ಪ್ರತಿ ನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಕ್ರೀಡೆ, ಯೋಗ ಧ್ಯಾನ ಸೇರಿದಂತೆ ವಿವಿಧ ಚಟುಟಿಕೆಗಳಲ್ಲಿ ತೊಗಿಸಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಶಿಕ್ಷಕರು ಕೇವಲ ಪಠ್ಯಕ್ಕೆ ಸೀಮಿತವಾಗದೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಹ ಪಠ್ಯ ಚಟುವಟಿಕೆಗಳು ಪೂರಕವಾಗುವ ರೀತಿಯಲ್ಲಿ ಶಿಕ್ಷಣ ನೀಡಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಎಂ.ಕೆ.ಶ್ರೀನಿವಾಸ್ ಸಲಹೆ ನೀಡಿದರು.ತಾಲೂಕಿನ ಬಾಚನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲಾ ಆವರಣದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ಕ್ಷೇತ್ರ ಸಂಪನ್ಮೂಲ ಸಮನ್ವಯ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ 2025-26ನೇ ಸಾಲಿನ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಹಪಠ್ಯ ಚಟುವಟಿಕೆಗಳ ಸ್ಪರ್ಧೆ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗುವ ಮೂಲಕ ಸಜೃನಶೀಲತೆ ವೃದ್ಧಿಸಿಕೊಳ್ಳಬಹುದು ಎಂದರು.

ಪ್ರತಿ ನಿತ್ಯ ಒತ್ತಡದಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಸದೃಢತೆ ಬೆಳೆಸಿಕೊಳ್ಳಬೇಕು. ಪ್ರತಿನಿತ್ಯ ಕ್ರೀಡೆ, ಯೋಗ ಧ್ಯಾನ ಸೇರಿದಂತೆ ವಿವಿಧ ಚಟುಟಿಕೆಗಳಲ್ಲಿ ತೊಗಿಸಿಕೊಳ್ಳುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬೇಕೆಂದು ಹೇಳಿದರು.

ನೋಡಲ್ ಅಧಿಕಾರಿ ರವಿ ಮಾತನಾಡಿ, ಶಿಕ್ಷಕರಿಗೆ ಅನೇಕ ಸ್ಪರ್ಧೆ ಆಯೋಜಿಸುವ ಮೂಲಕ ಅವರ ಮಾನಸಿಕ ಒತ್ತಡ ಕಡಿಮೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಶಿಕ್ಷಕರ ಸೂಕ್ತ ಪ್ರತಿಭೆ ಹೊರತರುವ ಇಂಥ ಕಾರ್ಯಕ್ರಮ ಅವಶ್ಯಕವಾಗಿವೆ. ಎಲ್ಲರೂ ಉತ್ತಮ ರೀತಿಯಲ್ಲಿ ಪಾಲ್ಗೊಂಡು ಮುಂದಿನ ಹಂತಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸುವತ್ತ ಚಿಂತನೆ ನಡೆಸಬೇಕು ಎಂದರು.

ಶಿಕ್ಷಕರಿಗಾಗಿ ಗಾಯನ ಸ್ಪರ್ಧೆ, ಆಶುಭಾಷಣ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಸ್ಥಳದಲ್ಲಿ ಪಾಠೋಪಕರಣ ತಯಾರಿಕೆ ಸ್ಪರ್ಧೆ, ಸ್ಥಳದಲ್ಲಿ ಚಿತ್ರ ಬರೆಯುವ ಸ್ಪರ್ಧೆಗಳು ನಡೆದವು. ಪ್ರಮುಖರಾದ ಗಣೇಶ್, ಸುಧಾಕರ್ ಮಾಥ್ಯಲ್, ಮುರುಳೀಧರ್, ಶಿವಕುಮಾರ್, ಮಹದೇವು, ಕುಮಾರ್, ಬಾಬು, ರವಿಕುಮಾರ್, ಮಹದೇವಸ್ವಾಮಿ, ಟಿ.ಎಂ.ನಾಗರಾಜು, ಗುರಲಿಂಗಸ್ವಾಮಿ, ಎಸ್.ಕುಮಾರ್ ಪಾಲ್ಗೊಂಡಿದ್ದರು.