆ ಜತೆಗೆ ಆಯಾ ವಿಷಯಗಳ ಮೂಲ ಕ್ರಿಯೆಗಳು ಗಳಿಸುವಂತೆ ಶಿಕ್ಷಕರಿಗೆ ಸೂಕ್ತ ಮಾರ್ಗದರ್ಶನ, ಬೆಂಬಲ ನೀಡಲು ನಾವೆಲ್ಲ ತಂಡವಾಗಿ ಕೆಲಸ ನಿರ್ವಹಿಸೋಣ. ಹಳೆ ವಿದ್ಯಾರ್ಥಿಗಳು, ಎಸ್ ಡಿಎಂಸಿ ಹಾಗೂ ಜನಪ್ರತಿನಿಧಿಗಳ ಸಹಕಾರದೊಂದಿಗೆ ಗದಗ ಜಿಲ್ಲೆಯ ಗುಣಾತ್ಮಕ ಫಲಿತಾಂಶ ಹೆಚ್ಚಿಸಿ ಪರಿಸ್ಥಿತಿಗೆ ತಕ್ಕಂತೆ ಇನ್ನಷ್ಟು ಧನಾತ್ಮಕವಾಗಿ ಬದಲಾಗೋಣ ಹಾಗೂ ನಮ್ಮೆಲ್ಲರ ಸಮಯ ಹಾಗೂ ಸಂಪನ್ಮೂಲಗಳನ್ನು ಸರಿಯಾಗಿ ಬಳಸಿ ವಿದ್ಯಾರ್ಥಿಗಳ ಅಭ್ಯುದಯಕ್ಕೆ ಕಂಕಣ ಬದ್ಧರಾಗೋಣ ಎಂದರು.

ಡಯಟ್ ಪ್ರಾಂಶುಪಾಲ ಜಿ.ಎಲ್. ಬಾರಾಟಕ್ಕೆ ಮಾತನಾಡಿ, ಶಾಲಾ ಶಿಕ್ಷಣದ ದೃಷ್ಟಿಕೋನದಲ್ಲಿ ಹೊಸ ಶೈಕ್ಷಣಿಕ ರಚನೆ, ಪ್ರಮುಖ ಆವಿಷ್ಕಾರ ಪಠ್ಯಕ್ರಮ ಇನ್ನು ಹಲವಾರು ಬದಲಾವಣೆ ಆಗುತ್ತಿವೆ, ಅದರಂತೆ ನಾವು ಸಹಿತ ಪುನಶ್ಚೇತನಗೊಂಡು ಗುಣಮಟ್ಟ ಶಿಕ್ಷಣಕ್ಕಾಗಿ ಬದ್ದರಾಗೋಣ ಎಂದರು.

ಈ ವೇಳೆ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ, ಪಿಎಂ ಪೋಷಣ ಅಭಿಯಾನ ಸಹಾಯಕ ನಿರ್ದೇಶಕ ಶಂಕರ ಹಡಗಲಿ ಹಾಗೂ ನಿವೃತ್ತ ಉಪ ನಿರ್ದೇಶಕ ಎಂ.ಎ. ರಡ್ಡೇರ ಮಾತನಾಡಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಸಮಗ್ರ ಶಿಕ್ಷಣದ ಅಧಿಕಾರಿಗಳು, ಪಿಎಂ ಪೋಷಣ ಅಭಿಯಾನದ ಜಿಲ್ಲಾ ಶಿಕ್ಷಣಾಧಿಕಾರಿಗಳು, ಡಯಟ್ ಉಪನ್ಯಾಸಕರು, ಕ್ಷೇತ್ರ ಸಮನ್ವಯಾಧಿಕಾರಿಗಳು, ಅಕ್ಷರದಾಸೋಹ ಸಹಾಯಕ ನಿರ್ದೇಶಕರು, ಸಿ.ಆರ್.ಪಿ , ಬಿ.ಆರ್.ಪಿ, ಇಸಿಓ, ಎಪಿಸಿಓ ಹಾಗೂ ವಿಷಯ ಪರಿಕ್ಷಕರು ಇದ್ದರು. ಸರೋಜಿನಿ ಬಂಡಿವಡ್ಡರ ಪ್ರಾರ್ಥಿಸಿದರು. ಎಂ.ಎಚ್. ಕಂಬಳಿ ಸ್ವಾಗತಿಸಿದರು. ಎಂ.ಎ. ಯರಗುಡಿ ನಿರೂಪಿಸಿದರು. ಎಂ.ಎಚ್. ಸವದತ್ತಿ ವಂದಿಸಿದರು.