ಸಾರಾಂಶ
- ಜಿಪಂ ಕಚೇರಿ ಎದುರು ಸಿಐಟಿಯು ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಿಇಒ ಮುಖೇನ ಸರ್ಕಾರಕ್ಕೆ ಮನವಿ - - -
* ಬೇಡಿಕೆಗಳೇನು? - ಸ್ವಚ್ಛವಾಹಿನಿ ಸಿಬ್ಬಂದಿಗೆ ಆರೋಗ್ಯ ವಿಮೆ ನೀಡಬೇಕು- ಸರ್ಕಾರದಿಂದಲೇ ನೌಕರರು ತರಬೇತಿ ಪಡೆದಿದ್ದು, ವರ್ಷಪೂರ್ತಿ ಕೆಲಸ ಕೊಡಬೇಕು
- ಕನಿಷ್ಠ ₹26 ಸಾವಿರ ವೇತನ ನಿಗದಿಪಡಿಸಿ, ಸೇವೆ ಕಾಯಂಗೊಳಿಸಬೇಕು- - - ಕನ್ನಡಪ್ರಭ ವಾರ್ತೆ, ದಾವಣಗೆರೆ
ತರಬೇತಿ ಪಡೆದ ಸ್ವಚ್ಛವಾಹಿನಿ ನೌಕರರಿಗೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ನೀಡಿಕೆ, ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನವೀಕರಣ, ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಒತ್ತಾಯಿಸಿ ರಾಜ್ಯ ಗ್ರಾಪಂ ಸ್ವಚ್ಛವಾಹಿನಿ ಆಟೋ ಚಾಲಕರು ಮತ್ತು ಸಹಾಯಕಿಯರ ಸಂಘ ಸದಸ್ಯರು ಸಿಐಟಿಯು ಜಿಲ್ಲಾ ಘಟಕ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದ ನೌಕರರು, ಸಹಾಯಕಿಯರು ಬೇಡಿಕೆಗಳನ್ನು ಈಡೇರಿಸುವಂತೆ ಘೋಷಣೆಗಳನ್ನು ಕೂಗಿದರು. ಜಿಪಂ ಸಿಇಒ ಸುರೇಶ ಬಿ. ಇಟ್ನಾಳ್ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಿದರು.ಪ್ರತಿಭಟನೆ ನೇತೃತ್ವ ವಹಿಸಿದ್ದ ಸಂಘಟನೆ ಜಿಲ್ಲಾ ಸಂಚಾಲಕ ಕೆ.ಎಚ್.ಆನಂದರಾಜ ಮಾತನಾಡಿ, ಸ್ವಚ್ಛವಾಹಿನಿ ಮಹಿಳಾ ಕಾರ್ಮಿಕರು ಕಸ ವಿಲೇವಾರಿ ಮಾಡುವಲ್ಲಿ ಶ್ರಮಿಸುತ್ತಿದ್ದಾರೆ. ಕಸ ಬೇರ್ಪಡಿಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರದ ಸ್ವಚ್ಛಭಾರತ ಅಭಿಯಾನ ಯಶಸ್ಸಿಗೆ ಈ ಮಹಿಳೆಯರ ಕೊಡುಗೆ ಇದೆ. ಗ್ರಾಮಗಳ ಸ್ವಚ್ಛತೆ ಜವಾಬ್ದಾರಿ ಹೊತ್ತಿರುವ ಸ್ವಚ್ಛವಾಹಿನಿ ನೌಕರರಿಗೆ ಮೂಲಸೌಲಭ್ಯ ಮರೀಚಿಕೆಯಾಗಿವೆ ಎಂದರು.
ರಾಜ್ಯ ಸರ್ಕಾರದಿಂದ ತರಬೇತಿ ಪಡೆದ ಈ ನೌಕರರಿಗೆ ಗ್ರಾ.ಪಂ.ಗಳಲ್ಲಿ ಕೆಲಸ ನೀಡುತ್ತಿಲ್ಲ. ಸ್ವಚ್ಛವಾಹಿನಿ ಗಾಡಿಗಳಿಗೆ ವಿಮೆ ನಗದೀಕರಣವಾಗಿಲ್ಲ. ಬೇಟಿ ಬಚಾವೋ, ಬೇಟಿ ಪಡಾವೋ ಎನ್ನುವ ಸರ್ಕಾರ ಜೀವದ ಹಂಗು ತೊರೆದು, ಕೆಲಸ ಮಾಡುವ ನೌಕರರ ವೇತನ ಬಾಕಿ ಉಳಿಸಿಕೊಂಡಿದೆ. ಸ್ವಚ್ಛವಾಹಿನಿ ಸಿಬ್ಬಂದಿಗೆ ರಕ್ಷಣಾ ಸಲಕರಣೆ ನೀಡಿಲ್ಲ. ಸಿಬ್ಬಂದಿ ಅನೇಕ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವ ಅಪಾಯವಿದೆ. ಅಂತಹವರಿಗೆ ಆರೋಗ್ಯ ವಿಮೆ ಜಾರಿಗೊಳಿಸಲಿ. ಸರ್ಕಾರದಿಂದಲೇ ತರಬೇತಿ ಪಡೆದ ಎಲ್ಲ ಸ್ವಚ್ಛವಾಹಿನಿ ನೌಕರರಿಗೆ ವರ್ಷಪೂರ್ತಿ ಕೆಲಸ ಕೊಡಬೇಕು. ಆದರೆ, ಹೀಗಾಗದೇ, ಅಮಾಯಕ ಮಹಿಳೆಯರಿಗೆ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಗ್ರಾಮ ನೈರ್ಮಲ್ಯಕ್ಕೂ ಧಕ್ಕೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸ್ವಚ್ಛತಾ ಕೆಲಸ ಕಾಯಂ ಸ್ವರೂಪದ ಸೇವೆಯಾಗಿದ್ದು, ಕನಿಷ್ಠ ₹26 ಸಾವಿರ ವೇತನ ನಿಗದಿಪಡಿಸಿ, ಸೇವೆ ಕಾಯಂಗೊಳಿಸಬೇಕು. ಸರ್ಕಾರದಿಂದ ತರಬೇತಿ ಪಡೆದ ಮಹಿಳಾ ಚಾಲಕರಿಗೆ ಈವರೆಗೆ ಆಟೋ ನೀಡಿಲ್ಲ. ಕೆಟ್ಟು ನಿಂತ ಆಟೋ ದುರಸ್ತಿ ಮಾಡಿಸಿಲ್ಲ. ಸ್ವಚ್ಛವಾಹಿನಿ ಮಹಿಳೆಯರ ಕುಂದುಕೊರತೆ ಚರ್ಚಿಸುವ ಸಮಿತಿ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಲ ಜಿಲ್ಲೆಗಳಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಗೆ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆ ಅನಿವಾರ್ಯವಾಗಿ ಹೋರಾಟ ನಡೆಸಲಾಗುತ್ತಿದೆ. ನೌಕರರ ಬೇಡಿಕೆ ಶೀಘ್ರ ಈಡೇರಿಸದಿದ್ದರೆ ರಾಜ್ಯವ್ಯಾಪಿ ತೀವ್ರ ಸ್ವರೂಪದ ಹೋರಾಟ ಕೈಗೊಳ್ಳುವುದಾಗಿ ಆನಂದರಾಜ ಎಚ್ಚರಿಸಿದರು.
ಸಂಘದ ರಾಜ್ಯ ಸಂಚಾಲಕ ಡಿ.ಎಂ.ಮಲಿಯಪ್ಪ ಮಾತನಾಡಿ, ಸ್ವಚ್ಛವಾಹಿನಿ ಸಿಬ್ಬಂದಿಗೆ ಬಾಕಿ ವೇತನವನ್ನು ತಕ್ಷಣ ಪಾವತಿಸಬೇಕು. ಬೇಡಿಕೆಗಳು ಈಡೇರಿಸಲು ಕಾಲಮಿತಿಯಲ್ಲಿ ಸ್ಪಂದಿಸಬೇಕು ಎಂದು ಹೇಳಿದರು.ಸಂಘದ ಕರಿಯಮ್ಮ, ರೂಪ, ಗೀತಮ್ಮ, ಸುಧಾಮಣಿ, ಜಯಲಕ್ಷ್ಮೀ, ರೇಖಮ್ಮ, ಶೃತಿ, ಮಂಜುಳ, ಪ್ರೇಮ, ಹಿರಿಯಮ್ಮ, ನಳಿನ ಸೇರಿದಂತೆ ಸ್ವಚ್ಛತಾ ಸಿಬ್ಬಂದಿ ಇದ್ದರು.
- - - -25ಕೆಡಿವಿಜಿ:ಸ್ವಚ್ಛವಾಹಿನಿ ನೌಕರರ ವಿವಿಧ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಒತ್ತಾಯಿಸಿ ದಾವಣಗೆರೆ ಜಿಪಂ ಕಚೇರಿ ಎದುರು ರಾಜ್ಯ ಗ್ರಾಮ ಪಂಚಾಯತಿ ಸ್ವಚ್ಛವಾಹಿನಿ ಆಟೋ ಡ್ರೈವರ್ಸ್ ಮತ್ತು ಸಹಾಯಕಿಯರ ಸಂಘ ಸದಸ್ಯರು ಪ್ರತಿಭಟನೆ ನಡೆಸಿದರು.