ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ಕರ್ನಾಟಕ ರಾಜ್ಯ ಗಾಣಿಗರ ಅಭಿವೃದ್ಧಿ ನಿಗಮಕ್ಕೆ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿಶ್ವಾಸ್ ಕುಮಾರ್ ದಾಸ್ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಗಾಣಿಗ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಸಿಗುವಂತೆ ಮಾಡುವಲ್ಲಿ ಶ್ರಮಿಸಲಿ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕೋರಿದರು.ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ಕೋಲಾರಕ್ಕೆ ಆಗಮಿಸಿದ್ದ ಅವರನ್ನು ನಗರದ ಜ್ಯೋತಿ ಎಜುಕೇಷನ್ ಟ್ರಸ್ಟ್‌ನಿಂದ ಸನ್ಮಾನಿಸಿ ಮಾತನಾಡಿದರು.
ಬಯಲು ಸೀಮೆ ಕೋಲಾರದ ಪರಿಸ್ಥಿತಿ ರಾಜ್ಯದ ಇತರೆಡೆಗಳಿಗಿಂತ ಭಿನ್ನವಾಗಿದೆ, ಇಲ್ಲಿನ ಗಾಣಿಗ ಸಮುದಾಯ ಶೈಕ್ಷಣಿಕವಾಗಿ, ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇಂತಹ ಸಮುದಾಯದ ಅಭಿವೃದ್ಧಿಗೆ ನಿಗಮ ಮಾಡಿದ ಸರ್ಕಾರಕ್ಕೂ ಈ ಸಂದರ್ಭದಲ್ಲಿ ಧನ್ಯವಾದ ಸಲ್ಲಿಸುತ್ತೇನೆ, ನಿಗಮದ ಮೊದಲ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್‌ರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಗಾಣಿಗ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯ ತಲುಪಿಸುವ ಕೆಲಸವನ್ನು ಬದ್ಧತೆಯಿಂದ ಮಾಡಿ ಎಂದು ತಿಳಿಸಿ ನೂತನ ಅಧ್ಯಕ್ಷರಿಗೆ ಶುಭ ಕೋರಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಜ್ಯ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಮಾಜಿ ಸಭಾಪತಿ ಸುದರ್ಶನ್‌ರ ಪಾತ್ರ ಪ್ರಮುಖವಾಗಿದೆ, ಅವರ ಗೌರವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಿಗಮವನ್ನು ಮುನ್ನಡೆಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಗಾಣಿಗ ಅಭಿವೃದ್ಧಿ ನಿಗಮಕ್ಕೆ ಮತ್ತಷ್ಟು ಹೆಚ್ಚಿನ ಅನುದಾನ ಪಡೆಯುವ ನಿಟ್ಟಿನಲ್ಲೂ ಪ್ರಯತ್ನ ನಡೆಸುವುದಾಗಿಯೂ ತಿಳಿಸಿದ ಅವರು, ಎಲ್ಲರೊಂದಿಗೆ ಸಮಾಲೋಚಿಸಿ ನಿಗಮದಿಂದ ಸಮುದಾಯದ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಕೈಗೊಳ್ಳಬೇಕಾದ ಕೆಲಸಗಳು, ಯೋಜನೆಗಳ ಕುರಿತು ಕ್ರಮವಹಿಸುವುದಾಗಿ ತಿಳಿಸಿದರು.ಅಖಿಲ ಕರ್ನಾಟಕ ಗಾಣಿಗರ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ಮಾತ್ರವಲ್ಲ, ರಾಜ್ಯ ಗಾಣಿಗರ ಸಂಘಕ್ಕೆ ಸರ್ಕಾರದಿಂದ ೫ ಕೋಟಿ ರು. ಬಿಡುಗಡೆ ಮಾಡಿಸುವಲ್ಲಿಯೂ ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರ ಪರಿಶ್ರಮವಿದೆ, ಅವರು ಹಗಲಿರುಳು ಶ್ರಮಿಸುವ ಮೂಲಕ ಸರ್ಕಾರದ ಮೇಲೆ ಒತ್ತಡ ತಂದು ಈ ಅನುದಾನ ಕೊಡಿಸಿದ್ದಾರೆ ಎಂದು ಧನ್ಯವಾದ ಸಲ್ಲಿಸಿದರು.
ಸಮುದಾಯದ ಸಾಧಕರಿಗೂ ಸನ್ಮಾನ:ಜನತೆ ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಗಾಣಿಗ ಸಮುದಾಯದ ಕುರುಟಹಳ್ಳಿ ರಾಧಾಕೃಷ್ಣ ತಮ್ಮದೇ ಆದ ಪರಿಶ್ರಮದಿಂದ ಕೃಷಿ ಸಾಧಕರಾಗಿ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗೆ ಭಾಜನರಾಗಿರುವುದು ಗಾಣಿಗ ಸಮುದಾಯದ ಹೆಮ್ಮೆ ಎಂದು ತಿಳಿಸಿ ಅವರನ್ನೂ ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಜ್ಯೋತಿ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ನಾಗನಾಳ ಮಂಜುನಾಥ್ ಸ್ವಾಗತಿಸಿದ ಕಾರ್ಯಕ್ರಮದಲ್ಲಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಗೋಪಾಲಕೃಷ್ಣ, ಖಜಾಂಚಿ ಅಪ್ಪಯ್ಯಶೆಟ್ಟಿ, ಟ್ರಸ್ಟ್ ವ್ಯವಸ್ಥಾಪಕ ಸುನೀಲ್, ಜ್ಯೋತಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಅಧ್ಯಕ್ಷ ಮಧುಸೂಧನ್, ನಿರ್ದೇಶಕರಾದ ಡಾ.ಎಂ.ಶಂಕರ್, ಡಾ.ಎಂ.ಶ್ರೀನಿವಾಸ್, ಎಂ.ವೀರಭದ್ರಪ್ಪ, ಕುರುಬೂರಿನ ನಿವೃತ್ತ ಇಂಜಿನಿಯರ್ ರಾಮಚಂದ್ರಪ್ಪ, ಸಮುದಾಯದ ಮುಖಂಡರಾದ ಆನಂದಕುಮಾರ್, ವೆಂಕಟರಾಂ, ಟಿ.ರಾಮಚಂದ್ರಪ್ಪ, ಶಿವಕುಮಾರ್, ಮಂಜುನಾಥ್, ಚಲಪತಿ, ಅರ್ಜುನ್, ವೆಂಕಟಶಿವಪ್ಪ, ಕೆಂಪಯ್ಯ ಇದ್ದರು.