ಸಾರಾಂಶ
ಬೆಂಗಳೂರು : ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರು ನಿರೀಕ್ಷಿಸುತ್ತಿದ್ದ 2023-24ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಪರೀಕ್ಷೆ ಬರೆದಿದ್ದ 6,81,079 ವಿದ್ಯಾರ್ಥಿಗಳ ಪೈಕಿ 5,52,690 ಮಂದಿ ಉತ್ತೀರ್ಣರಾಗಿದ್ದು, ಶೇ.81.15ರಷ್ಟು ಫಲಿತಾಂಶ ದಾಖಲಾಗಿದೆ.
ಕೋವಿಡ್ ಅವಧಿಯ ಸಾಮೂಹಿಕ ಉತ್ತೀರ್ಣದ ಫಲಿತಾಂಶ ಹೊರತುಪಡಿಸಿದರೆ ಕಳೆದ 2022-23ನೇ ಸಾಲಿನಲ್ಲಿ ಬಂದಿದ್ದ ಶೇ.74.67ರಷ್ಟು ಫಲಿತಾಂಶವೇ ಇದುವರೆಗಿನ ಅತಿ ಹೆಚ್ಚು ಫಲಿತಾಂಶವಾಗಿತ್ತು. ಈ ಬಾರಿ ಇದಕ್ಕಿಂತಲೂ ಶೇ.6.48 ರಷ್ಟು ಫಲಿತಾಂಶ ಏರಿಕೆಯಾಗಿದೆ. ತನ್ಮೂಲಕ ಮತ್ತೊಮ್ಮೆ ಸಾರ್ವಕಾಲಿಕ ದಾಖಲೆ ಫಲಿತಾಂಶ ಬಂದಿದೆ. ವಿಜ್ಞಾನದ ವಿಷಯಗಳಲ್ಲಿ 30 ಅಂಕಗಳಿಗೆ ಪ್ರಾಯೋಗಿಕ ಪರೀಕ್ಷೆ ಇರುವಂತೆ ಇತರೆ ಕಲಾ, ವಾಣಿಜ್ಯ ವಿಭಾಗದ ಎಲ್ಲ ವಿಷಯಗಳು ಹಾಗೂ ಭಾಷಾ ವಿಷಯಗಳಲ್ಲೂ ಈ ಸಾಲಿನಿಂದ ತಲಾ ತಲಾ 20 ಅಂಕಗಳಿಗೆ ಆಂತರಿಕ ಮೌಲ್ಯಮಾಪನ (ಇಂಟರ್ನಲ್ಸ್) ನಿಗದಿಪಡಿಸಿದ್ದು ಫಲಿತಾಂಶ ಏರಿಕೆಗೆ ಕಾರಣ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದಲ್ಲಿ ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಶಾಲಾ ಶಿಕ್ಷಣ ಸಚಿವರ ಬದಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಬುಧವಾರ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು.ಪ್ರತಿ ವರ್ಷದಂತೆ ಈ ವರ್ಷವೂ ನಾಲ್ಕು ವಿಷಯಗಳಲ್ಲಿ ಪಾಸಾಗಿದ್ದು, ಉಳಿದ ಎರಡು ವಿಷಯಗಳಲ್ಲಿ ಬೆರಳೆಣಿಕೆಯಷ್ಟು ಅಂಕಗಳಿಂದ ಅನುತ್ತೀರ್ಣಗೊಳ್ಳುವ ಹಂತದಲ್ಲಿದ್ದ ವಿದ್ಯಾರ್ಥಿಗಳಿಗೆ ಆ ಎರಡು ವಿಷಯದಲ್ಲಿ ತಲಾ ಶೇ.5ರಷ್ಟು ಕೃಪಾಂಕ ನೀಡಿ ಉತ್ತೀರ್ಣ ಮಾಡುವ ಪದ್ಧತಿ ಮುಂದುವರೆಸಲಾಗಿದೆ. ಇದರಿಂದಾಗಿ ಈ ಬಾರಿಯೂ 9,200 ವಿದ್ಯಾರ್ಥಿಗಳು ಕೃಪಾಂಕ ಪಡೆದು ಉತ್ತೀರ್ಣರಾಗಿದ್ದಾರೆ.
ಉಳಿದಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ, ನಗರಕ್ಕಿಂತ ಗ್ರಾಮೀಣ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. 91 ಸರ್ಕಾರಿ ಪಿಯು ಕಾಲೇಜುಗಳು ಸೇರಿದಂತೆ ಒಟ್ಟು 469 ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ ಮಕ್ಕಳೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಾಗಿದೆ. ಇನ್ನು 35 ಕಾಲೇಜುಗಳಲ್ಲಿ ಒಬ್ಬರೂ ಪಾಸಾಗದೆ ಶೂನ್ಯ ಫಲಿತಾಂಶ ದಾಖಲಾಗಿದೆ. 1,192 ಮಂದಿ ವಿವಿಧ ವಿಶೇಷ ಚೇತನ ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು.
ಮಾಧ್ಯಮವಾರು ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದವರಲ್ಲಿ ಶೇ.70.41 ಮಕ್ಕಳು ಉತ್ತೀರ್ಣರಾಗಿದ್ದರೆ, ಇಂಗ್ಲಿಷ್ ಮಾಧ್ಯಮದಲ್ಲಿ ಶೇ.87.40 ಮಕ್ಕಳು ಉತ್ತೀರ್ಣರಾಗಿದ್ದಾರೆ. ಕಾಲೇಜುವಾರು ಸರ್ಕಾರಿ ಕಾಲೇಜಿನಲ್ಲಿ ಶೇ.75.29, ಅನುದಾನಿತ ಕಾಲೇಜಿನಲ್ಲಿ ಶೇ.79.82, ಅನುದಾನ ರಹಿತ ಖಾಸಗಿ ಕಾಲೇಜುಗಳಲ್ಲಿ ಶೇ.90.46, ಬಿಬಿಎಂಪಿ ಕಾಲೇಜುಗಳಲ್ಲಿ ಶೇ.76.88 ಮತ್ತು ವಿಭಜಿತ ಕಾಲೇಜುಗಳಲ್ಲಿ ಶೇ.86.76 ರಷ್ಟು ಫಲಿತಾಂಶ ಬಂದಿದೆ. ಜಿಲ್ಲಾವಾರು ದಕ್ಷಿಣ ಕನ್ನಡ ಶೇ.97.37, ಉಡುಪಿ ಶೇ.96.80 ಫಲಿತಾಂಶ ಪಡೆದು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಉಳಿಸಿಕೊಂಡಿವೆ. ವಿಜಯಪುರ ಜಿಲ್ಲೆ ಶೇ.94.89 ಫಲಿತಾಂಶದೊಂದಿಗೆ ಐದನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಜಿಗಿದಿದೆ. ಕೊಡಗು ಮೂರರಿಂದ ಐದನೇ ಸ್ಥಾನಕ್ಕೆ ಇಳಿದಿದೆ. ಗದಗ ಜಿಲ್ಲೆ ಕಳದ ವರ್ಷಕ್ಕಿಂತ ಕೊಂಚ ಶೇ.ಶೇ.72.86 ಕ್ಕೆ ಫಲಿತಾಂಶ ಉತ್ತಮ ಪಡಿಸಿಕೊಂಡಿದ್ದರೂ ಕೊನೆ ಸ್ಥಾನ ಪಡೆದಿದೆ.
ವಿದ್ಯಾಲಕ್ಷ್ಮಿ ಟಾಪರ್:
ಹುಬ್ಬಳ್ಳಿ ಧಾರವಾಡ ಜಿಲ್ಲೆಯ ವಿದ್ಯಾನಿಕೇತನ್ ಎಸ್‌ಸಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಎ.ವಿದ್ಯಾಲಕ್ಷ್ಮಿ ವಿಜ್ಞಾನ ವಿಭಾಗದಲ್ಲಿ 600ಕ್ಕೆ 598 ಅಂಕಗಳನ್ನು ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಹಾಗೂ ಆ ವಿಭಾಗದಲ್ಲೂ ಟಾಪರ್ ಆಗಿದ್ದಾರೆ. ಇದೇ ವಿಭಾಗದಲ್ಲಿ 24 ಮಂದಿ 595 ಅಂಕಗಳನ್ನ ಪಡೆದು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇನ್ನು, ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ವಿದ್ಯಾನಿಧಿ ಸ್ವತಂತ್ರ ಪಿಯು ಕಾಲೇಜಿನ ಜ್ಞಾನವಿ ಎಂ. 600ಕ್ಕೆ 597 ಅಂಕ ಪಡೆದು ಟಾಪರ್ ಆಗಿದ್ದರೆ, ಇತರೆ ನಾಲ್ವರು ವಿದ್ಯಾರ್ಥಿಗಳು 596 ಅಂಕ ಪಡೆದು ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ. ಅದೇ ರೀತಿ ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದ ಎನ್‌ಎಂಕೆಆರ್‌ವಿ ಪಿಯು ಕಾಲೇಜಿನ ಮೇಧಾ ಡಿ., ವಿಜಯಪುರ ಜಿಲ್ಲೆಯ ಎಸ್‌ಎಸ್ ಪಿಯು ಕಾಲೇಜಿನ ವೇದಾಂತ್ ಜ್ಞಾನುಬಾ ನಾವಿ ಮತ್ತು ಬಳ್ಳಾರಿ ಜಿಲ್ಲೆ ಕೊಟ್ಟೂರಿನ ಇಂದು ಸ್ವತಂತ್ರ ಪಿಯು ಕಾಲೇಜಿನ ಕವಿತಾ ಬಿ.ವಿ. ಕಲಾ ವಿಭಾಗದಲ್ಲಿ 600ಕ್ಕೆ ತಲಾ 596 ಅಂಕಗಳನ್ನು ಪಡೆಯುವ ಮೂಲಕ ಟಾಪರ್ ಆಗಿದ್ದಾರೆ.
ಬಾಲಕಿಯರೇ ಮೇಲುಗೈ:
ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದಿದ್ದ 3.59 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿನಿಯರಲ್ಲಿ 3.05 ಲಕ್ಷಕ್ಕೂ ಹೆಚ್ಚು (ಶೇ.84.87), 3.21 ಲಕ್ಷ ಬಾಲಕರಲ್ಲಿ 2.47 ಲಕ್ಷಕ್ಕೂ ಹೆಚ್ಚು (ಶೇ.76,98) ಜನ ಪಾಸಾಗಿದ್ದಾರೆ. ಇನ್ನು 1.48 ಲಕ್ಷಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳಲ್ಲಿ 1.20 ಕ್ಷಕ್ಕೂ ಹೆಚ್ಚು ಮಂದಿ, ನಗರ ಪ್ರದೇಶದ 5.32 ಲಕ್ಷಕ್ಕೂ ಹೆಚ್ಚು ಜನರಲ್ಲಿ 4.32 ಲಕ್ಷ ಮಂದಿ ಉತ್ತೀರ್ಣರಾಗಿದ್ದಾರೆ.ಮಾಧ್ಯಮವಾರು ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳ ಫಲಿತಾಂಶವೇ ಉತ್ತಮವಾಗಿದೆ.
ಉನ್ನತ ಶ್ರೇಣಿಯಲ್ಲಿ 1.53 ಲಕ್ಷ ಮಕ್ಕಳು ಪಾಸು:
ಈ ಬಾರಿ ಒಟ್ಟಾರೆ 1,53,370 ವಿದ್ಯಾರ್ಥಿಗಳು ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 2.89 ಲಕ್ಷಕ್ಕೂ ಹೆಚ್ಚು ಮಕ್ಕಳು ಶೇ.60 ಕ್ಕಿಂತ ಹೆಚ್ಚು ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ, 72,098 ವಿದ್ಯಾರ್ಥಿಗಳು ಶೇ.50ಕ್ಕಿಂತ ಹೆಚ್ಚು ಅಂಕದೊಂದಿಗೆ ದ್ವಿತೀಯ ದರ್ಜೆ ಮತ್ತು 37,489 ಮಂದಿ ಶೇ.35ಕ್ಕಿಂತ ಹೆಚ್ಚು ಅಂಕ ಪಡೆದು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಮಂಡಳಿಯ ನಿರ್ದೇಶಕ (ಪರೀಕ್ಷೆಗಳು) ಗೋಪಾಲಕೃಷ್ಣ ಉಪಸ್ಥಿತರಿದ್ದರು.
9,200 ಮಂದಿ ಗ್ರೇಸ್ ಅಂಕದಿಂದ ಪಾಸ್ : ಕಳೆದ ವರ್ಷದಂತೆ ಈ ಬಾರಿಯೂ ಗರಿಷ್ಠ ಎರಡು ವಿಷಯಗಳಲ್ಲಿ ಬೆರಳೆಣಿಕೆಯಷ್ಟು ಅಂಕಗಳಿಂದ ಅನುತ್ತೀರ್ಣಗೊಳ್ಳುವ ಹಂತದಲ್ಲಿದ್ದ 9,200 ವಿದ್ಯಾರ್ಥಿಗಳಿಗೆ ಪ್ರತಿ ವಿಷಯದಲ್ಲಿ ಶೇ.5ರಷ್ಟು ಕೃಪಾಂಕ ನೀಡಿ ಪಾಸು ಮಾಡಲಾಗಿದೆ. ಫಲಿತಾಂಶ ಹೆಚ್ಚಿಸಲು ಸರ್ಕಾರ 2014ರಿಂದ ಒಂದು ವಿಷಯದಲ್ಲಿ ಕೃಪಾಂಕ ನೀಡುವ ಪದ್ಧತಿ ಜಾರಿಗೊಳಿಸಿತ್ತು. ನಂತರ ಕೋವಿಡ್ ವರ್ಷದಿಂದ ಇದನ್ನು ಎರಡು ವಿಷಯಗಳಿಗೆ ಹೆಚ್ಚಿಸಿ ಮುಂದುವರೆಸಿದೆ. ಕಳೆದ ಸಾಲಿನಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿತ್ತು.
463 ಕಾಲೇಜುಗಳಲ್ಲಿ ಎಲ್ಲರೂ ಪಾಸ್, 35 ಕಾಲೇಜಲ್ಲಿ ಒಬ್ಬರೂ ಪಾಸಿಲ್ಲ: ಈ ಬಾರಿ 91 ಸರ್ಕಾರಿ, 26 ಅನುದಾನಿತ, 345 ಅನುದಾನರಹಿತ ಪಿಯು ಕಾಲೇಜು ಮತ್ತು ಒಂದು ವಿಭಜಿತ ಕಾಲೇಜು ಸೇರಿ ಒಟ್ಟು 463 ಕಾಲೇಜುಗಳಲ್ಲಿ ಪರೀಕ್ಷೆ ಬರೆದಿದ್ದ ಎಲ್ಲ ವಿದ್ಯಾರ್ಥಿಗಳೂ ಪಾಸಾಗಿ ಶೇ.100ರಷ್ಟು ಫಲಿತಾಂಶ ಬಂದಿದೆ. ಮತ್ತೊಂದಡೆ 2 ಸರ್ಕಾರಿ, 6 ಅನುದಾನಿತ, 26 ಅನುದಾನ ರಹಿತ ಖಾಸಗಿ ಕಾಲೇಜುಗಳು ಮತ್ತು ವಿಭಜಿತ ಪಿಯು ಕಾಲೇಜಿನಲ್ಲಿ ಒಬ್ಬರೂ ಪಾಸಾಗದೆ ಶೂನ್ಯ ಫಲಿತಾಂಶ ದಾಖಲಾಗಿದೆ.