ಸಾರಾಂಶ
- ಬೆಂಗಳೂರಿನಲ್ಲಿ ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆ ಸಭೆಯಲ್ಲಿ ಶಾಸಕ ಬಸವಂತಪ್ಪ ಮನವಿ
- - - ಕನ್ನಡಪ್ರಭ ವಾರ್ತೆ ದಾವಣಗೆರೆಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ 22 ಕೆರೆಗಳ ಏತ ನೀರಾವರಿ ಯೋಜನೆ ಹೊಸ ಪೈಪ್ ಲೈನ್ ಕಾಮಗಾರಿ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಕೆ.ಎಸ್. ಬಸವಂತಪ್ಪ ಮನವಿ ಮಾಡಿದರು.
ಬೆಂಗಳೂರಿನ ನೀರಾವರಿ ನಿಗಮ ಕಚೇರಿ ಸಭಾಂಗಣದಲ್ಲಿ ಬುಧವಾರ ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.ತುಂಗಭದ್ರಾ ನದಿಯಿಂದ 22 ಕೆರೆಗಳ ಏತ ನೀರಾವರಿ ಯೋಜನೆ ಮೂಲಕ ನಮ್ಮ ಕ್ಷೇತ್ರದ ಭಾಗಗಳ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೊಳಿಸಲಾಗಿತ್ತು. ಎಲ್ ಅಂಡ್ ಟಿ ಕಂಪನಿ ಯೋಜನೆಯ ಕಾಮಗಾರಿ ನಡೆಸಿತ್ತು. ಕಳಪೆ ಕಾಮಗಾರಿಯಿಂದ ಇವತ್ತಿನವರೆಗೂ ಆ ಕೆರೆಗಳಿಗೆ ನೀರು ತುಂಬಿಲ್ಲ. ಹೊಸ ಕಾಮಗಾರಿ ಕೈಗೊಂಡು ಕೆರೆಗಳಿಗೆ ನೀರು ತುಂಬಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನೀರಾವರಿ ನಿಗಮ ಮಂಡಳಿಯಲ್ಲಿ ಕೆರೆಗಳ ಅಭಿವೃದ್ಧಿಗೆ ₹22 ಕೋಟಿ ಮೀಸಲಿಟ್ಟಿದ್ದು, ಹೆಚ್ಚುವರಿಯಾಗಿ ₹50 ಕೋಟಿ ಬಿಡುಗಡೆ ಮಾಡುವಂತೆ ನಿಮಗೆ ಮನವಿ ಸಲ್ಲಿಸಲಾಗಿತ್ತು ಎಂದು ಡಿಸಿಎಂ ಅವರಿಗೆ ಮನವರಿಕೆ ಮಾಡಿದರು.
ಮಾಯಕೊಂಡ ಕ್ಷೇತ್ರದಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶ ಹೆಚ್ಚು ವ್ಯಾಪ್ತಿ ಹೊಂದಿದ್ದು, ಭದ್ರಾ ಕಾಲುವೆಗಳು, ಸೇತುವೆಗಳನ್ನು ನಿರ್ಮಿಸಿ, ಸುಮಾರು 50 ವರ್ಷಗಳೇ ಕಳೆದಿವೆ. ಭದ್ರಾ ಕಾಲುವೆಗಳು, ಸೇತುವೆಗಳು ಶಿಥಿಲಗೊಂಡು ಕಿತ್ತುಹೋಗಿವೆ. ಇದರಿಂದ ಕಾಲುವೆಗಳಿಗೆ ನೀರು ಬಿಡುಗಡೆ ಮಾಡಿದಾಗ, ನೀರು ರೈತರ ಗದ್ದೆಗಳಿಗೆ ನುಗ್ಗಿ, ಬೆಳೆ ಹಾನಿಯಾಗಿ, ರೈತರು ಕಂಗಾಲು ಆಗುತ್ತಿದ್ದಾರೆ. ಲಕ್ಷಾಂತರ ರು. ನಷ್ಟ ಅನುಭವಿಸುತ್ತಿದ್ದಾರೆ. ರೈತರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸಬೇಕು ಎಂದು ಮನವಿ ಮಾಡಿದರು.ಶಾಸಕ ಕೆ.ಎಸ್.ಬಸವಂತಪ್ಪ ಮನವಿಗೆ ಸ್ಪಂದಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಈ ಬಗ್ಗೆ ಕ್ರಮ ತೆಗೆದುಕೊಂಡು ಕೆರೆಗಳ ಅಭಿವೃದ್ಧಿ ಮತ್ತು ಭದ್ರಾ ಕಾಲುವೆಗಳ ಆಧುನೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
- - - -29ಕೆಡಿವಿಜಿ34:ಬೆಂಗಳೂರಿನ ನೀರಾವರಿ ನಿಗಮದ ಕಚೇರಿ ಸಭಾಂಗಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಭಾಗವಹಿಸಿದ್ದರು.