ಸಾರಾಂಶ
ಕನ್ನಡಪ್ರಭ ವಾರ್ತೆ ಪಾವಗಡ
ಇಲ್ಲಿನ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನಕ್ಕೆ ನಿತ್ಯ ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು ಜನಜಂಗುಳಿ ಹಾಗೂ ವಾಹನಗಳ ದಟ್ಟಣೆಯಿಂದ ನುಕುನುಗ್ಗಲು, ತೀವ್ರ ಟ್ರಾಫಿಕ್ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಕೂಡಲೇ ಪಟ್ಟಣದ ತುಮಕೂರು ರಸ್ತೆಯ ಕರ್ನಾಟಕ ಬ್ಯಾಂಕ್‌ನಿಂದ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ವರೆವಿಗೆ ಮೇಲ್ಸೇತುವೆ ನಿರ್ಮಾಣ ಹಾಗೂ ಇತರೇ ಮೂಲಭೂತ ಸೌಲಭ್ಯ ಕಲ್ಪಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಸಮಾಜ ಸೇವಕ ವಿ.ನಾಗಭೂಷಣರೆಡ್ಡಿ ಇಲ್ಲಿನ ಶ್ರೀ ಶನೇಶ್ವರಸ್ವಾಮಿ ದೇಗುಲದ ಆಡಳಿತ ಮಂಡಳಿಗೆ ಒತ್ತಾಯಿಸಿದ್ದಾರೆ.ಈ ಕುರಿತು ಸುದ್ದಿಗಾರರ ಜತೆ ಮಾತನಾಡಿದ ರೆಡ್ಡಿ, ಪಾವಗಡ ಪಟ್ಟಣದಲ್ಲಿ ಐತಿಹಾಸಿಕ ಹಿನ್ನಲೆಯ ಶ್ರೀ ಶನೇಶ್ವರಸ್ವಾಮಿ ಹಾಗೂ ಅಮ್ಮ ಜೇಷ್ಠಾಮಾತೆ, ಶೀತಾಲಂಭಿಕಾದೇವಿಯ ದೇವಸ್ಥಾನ ನೆಲೆಯಾಗಿದ್ದು ಶ್ರೀ ಶನೇಶ್ವರಸ್ವಾಮಿ ಮಹಿಮೆಯಿಂದ ವಿವಿಧ ನಗರ ಪ್ರದೇಶದಿಂದ ನಿತ್ಯ ಅಪಾರ ಸಂಖ್ಯೆಯ ಭಕ್ತರು ಪಟ್ಟಣಕ್ಕೆ ಆಗಮಿಸಿ ದೇಗುಲದಲ್ಲಿ ಪೂಜಾ ಕಂಕೈರ್ಯ ನೆರೆವೇರಿಸುತ್ತಿದ್ದಾರೆ. ಶ್ರಾವಣ ಮಾಸದಲ್ಲಿ 10ದಿನಗಳ ಕಾಲ ಶ್ರೀ ಶನೇಶ್ವರಸ್ವಾಮಿಯ ಜಾತ್ರೆ ಮಹೋತ್ಸವ ನಡೆಯಲಿದ್ದು ಲಕ್ಷಾಂತರ ಸಂಖ್ಯೆಯ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುವುದು ಸಾಮಾನ್ಯವಾಗಿದೆ. ಇಂತಹ ಮಹಿಮೆಯಳ್ಳ ದೇವರಿಗೆ ನಿತ್ಯ ಅಪಾರ ಸಂಖ್ಯೆಯಲ್ಲಿ ಆಗಮಿಸುವ ಮಾಹಿತಿ ಇದ್ದರೂ ಭಕ್ತರಿಗೆ ಸೂಕ್ತ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಎಸ್‌ಎಸ್‌ಕೆ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಈ ವಿಷಯದಲ್ಲಿ ಆಡಳಿತ ಮಂಡಳಿ ವಿಳಂಬ ಮಾಡಿದರೆ,ಇಲ್ಲಿನ ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಬಳಿ ಅನಿದಿಷ್ಟಾವಧಿ ಸತ್ಯಾಗ್ರಹ ಹೂಡುವುದಾಗಿ ಅವರು ನಾಗಭೂಷಣರೆಡ್ಡಿ ಎಚ್ಚರಿಕೆ ನೀಡಿದ್ದಾರೆ.