ಕಂಪ್ಲಿ: ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣ ನಿರ್ಮೂಲನೆ ಮಾಡುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ. ಮಕ್ಕಳನ್ನು ದುಡಿಮೆಯಿಂದ ಹೊರತಂದು ಶಿಕ್ಷಣದ ಮುಖ್ಯವಾಹಿನಿಗೆ ಸೇರಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು ಎಂದು ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕ ಎ.ಮೌನೇಶ್ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಬಾಲ ಕಾರ್ಮಿಕ ನಿರ್ಮೂಲನಾ ಟಾಸ್ಕ್‌ಫೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಾರ್ಮಿಕರ ಮಕ್ಕಳು, ಬಾಲ ಕಾರ್ಮಿಕ ಮಕ್ಕಳು, ಅನಾಥರು, ಎಚ್‌ಐವಿ ಸೋಂಕಿನಿಂದ ಬಾಧಿತ ಮಕ್ಕಳು ಸೇರಿದಂತೆ ವಿಮುಕ್ತ ದೇವದಾಸಿ ಸಮುದಾಯದ ಮಕ್ಕಳಿಗೆ ಸರ್ಕಾರದ ವಸತಿ ಶಾಲೆಗಳು ಹಾಗೂ ವಸತಿ ನಿಲಯಗಳಲ್ಲಿ ವಿಶೇಷ ಮೀಸಲಾತಿ ಕಲ್ಪಿಸಲಾಗಿದೆ. ಅರ್ಹ ಮಕ್ಕಳನ್ನು ಗುರುತಿಸಿ ಈ ಸೌಲಭ್ಯಗಳ ಪ್ರಯೋಜನ ದೊರಕುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

15ರಿಂದ 18 ವರ್ಷದೊಳಗಿನ ದುಡಿಯುವ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಜಿಲ್ಲೆಯಲ್ಲೇ ವಿಶೇಷ ಕೌಶಲ ತರಬೇತಿ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಈ ತರಬೇತಿಯಿಂದ ಯುವಕರಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶಗಳು ಹೆಚ್ಚಲಿದ್ದು, ಅವರ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಇತ್ತೀಚೆಗೆ ಕಂಪ್ಲಿ ಪಟ್ಟಣದ ವಿವಿಧ ಅಂಗಡಿಗಳು, ಗ್ಯಾರೇಜ್‌ಗಳು, ಬಟ್ಟೆ ಮಳಿಗೆಗಳು, ಹೋಟೆಲ್‌ಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ನಾಲ್ವರು ಬಾಲ ಕಾರ್ಮಿಕರನ್ನು ರಕ್ಷಿಸಲಾಗಿದೆ. ಸಂಬಂಧಪಟ್ಟ ಮಕ್ಕಳ ಶಾಲಾ ದಾಖಲಾತಿ ಹಾಗೂ ವಯೋಮಾನದ ದೃಢೀಕರಣ ಪತ್ರಗಳನ್ನು ಪರಿಶೀಲಿಸಿದ ಬಳಿಕ ಬಾಲ ಕಾರ್ಮಿಕರನ್ನು ದುಡಿಸಿಕೊಂಡಿರುವ ಅಂಗಡಿ ಮಾಲೀಕರ ವಿರುದ್ಧ ಕಾನೂನು ಪ್ರಕಾರ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಬಾಲ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಇಂತಹ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವ ಮೂಲಕ ಇಲಾಖೆಯೊಂದಿಗೆ ಸಹಕರಿಸಬೇಕು. ಬಾಲ್ಯವು ಶಿಕ್ಷಣ ಮತ್ತು ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮೀಸಲಾಗಿರಬೇಕೇ ಹೊರತು ದುಡಿಮೆಗೆ ಅಲ್ಲ ಎಂಬ ಅರಿವು ಸಮಾಜದಲ್ಲಿ ಮೂಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕಾರ್ಮಿಕ ನಿರೀಕ್ಷಕ ಶಿವಶಂಕರ ತಳವಾರ, ಅಧಿಕಾರಿಗಳಾದ ಎನ್.ಬಿ. ರೇಣುಕಾರಾಧ್ಯ, ಮಹಾಂತೇಶ, ಕೆ. ವಿರೂಪಾಕ್ಷಪ್ಪ, ಟಿ. ಜ್ಯೋತಿ, ನವ್ಯಾ ಪ್ರಶಾಂತ್, ಪಿ. ಬಸವರಾಜ, ಚಂದ್ರಕಲ, ಮದನ್, ವಿಘ್ನೇಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.