ಇಂದಿನ ಮಕ್ಕಳಿಗೆ ಪೋಷಕರು ಪೋಷಕಾಂಶಗಳಿಂದ ಕೂಡಿದ ಆಹಾರ ನೀಡದೆ ಸಿಹಿ ಮತ್ತಿತರ ತಿಂಡಿ ತಿನಿಸುಗಳನ್ನು ನೀಡುವ ಜೊತೆಗೆ ಮೊಬೈಲ್ ಕೊಟ್ಟು ಅವರ ದೈಹಿಕ, ಮಾನಸಿಕ ಆರೋಗ್ಯ ಹದಗೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆತಂಕ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ, ಕೆ.ಆರ್. ಪುರ. ಇಂದಿನ ಮಕ್ಕಳಿಗೆ ಪೋಷಕರು ಪೋಷಕಾಂಶಗಳಿಂದ ಕೂಡಿದ ಆಹಾರ ನೀಡದೆ ಸಿಹಿ ಮತ್ತಿತರ ತಿಂಡಿ ತಿನಿಸುಗಳನ್ನು ನೀಡುವ ಜೊತೆಗೆ ಮೊಬೈಲ್ ಕೊಟ್ಟು ಅವರ ದೈಹಿಕ, ಮಾನಸಿಕ ಆರೋಗ್ಯ ಹದಗೆಡಿಸುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಆತಂಕ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ರಾಘವಿ ಚಾರಿಟಬಲ್ ಟ್ರಸ್ಟ್ ಮತ್ತು ಸೇವಾ ಫೌಂಡೇಷನ್‌ನಿಂದ ಆಯೋಜಿಸಲಾಗಿದ್ದ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೇವಾ ವಲಯದಲ್ಲಿನ ಸಾಧಕರಿಗೆ ಆರೋಗ್ಯ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಪೋಷಕರ ಪಾತ್ರ ಬಹುಮುಖ್ಯವಾಗಿದ್ದು, ಹಾಗಾಗಿ ಮಕ್ಕಳ ಲಾಲನೆ, ಪಾಲನೆ ಬಗ್ಗೆ ಪೋಷಕರ ಜವಾಬ್ದಾರಿ ಹೆಚ್ಚಿದೆ. ಜಪಾನ್ ದೇಶದ ಆಹಾರ ಪದ್ಧತಿಯನ್ನು ಅನುಸರಿಸಬೇಕು. ದೈಹಿಕ ಆರೋಗ್ಯದ ಜೊತೆಗೆ ಪೌಷ್ಟಿಕ ಆಹಾರವನ್ನು ಮಕ್ಕಳಿಗೆ ನೀಡಬೇಕೆಂದು ತಿಳಿಸಿದರು. ರಾಘವಿ ಚಾರಿಟಬಲ್ ಟ್ರಸ್ಟ್ ಆರೋಗ್ಯ ಸೇವೆಯನ್ನು ಸಲ್ಲಿಸುತ್ತಿರುವ ಕಡೆಯ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿಗಳನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ಕೇಂದ್ರ ರಾಸಾಯನಿಕ. ರಸಗೊಬ್ಬರ ಸಚಿವರಾಗಿದ್ದಾಗ ತಾವು ಇಡೀ ದೇಶಕ್ಕೆ ಔಷಧಗಳನ್ನು ಪೂರೈಸುವ ಅತ್ಯಂತ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದೆ. ಆ ಸಂದರ್ಭದಲ್ಲಿ ಆರೋಗ್ಯ ವಲಯದ ಸಿಬ್ಬಂದಿ ಕೊಡುಗೆ ಮೆಚ್ಚುವಂತಹದ್ದು ಎಂದರು.ರಾಘವಿ ಚಾರಿಟಬಲ್ ಟ್ರಸ್ಟ್ ಹಾಗೂ ಸೇವಾ ಫೌಂಡೇಷನ್ ಅಧ್ಯಕ್ಷ ರಾಘವೇಂದ್ರ ಸುಂಟ್ರಳ್ಳಿ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸೇವಾ ವಲಯದಲ್ಲಿ ರಾಜ್ಯಾದ್ಯಂತ ಕರ್ತವ್ಯ ನಿರ್ವಹಿಸುವ ವೈದ್ಯರು, ತಜ್ಞ ವೈದ್ಯರು, ಅರೆ ವೈದ್ಯಕೀಯ ಮತ್ತು ಇತರೆ 100ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಗೆ ರಾಜ್ಯಮಟ್ಟದ 2ನೇ ವರ್ಷದ ಆರೋಗ್ಯ ಜ್ಯೋತಿ ಪ್ರಶಸ್ತಿ ಪ್ರದಾನ ಮಾಡಲಾಯಿತು ಎಂದರು.
ಕಾರ್ಯಕ್ರಮದಲ್ಲಿ ಮೈಸೂರಿನ ಅರ್ಜುನ್ ಅವಧೂತ ಗುರೂಜಿ, ಶಾಸಕರಾದ ಬೇಲೂರು ಗೋಪಾಲಕೃಷ್ಣ, ನಟಿಯರಾದ ಸುಧಾರಾಣಿ, ಕಾರುಣ್ಯ ರಾಮ್, ಲಕ್ಷ್ಮೀ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸಂಬಾಶಿವ, ಡಿ.ಜಯಮಾಲಾ, ಡಾ.ಶ್ವೇತ ಜಾಕಾ ಮತ್ತಿತರರು ಇದ್ದರು.