ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ
ಇಂದಿನ ಶಾಲಾ ಮಕ್ಕಳಿಗೆ ಪಾಠ ಬೋಧನೆ ಮಾಡುವುದಲ್ಲದೆ ನೈತಿಕ ಶಿಕ್ಷಣ ಕೊಡಬೇಕೆಂಬ ಉದ್ದೇಶದಿಂದ ನಾನು ಶಿಕ್ಷಣ ಸಚಿವನಾಗಿದ್ದಾಗ ನೈತಿಕ ಶಿಕ್ಷಣ ಕಾಯ್ದೆ ಜಾರಿ ಮಾಡಿರುವೆ. ಮಕ್ಕಳಿಗೆ ಸಂಸ್ಕಾರ ನೀಡುವುದರಿಂದ ಸಮಾಜದಲ್ಲಿ ಒಳ್ಳೆಯ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.ತಾಲೂಕಿನ ಯಡಹಳ್ಳಿ ಗ್ರಾಮದ ಶ್ರೀ ಶಿವಲಿಂಗಪ್ಪ ಬಸಪ್ಪ ಹೊರಟ್ಟಿ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಂಗಳವಾರ 2025-26ನೇ ಸಾಲಿನ ಶಾಲಾ ಸಾಂಸ್ಕೃತಿಕ, ಕ್ರೀಡೆ, ಸಂಸತ್ತು, ಎನ್.ಎಸ್.ಎಸ್, ಆವಿಷ್ಕಾರ ಹಾಗೂ ಎನ್.ಎಸ್.ಕ್ಯೂ.ಎಫ್ ಲ್ಯಾಬ್ ಮತ್ತು ವಿವಿಧ ಶಾಲಾ ಘಟಕಗನ್ನು ಉದ್ಘಾಟನೆ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಯಿ-ತಂದೆ, ಹುಟ್ಟೂರು, ತಮಗೆ ಸಹಾಯ ಸಹಕಾರ ಮಾಡಿದವರ ಋಣವನ್ನು ಯಾವತ್ತೂ ಮರೆಯಬಾರದೆಂಬ ಉದ್ದೇಶದಿಂದ ನನ್ನ ಗ್ರಾಮದಲ್ಲಿ ಸರ್ಕಾರಿ ಶಾಲಾ ಕಟ್ಟಡಕ್ಕೆ ತಂದೆಯ ಹೆಸರಿನಲ್ಲಿ ಭೂಮಿದಾನ ಮಾಡಿದ್ದೇನೆ. ತಾಯಿ ಹೆಸರಿನಲ್ಲಿ ಅವ್ವ ಟ್ರಸ್ಟ್ ಮಾಡಿದ್ದೇನೆಂದು ಹೇಳಿದರು.
ಹೆಣ್ಣುಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರೆಂದು ನಾನು ಶಿಕ್ಷಣ ಸಚಿವನಾಗಿದ್ದಾಗ ಪ್ರತಿ 3 ಕಿ.ಮೀ ಅಂತರದ ಗ್ರಾಮಗಳಲ್ಲಿ ಶಾಲೆ, ಪ್ರತಿ 5 ಕಿ.ಮೀ ಅಂತರದ ಗ್ರಾಮಗಳಲ್ಲಿ ಪದವಿ ಪೂರ್ವ ಕಾಲೇಜು ಆರಂಭಿಸಿದ್ದೇನೆ. ಹೈಸ್ಕೂಲ್ ವರೆಗೆ ಬಿಸಿ ಊಟ ವಿಸ್ತರಿಸಿದ್ದೇನೆಂದು ಹೇಳಿದರು.ವಿದ್ಯಾರ್ಥಿಗಳು ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಗುರಿ, ಉದ್ದೇಶ ಇರಬೇಕು. ಜೊತೆಗೆ ನಿರಂತರ ಪ್ರಯತ್ನ, ಪ್ರಾಮಾಣಿಕತೆ, ನಿಷ್ಠೆ ಹೊಂದಿರಬೇಕು. ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಕ್ರೀಡೆಗೆ ಮಹತ್ವ ಕೊಡಬೇಕೆಂದು ಹೇಳಿದ ಸಭಾಪತಿಗಳು, ಮನಸ್ಸು ಮಾಡಿದರೆ ಎಂತಹುದೇ ಸಾಧನೆ ಮಾಡಲು ಸಾಧ್ಯ. ಗ್ರಾಮೀಣ ಭಾಗದಲ್ಲಿರುವ ಈ ಶಾಲೆ ರಾಜಧಾನಿಯ ಶಾಲೆಗಿಂತ ಅದರಲ್ಲೂ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲ. ಈ ಶಾಲೆ ನೋಡಲು ರಾಜ್ಯದ ಮೂಲೆ ಮೂಲೆಯಿಂದ ಜನರು, ಶಿಕ್ಷಣ ಪ್ರೇಮಿಗಳು ಬರುತ್ತಿದ್ದಾರೆ ಎಂದರು.
ಭಾರತದ ಇತಿಹಾಸದಲ್ಲಿ ಸತತ 45 ವರ್ಷಗಳ ಕಾಲ ವಿಧಾನ ಪರಿಷತ್ ಸದಸ್ಯನಾಗಿ ಆಯ್ಕೆಯಾಗಿದ್ದು, ಸಚಿವನಾಗಿ, ಪ್ರಸ್ತುತ ವಿಧಾನ ಪರಿಷತ್ ಸಭಾಪತಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ, ಇದು ಗ್ರಾಮೀಣ ಭಾಗದ ಹುಡುಗನ ಸಾಧನೆ ನಿಮಗೆಲ್ಲ ಮಾರ್ಗದರ್ಶಿಯಾಗಬೇಕೆಂದರು.ಯಡಹಳ್ಳಿ ಅಡವೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪ.ಪೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪಿ.ಎಸ್. ಕಾಂಬಳೆ, ಡಿಡಿಪಿಐ ಎಚ್.ಜಿ. ಮಿರ್ಜಿ, ಬಿಇಒ ಎಸ್.ಎಂ. ಮುಲ್ಲಾ, ಗ್ರಾಮದ ಪ್ರಮುಖರಾದ ಗಿರೀಶ ಲಕ್ಷಾಣಿ, ತಿಮ್ಮಣ್ಣ ಉದಪುಡಿ, ಸಚಿನ ಕನಕರಡ್ಡಿ, ಸುವರ್ಣಪ್ಪ ಕೊಣ್ಣೂರ, ತುಂಗಾಬಾಯಿ ಪಾಟೀಲ, ಪ್ರಾಚಾರ್ಯ ವಿ.ಪಿ. ಪೆಟ್ಲೂರ, ಉಪ ಪ್ರಾಚಾರ್ಯ ವಿ.ಆರ್. ಹಸರಡ್ಡಿ, ಮುಖ್ಯಶಿಕ್ಷಕ ವಿ.ಎಚ್. ಕೊಡ್ಡನ್ನವರ ಹಾಗೂ ಅವರ ಅಭಿಮಾನಿಗಳು ಉಪಸ್ಥಿತರಿದ್ದರು. ಇದೇ ವೇಳೆ ಸಭಾಪತಿಗಳನ್ನು ಸನ್ಮಾನಿಸಲಾಯಿತು.