ಸಾರಾಂಶ
ಕನಕಗಿರಿ: ಭೀಕರ ಬರಗಾಲಕ್ಕೆ ತುತ್ತಾದ ಒಣ ಬೇಸಾಯ ರೈತರಿಗೆ ರಾಜ್ಯ ಸರ್ಕಾರದ ಜತೆಗೆ ಕೇಂದ್ರ ಸರ್ಕಾರವೂ ಪರಿಹಾರ ಘೋಷಿಸಬೇಕು ಎಂದು ತಾಲೂಕಿನ ಹಿರೇಖೇಡ ರೈತರು ಸಂಸದ ಸಂಗಣ್ಣ ಕರಡಿ ಅವರನ್ನು ಒತ್ತಾಯಿಸಿದರು.
ರೈತ ಮುಖಂಡ ಮರಿಸ್ವಾಮಿ ಮಾತನಾಡಿ, ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತೇವಾಂಶ ಕೊರತೆಯಿಂದ ಹತ್ತಿ, ಮೆಕ್ಕೆಜೋಳ, ಸಜ್ಜೆ, ಹೆಸರು, ಮಡಿಕೆ ಸೇರಿ ವಿವಿಧ ಬೆಳೆ ಹಾನಿಯಾಗಿದೆ. ಹೊಲ, ತೋಟಗಳಲ್ಲಿನ ಬೋರ್‌ವೆಲ್‌ಗಳು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು, ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ಉಂಟಾಗಿದೆ. ಅದಕ್ಕಾಗಿ ತ್ವರಿತ ಕುಡಿಯುವ ನೀರು ಕಲ್ಪಿಸಬೇಕು. ಇನ್ನು ಗ್ರಾಮದಲ್ಲಿ ಸಂತೆ ಮಾರುಕಟ್ಟೆ, ಪಶು ಚಿಕಿತ್ಸಾಲಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜೆಜೆಎಂ ಯೋಜನೆ ಕಳಪೆ: ಹಿರೇಖೇಡದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಮಹಿಳೆಯರು ಹಾಗೂ ಮಕ್ಕಳು ಹೊಲ, ತೋಟಗಳಿಗೆ ಹೋಗಿ ನೀರು ತರುತ್ತಿದ್ದಾರೆ. ಜಲ ಜೀವನ್ ಮಿಷನ್ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ ಎಂದು ರೈತ ಮುಖಂಡ ಹನುಮಂತಪ್ಪ ಹೊಸ್ಕೇರಿ ದೂರಿದರು.ರೈತರಾದ ಶಿವಕುಮಾರ ಬಡಿಗೇರ, ಯಮನೂರಪ್ಪ ಬಂಗಾರಿ, ಹನುಮಂತ ಹೊಸ್ಕೇರಿ, ಮೇಘರಾಜ ಗೌಡ್ರು ಇತರರು ಇದ್ದರು.