ರೋಣ ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿ

| Published : Dec 16 2024, 12:50 AM IST

ಸಾರಾಂಶ

ರೋಣ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು

ರೋಣ: ರೋಣ ಭಾಗದ ರೈತರಿಗೆ ಅನುಕೂಲವಾಗುವ ಕೃಷ್ಣಾಭಾಗ್ಯ ಜಲ ನಿಗಮ, ಮಲಪ್ರಭಾ ಬಲದಂಡೆ ಕಾಲುವೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಹಾಗೂ ಜಮೀನುಗಳಿಗೆ ನೀರು ಒದಗಿಸುವ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಲ್ಲಿ ರೋಣ ಶಾಸಕ ಜಿ.ಎಸ್‌.ಪಾಟೀಲ ವಿನಂತಿಸಿದರು.

ಅವರು ಭಾನುವಾರ ಸಂಜೆ ಜಿಲ್ಲಾಡಳಿತ, ಜಿಪಂ ವತಿಯಿಂದ ರೋಣ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯಲ್ಲಿನ ₹196 ಕೋಟಿಗೂ ಹೆಚ್ಚು ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ರೋಣ ಮತಕ್ಷೇತ್ರದ ಗ್ರಾಮೀಣ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಮತಕ್ಷೇತ್ರದ ಜನತೆ ನನ್ನ ಮೇಲಿಟ್ಟ ವಿಶ್ವಾಸಕ್ಕೆ ತಕ್ಕಂತೆ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಪ್ರಾಮಾಣಿಕವಾಗಿ ದುಡಿಯುತ್ತೇನೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತಕ್ಕೆ ಬರಲು ಕನಕಪುರ ಬಂಡೆ ಡಿ.ಕೆ. ಶಿವಕುಮಾರ ಜತೆಗೆ ರಾಜ್ಯದ ಜನತೆ ನಿಂತಿದ್ದರು. 1989ರಿಂದ ನಾನು ಸ್ಪರ್ಧೆ ಮಾಡುತ್ತಾ ಬಂದಿದ್ದೇನೆ. ನನ್ನ ಹೊರತುಪಡಿಸಿ ಒಬ್ಬರೂ ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಹಾಕಿಲ್ಲ. ಇದರ ಋಣ ನಾ ತೀರಿಸಬೇಕಿದೆ ಎಂದರು.

ಭಾಗ್ಯಗಳ ಮೂಲಕ ಸರ್ಕಾರದ ಖಜಾನೆ ಖಾಲಿಯಾಗಿದೆ ಎಂದು ವಿರೋಧ ಪಕ್ಷದವರ ಆರೋಪಕ್ಕೆ ಸಾಕ್ಷಿಯಾಗಿಯೇ ರೋಣ ಮತಕ್ಷೇತ್ರದಲ್ಲಿ ₹ 196 ಕೋಟಿಗೂ ಹೆಚ್ಚು ವೆಚ್ಚದಲ್ಲಿ ವಿವಿಧ ಕಾಮಗಾರಿಗಳ ಚಾಲನೆ ಕಾರ್ಯಕ್ರಮ ಹಮ್ಮಿಕೊಂಡಿದ್ದನ್ನು ವಿರೋಧ ಪಕ್ಷದವರು ನೋಡಬೇಕಿದೆ. ಖಜಾನೆ ಖಾಲಿ ಆಗಿದ್ದರೆ ಇಷ್ಟೊಂದು ಅನುದಾನ ರೋಣ ಕ್ಷೇತ್ರಕ್ಕೆ ಬರುತ್ತಿತ್ತೆ? ಗ್ಯಾರಂಟಿ ಭಾಗ್ಯಗಳ ಮೂಲಕ ಜನತೆ ನೆಮ್ಮದಿ ಮತ್ತು ಸ್ವಾವಲಂಬನೆ ಜೀವನ ಸಾಗಿಸುತ್ತಿದ್ದು, ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಹಸಿವು ಮುಕ್ತ ರಾಜ್ಯ ನಮ್ಮದಾಗಿದೆ. ₹ 50 ಕೋಟಿ ವೆಚ್ಚದಲ್ಲಿ ರೋಣ ಪಟ್ಟಣಕ್ಕೆ ಜಿಟಿಟಿಸಿ ಕಾಲೇಜು ಮಂಜೂರಾಗಿದೆ. ₹ 10 ಕೋಟಿ ವೆಚ್ಚದಲ್ಲಿ ಜಕ್ಕಲಿ ಗ್ರಾಮದಲ್ಲಿ ದಿ. ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನ ನಿರ್ಮಿಸಲಾಗುವುದು. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲು 6 ವಸತಿ ನಿಲಯಗಳನ್ನು ರೋಣ ಭಾಗಕ್ಕೆ ಮಂಜೂರಾಗಿವೆ. ಸಿಎಂ ಸಿದ್ದರಾಮಯ್ಯ ಭಾಗ್ಯಗಳ ಸರದಾರರಾಗಿದ್ದಾರೆ ಎಂದರು.

₹196 ಕೋಟಿಗೂ ಹೆಚ್ಚು ವೆಚ್ಚದಲ್ಲಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು‌. ಡಿಸಿಎಂ ಡಿ.ಕೆ. ಶಿವಕುಮಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಮೇಳ ಉದ್ಘಾಟಿಸಿದರು.

ಸಿಎಂ ಸಿದ್ದರಾಮಯ್ಯ ಅವರಿಗೆ ರೋಣ ಪುರಸಭೆ ಹಾಗೂ ಗಜೇಂದ್ರಗಡ ಪುರಸಭೆ ವತಿಯಿಂದ ಪೌರ ಸನ್ಮಾನ. ರೋಣ ತಾಲೂಕು ಹಾಲುಮತ ಸಮಾಜ, ಜಕ್ಕಲಿ ಗ್ರಾಮಸ್ಥರು, ಪುರಸಭೆ ಸದಸ್ಯ ಮಲ್ಲಯ್ಯ ಮಹಾಪುರುಷಮಠ, ಜಿ.ಎಸ್. ಪಾಟೀಲ ಅಭಿಮಾನಿಗಳ ಬಳಗ ವತಿಯಿಂದ ಸನ್ಮಾನ ಜರುಗಿತು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ, ಸಚಿವ ಶರಣಪ್ರಕಾಶ ಪಾಟೀಲ, ಬದಾಮಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್. ಪಾಟೀಲ, ಮಾಜಿ ಸಂಸದ ಆರ್.ಎಸ್. ಪಾಟೀಲ, ರೋಣ ಪುರಸಭೆ ಅಧ್ಯಕ್ಷೆ ಗೀತಾ ಮಾಡಲಗೇರಿ, ಉಪಾಧ್ಯಕ್ಷ ದುರ್ಗಪ್ಪ ಹಿರೇಮನಿ, ಟಿ. ಈಶ್ವರ, ಮಾಜಿ ಶಾಸಕ ಬಿ.ಆರ್. ಯಾವಗಲ್ಲ, ರಾಮಕೃಷ್ಣ ದೊಡ್ಡಮನಿ, ರಾಮಣ್ಣ ಲಮಾಣಿ, ಐ.ಎಸ್. ಪಾಟೀಲ, ಪುರಸಭೆ ಸದಸ್ಯ ಮಿಥುನ ಜಿ. ಪಾಟೀಲ, ಪ್ರಭು ಮೇಟಿ, ದಶರಥ ಗಾಣಿಗೇರ, ವೀರಣ್ಣ ಶೆಟ್ಟರ್ ಉಪಸ್ಥಿತರಿದ್ದರು. ಜಿಲ್ಲಾಧಿಕಾರಿ ಗೋವಿಂದರಡ್ಡಿ ಸ್ವಾಗತಿಸಿದರು.