ಸಾರಾಂಶ
ಶಹಾಪುರ ತಾಲೂಕಿನ ದೋರನಹಳ್ಳಿಯ ಡಿ.ಡಿ.ಯು ಸೆಂಟ್ರೇಲ್ ಸ್ಕೂಲ್ ನಲ್ಲಿ ನಡೆದ 4ನೇ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ಶಹಾಪುರ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ವ್ಯವಸ್ಥೆ ಕಲ್ಪಿಸಿ ಕೊಡುವಲ್ಲಿ ಪಾಲಕರ ಪಾತ್ರ ಪ್ರಮುಖವಾಗಿದೆ ಎಂದು ಡಿ. ದೇವರಾಜು ಅರಸು ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಡಾ. ಭೀಮಣ್ಣ ಮೇಟಿ ಹೇಳಿದರು.ತಾಲೂಕಿನ ದೋರನಹಳ್ಳಿಯ ಡಿ.ಡಿ.ಯು ಸೆಂಟ್ರೇಲ್ ಸ್ಕೂಲ್ ನಲ್ಲಿ ನಡೆದ 4ನೇ ವಾರ್ಷಿಕೋತ್ಸವದ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳಿಗೆ ದೊಡ್ಡ ಶಾಲೆಗೆ ಸೇರಿಸಿದ್ದೇವೆ, ಶಿಕ್ಷಕರು ನೋಡಿಕೊಳ್ಳುತ್ತಾರೆ ಎಂದು ಶಿಕ್ಷಕರ ಮೇಲೆ ಹೊರೆ ಹಾಕುವುದು, ಅವಲಂಬಿತರಾಗುವುದು ಮುಂತಾದ ಮನೋಭಾವ ತೊರೆದು ಮಕ್ಕಳ ಶಿಕ್ಷಣ ಬಗ್ಗೆ ಕಾಳಜಿ ವಹಿಸಿ, ಮಕ್ಕಳಿಗಾಗಿ ಸಮಯ ನೀಡಿ ಅವರ ಪ್ರಗತಿಶೀಲತೆಯ ಬಗ್ಗೆ ತಿಳಿದುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.ದೋರನಹಳ್ಳಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ವರಿ ಗುತ್ತೆದಾರ ಮಾತನಾಡಿ, ಮಕ್ಕಳ ಮನಸ್ಸು ಹೂವು ಇದ್ದ ಹಾಗೆ, ಅದನ್ನು ಬಾಲ್ಯದಲ್ಲಿ ಚಿವುಟದೇ ಒಳ್ಳೆಯ ಶಿಕ್ಷಣ ನೀಡುವತ್ತ ಪಾಲಕರು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಸಿ.ಆರ್.ಪಿ. ಜಗದೀಶ ಪೂಜಾರಿ, ಶಾಲೆಯ ಮುಖ್ಯ ಗುರು ಜುವೆಲ್ ಜೋ, ಕಾಡಯ್ಯ ಸ್ವಾಮಿ ಹಾಗೂ ಮುಂತಾದವರು ಮಾತನಾಡಿದರು.ಶ್ರೀರಕ್ಷಾ, ಖುಷಿ, ಮೊಹ್ಮದ್ ಆಸೀಫ್, ಬಿಂದುಶ್ರೀ, ಮೇಘನಾ, ವಿದ್ಯಾಶ್ರೀ, ಸಿಂಚನಾ, ಸ್ಪೂರ್ತಿ, ಭಾಗ್ಯಶ್ರೀ, ಅಮೂಲ್ಯ, ಸಾನಿಕಾ,ಪ್ರೀತಿ ಮುಂತಾದ ವಿದ್ಯಾರ್ಥಿಗಳಿಗೆ 2023-24ನೇ ಸಾಲಿನ ವರ್ಷದ ಉತ್ತಮ ವಿದ್ಯಾರ್ಥಿಗಳಿಗೆ ಡಿ. ದೇವರಾಜ ಅರಸು ಅವಾರ್ಡ್ ನೀಡಿ ಗೌರವಿಸಲಾಯಿತು.