ಸಾರಾಂಶ
ಚಿತ್ರದುರ್ಗ: ಪ್ರಖರ ಬಿಸಿಲ ಬೇಗೆ ಹಾಗೂ ಬರ ಪರಿಸ್ಥಿತಿಯಲ್ಲಿ ಜನ ಜಾನುವಾರುಗಳು ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದು, ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಜವಾಬ್ದಾರಿ ಅರಿತು ಕುಡಿವ ನೀರು ಪೂರೈಕೆ ಮಾಡಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಬರ ನಿರ್ವಹಣೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಬೇಸಿಗೆಯಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ತಕ್ಷಣದ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯವಿರುವಲ್ಲಿ ಆಯಾ ವ್ಯಾಪ್ತಿಯ ಅಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗೆ ಸಕಾಲಿಕ ಪರಿಹಾರ ನೀಡುವಂತೆ ಸೂಚಿಸಿದರು.ಈಗಾಗಲೇ ಜಿಲ್ಲೆಯ ಹಲವು ಪ್ರದೇಶಗಳಿಂದ ನಿರಂತರ ನೀರು ಸರಬರಾಜಿನಲ್ಲಿ ವ್ಯತ್ಯಯಗಳಾಗುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಈ ದೂರುಗಳು ಪುನರಾವರ್ತನೆಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು. ಇಂತಹ ಸಂದಿಗ್ಧ ಸಂದರ್ಭದಲ್ಲಿ ಅಧಿಕಾರಿಗಳು ಮಾನವೀಯ ನೆಲೆಯಲ್ಲಿ ಅವಲೋಕಿಸಬೇಕು. ಬಳಲಿದವರಿಗೆ ಶುದ್ಧ ಕುಡಿಯುವ ನೀರು ನೀಡಿ, ದಾಹ ಇಂಗಿಸಿದ ಹೆಮ್ಮೆ ನಿಮಗಿರಲಿ ಎಂದರು.
ಸಮಸ್ಯೆ ತಲೆದೋರಿರುವ ಗ್ರಾಮಗಳಲ್ಲಿ ನೀರನ್ನು ಒದಗಿಸಲು ಕೂಡಲೇ ಕ್ರಮಕೈಗೊಳ್ಳಬೇಕು. ಸ್ಥಳೀಯವಾಗಿ ಲಭ್ಯವಿರುವ ಕೆರೆ, ಬೋರ್‌ವೆಲ್‍ಗಳಲ್ಲಿನ ನೀರನ್ನು ಟ್ಯಾಂಕರ್ ಮೂಲಕ ಒದಗಿಸಲು ಕ್ರಮಕೈಗೊಳ್ಳಬೇಕು. ಟ್ಯಾಂಕರ್ ಮೂಲಕ ನೀರು ಒದಗಿಸಲು ಸರ್ಕಾರ ಈಗಾಗಲೇ ದರ ನಿಗದಿಪಡಿಸಿದೆ. ನೀರು ಸರಬರಾಜಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ದಾಖಲೆಗಳನ್ನು ನಿರ್ವಹಿಸಬೇಕು. ಅಲ್ಲದೇ ಆನ್‍ಲೈನ್‍ನಲ್ಲಿ ದಾಖಲೆಗಳನ್ನು ನಿರ್ವಹಿಸಬೇಕು. ನೀರನ್ನು ಒದಗಿಸುವ ಟ್ಯಾಂಕರ್‌ಗಳಿಗೆ ಕಡ್ಡಾಯವಾಗಿ ಜಿಪಿಎಸ್ ತಂತ್ರಾಂಶ ಅಳವಡಿಸಬೇಕು. ಇದರ ವ್ಯವಸ್ಥಿತ ನಿರ್ವಹಣೆಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.ನೀರು ಸರಬರಾಜು ಮಾಡಿರುವ ಸಂಸ್ಥೆಗಳಿಗೆ ಸಕಾಲದಲ್ಲಿ ಹಣ ಪಾವತಿ ಮಾಡಿ. ಬರ ನಿರ್ವಹಣೆಗೆ ಸಂಬಂಧಿಸಿದಂತೆ ತಾಲೂಕು ಮಟ್ಟದ ಅಧಿಕಾರಿಗಳ ಬೇಡಿಕೆಯಂತೆ ಹಣ ಬಿಡುಗಡೆಗೊಳಿಸಲಾಗುವುದು. ಜಿಲ್ಲೆಯಲ್ಲಿ ಎಲ್ಲಿಯೂ ನೀರು ಸರಬರಾಜಿನಲ್ಲಿ ಯಾವುದೇ ಸಣ್ಣ ಲೋಪವೂ ಆಗದಂತೆ ಎಚ್ಚರವಹಿಸಬೇಕು. ಬೇಸಿಗೆ ಬಿಸಿಲು ಹೆಚ್ಚಾಗಿರುವುದರಿಂದ ಡಿಹೈಡ್ರೇಶನ್, ಸಾಂಕ್ರಾಮಿಕ ರೋಗಗಳು ಹೆಚ್ಚಾಗಬಹುದಾದ ಸಂಭವವಿದ್ದು, ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮಮಟ್ಟದ ಅಧಿಕಾರಿಗಳು ಜನರಿಗೆ ಸರಿಯಾದ ಅರಿವು ಮೂಡಿಸಬೇಕು. ಚರಂಡಿಗಳು, ರಸ್ತೆ ಬದಿಗಳು, ನೀರಿನ ಟ್ಯಾಂಕರ್, ಬೋರ್‌ವೆಲ್‍ಗಳನ್ನು ಸ್ವಚ್ಛಗೊಳಿಸಿ ಗ್ರಾಮವನ್ನು ಶುಚಿಯಾಗಿಟ್ಟುಕೊಳ್ಳುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತೀಕ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಬಸವನಗೌಡ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ್, ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.