ಸಾರಾಂಶ
ಆಯಾ ಆರ್ಥಿಕ ಸಾಲಿನಲ್ಲಿ ಅನುಷ್ಠಾನಿತ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವತ್ತ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು
ಗದಗ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಹಂಚಿಕೆ ಯೋಜನೆಯಡಿ ಅರ್ಹ ಫಲಾನುಭವಿಗಳ ಆಯ್ಕೆ ಕೈಗೊಂಡು ಕಾಲಮಿತಿಯಲ್ಲಿಯೇ ಸೌಲಭ್ಯ ದೊರಕಿಸಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು.
ಜಿಲ್ಲಾಡಳಿತ ಭವನದ ಕಚೇರಿ ಸಭಾಂಗಣದಲ್ಲಿ ಬುಧವಾರ ಎಸ್.ಸಿ.ಎಸ್.ಪಿ. ಹಾಗೂ ಟಿ.ಎಸ್.ಪಿ.ಯೋಜನೆಯಡಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಆಯಾ ಆರ್ಥಿಕ ಸಾಲಿನಲ್ಲಿ ಅನುಷ್ಠಾನಿತ ಕಾಮಗಾರಿ ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವತ್ತ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಬಿಡುಗಡೆಯಾದ ಅನುದಾನ ಲ್ಯಾಪ್ಸ್ ಆಗದಂತೆ ಹಾಗೂ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು. ಎಸ್‌ಸಿ ಎಸ್‌ಟಿ ಕಾಲನಿಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವಾಗ ಗುಣಮಟ್ಟದ ಕಡೆಗೂ ನಿಗಾ ವಹಿಸಬೇಕು ಎಂದರು.
ಎಸ್‌ಸಿಪಿ ಟಿಎಸ್‌ಪಿ ಯೋಜನೆಗೆ ಬಿಡುಗಡೆಯಾದ ಅನುದಾನ ದುರ್ಬಳಕೆ, ದುರುಪಯೋಗ ಹಾಗೂ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಬಳಕೆ ಆಗದೇ ಇರುವಂತೆ ಸಂಬಂಧಿತ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿರುತ್ತದೆ. ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹೇಶ ಪೋತದಾರ ಮಾತನಾಡಿ, ಎಸ್‌ಸಿಟಿ ಟಿಎಸ್‌ಪಿ ಉಪಹಂಚಿಕೆ ಯೋಜನೆಯಡಿ ಜಿಲ್ಲೆಯಲ್ಲಿ ಇಲಾಖೆಗಳ ಪ್ರಗತಿ ಕುರಿತು ಸಭೆಗೆ ವಿವರಿಸಿದರು.ಈ ಸಂದರ್ಭದಲ್ಲಿ 12 ಇಲಾಖೆಗಳು 100% ರಷ್ಟು ಪ್ರಗತಿ ಸಾಧಿಸಿದ್ದು, ಅಂತಹ ಇಲಾಖೆಗಳ ಸಾಧನೆ ಜಿಲ್ಲಾಧಿಕಾರಿಗಳು ಪ್ರಶಂಸಿಸಿದರು.
ಸಭೆಯಲ್ಲಿ ಜಿಪಂ ಸಿಇಓ ಭರತ್ ಎಸ್, ಎಡಿಸಿ ಅನ್ನಪೂರ್ಣ ಎಂ, ಜಿಪಂ ಉಪಕಾರ್ಯದರ್ಶಿ ಸಿ.ಆರ್. ಮುಂಡರಗಿ, ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಪದ್ಮಾವತಿ ಜಿ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ, ವಾರ್ತಾಧಿಕಾರಿ ವಸಂತ ಮಡ್ಲೂರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದರು.