ಅಭಿವೃದ್ಧಿ ಕಾರ್ಯಗಳಿಗೆ ಸಲಹೆ ಸೂಚನೆ ನೀಡುವುದು ಸ್ವಾಗತಾರ್ಹ. ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ .
ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ತೀವ್ರ ಆಕ್ಷೇಪ
ಕನ್ನಡಪ್ರಭವಾರ್ತೆ ಅರಸೀಕೆರೆನಗರದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ನೆಪ ಮಾಡಿಕೊಂಡು ಅನಗತ್ಯ ರಾಜಕೀಯ ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಜನರ ಅನುಕೂಲಕ್ಕಾಗಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ತಾತ್ಕಾಲಿಕ ತೊಂದರೆ ದೊಡ್ಡ ವಿಷಯ ಮಾಡಿ ಶಾಸಕರ ವಿರುದ್ಧ ಧಿಕ್ಕಾರ ಕೂಗುವುದು ಜನರ ಮನಸ್ಸಿಗೆ ನೋವುಂಟುಮಾಡುವ ವಿಚಾರವಾಗಿದೆ ಎಂದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ನಗರದಲ್ಲಿ ತಾತ್ಕಾಲಿಕವಾಗಿ ಸ್ಥಳಾಂತರಗೊಂಡಿರುವ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ ಎಂದು ಆರೋಪಿಸಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ಸಲಹೆ ಸೂಚನೆ ನೀಡುವುದು ಸ್ವಾಗತಾರ್ಹ. ಅದನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.
ಅರಸೀಕೆರೆ ನಗರದ ಬಹುಕಾಲದ ಬೇಡಿಕೆಯಾಗಿದ್ದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕಾಗಿ ಕ್ಷೇತ್ರದ ಶಾಸಕರು ಸುಮಾರು 35 ಕೋಟಿ ಅನುದಾನ ತಂದುಕೊಟ್ಟಿದ್ದಾರೆ. ಈಗ ಆ ಕಾಮಗಾರಿ ಜಾರಿ ಹಂತದಲ್ಲಿದ್ದು, ಅದರ ಹಿನ್ನೆಲೆಯಲ್ಲಿ ಹಳೆಯ ಬಸ್ ನಿಲ್ದಾಣ ತಾತ್ಕಾಲಿಕವಾಗಿ ಡಿಪೋ ಪಕ್ಕದ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಇದು ಶಾಶ್ವತ ವ್ಯವಸ್ಥೆಯಲ್ಲ, ಹೊಸ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಮಾತ್ರ ಇರುವ ವ್ಯವಸ್ಥೆ ಎಂದು ಸ್ಪಷ್ಟಪಡಿಸಿದರು.ಪ್ರಯಾಣಿಕರಿಗೆ ತೊಂದರೆ ಆಗದಂತೆ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿಯೇ ಅಗತ್ಯ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುತ್ತಿದೆ. ಕುಡಿಯುವ ನೀರು, ಶೌಚಾಲಯ ಸೇರಿ ಕೆಲವು ವ್ಯವಸ್ಥೆ ಈಗಾಗಲೇ ಮಾಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ತಂಗುದಾಣ, ಸಿಸಿ ಕ್ಯಾಮೆರಾ, ಬೆಳಕಿನ ವ್ಯವಸ್ಥೆ ಸೇರಿದಂತೆ ಇನ್ನಿತರ ಅಗತ್ಯ ಸೌಲಭ್ಯ ಒದಗಿಸುವಂತೆ ಶಾಸಕರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಅಭಿವೃದ್ಧಿ ಕೆಲಸ ನಡೆಯುವಾಗ ಸ್ವಲ್ಪ ಮಟ್ಟಿನ ತೊಂದರೆ ಸಹಜ. ಆದರೆ ಅದನ್ನೇ ರಾಜಕೀಯ ಅಸ್ತ್ರವನ್ನಾಗಿ ಮಾಡಿಕೊಂಡು ಜನರನ್ನು ಪ್ರಚೋದಿಸುವುದು ಒಳ್ಳೆಯ ಬೆಳವಣಿಗೆಯಲ್ಲ. ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವಾಗ ಸಹಕಾರ ನೀಡುವುದು ಪ್ರತಿಯೊಬ್ಬರ ಜವಾಬ್ದಾರಿ. ಜನರ ಹಿತದೃಷ್ಟಿಯಿಂದ ಮಾಡುತ್ತಿರುವ ಕೆಲಸವನ್ನು ಟೀಕಿಸುವ ಮೊದಲು ಅದರ ಉದ್ದೇಶವನ್ನು ಅರ್ಥಮಾಡಿಕೊಳ್ಳಬೇಕು ಎಂದು ಧರ್ಮಶೇಖರ್ ಹೇಳಿದರು.ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಜಾಜೂರು ಸಿದ್ದೇಶ್, ಡಿಪೋ ಮ್ಯಾನೇಜರ್ ಕೃಷ್ಣಪ್ಪ, ನಿಲ್ದಾಣ ಮೇಲ್ವಿಚಾರಕ ವಿರುಪಾಕ್ಷಯ್ಯ ಹಾಗೂ ಇಂಜಿನಿಯರ್ ಶ್ರೀಧರ್ ಸ್ವಾಮಿ ಉಪಸ್ಥಿತರಿದ್ದರು.