ಚನ್ನಪಟ್ಟಣ: ರೋಟರಿ ಕ್ಲಬ್ ಸಮಾಜ ಸೇವೆಯನ್ನು ಪ್ರಮುಖ ಧ್ಯೇಯವಾಗಿ ಪರಿಗಣಿಸುವುದರ ಜೊತೆಗೆ ಸಾಮಾಜಿಕ ಸಬಲೀಕರಣದತ್ತವೂ ಹೆಚ್ಚಿನ ಗಮನ ಹರಿಸಬೇಕು. ತನ್ಮೂಲಕ ಮಾದರಿ ಸಂಸ್ಥೆಯಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು ಎಂದು ರೋಟರಿ ಜಿಲ್ಲಾ ಗವರ್ನರ್ ಬಿ.ಆರ್. ಶ್ರೀಧರ್ ಅಭಿಪ್ರಾಯಪಟ್ಟರು.

ಪಟ್ಟಣದ ರೋಟರಿ ಬಾಲಭವನದಲ್ಲಿ ಚನ್ನಪಟ್ಟಣ ರೋಟರಿ ಕ್ಲಬ್ (೩೧೯೧) ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನಹಿತ ಚಿಂತನೆಯೇ ರೋಟರಿ ಸಂಸ್ಥೆಯ ಮೂಲ ಮಂತ್ರವಾಗಬೇಕು ಎಂದರು. ಹಲವು ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮೂಲಕ ಚನ್ನಪಟ್ಟಣ ರೋಟರಿ ಸಂಸ್ಥೆ ಕ್ರಿಯಾಶೀಲವಾಗಿರುವುದು ಸಂತಸದ ವಿಷಯ ಎಂದರು.

ನಮ್ಮ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಅಶಕ್ತರಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಜನಸೇವೆಯ ಮೂಲಕ ರೋಟರಿ ಸದಸ್ಯರು ಆತ್ಮತೃಪ್ತಿ ಹೊಂದಬೇಕು ಎಂದು ಅವರು ಹೇಳಿದರು. ಇಂತಹ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿರುವ ಚನ್ನಪಟ್ಟಣ ರೋಟರಿ ಕ್ಲಬ್ ಕಾರ್ಯ ಪ್ರಶಂಸನೀಯ ಎಂದು ಶ್ಲಾಘಿಸಿದರು.

ಚನ್ನಪಟ್ಟಣ ರೋಟರಿ ಸಂಸ್ಥೆಯ ಅಧ್ಯಕ್ಷ ಟಿ. ಪ್ರಸನ್ನ ಕುಮಾರ್ ಮಾತನಾಡಿ, ಶುದ್ಧ ಕುಡಿಯುವ ನೀರು, ಪೋಲಿಯೋ ಜಾಗೃತಿ, ರಸ್ತೆ ಸುರಕ್ಷತೆ, ಕಾನೂನು ಅರಿವು, ಉಚಿತ ಆರೋಗ್ಯ ಶಿಬಿರ, ಮಾತೃಭಾಷೆ ಕಾಳಜಿ, ಮಹನೀಯರ ಜಯಂತಿ ಆಚರಣೆ, ಸ್ವಚ್ಛತೆ, ಪರಿಸರ ಕಾಳಜಿ, ಆರೋಗ್ಯ ಜಾಗೃತಿ, ಪಾರಂಪರಿಕ ತಾಣಗಳ ರಕ್ಷಣೆ, ಪ್ರತಿಭಾನ್ವಿತರಿಗೆ ಪ್ರೋತ್ಸಾಹ, ಸದಸ್ಯರ ಮಕ್ಕಳಿಗೆ ಜೀವನ ಕೌಶಲ್ಯ ತರಬೇತಿ ಹಾಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರೇರಣಾ ಕಾರ್ಯಾಗಾರ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ ಎಂದರು.

ರೋಟರಿ ಸದಸ್ಯರು ಹಾಗೂ ಅವರ ಕುಟುಂಬ ವರ್ಗ ಕಾರ್ಯಕ್ರಮಗಳಿಗೆ ಬೆನ್ನೆಲುಬಾಗಿ ನಿಂತಿರುವುದು ಸಂತಸದ ವಿಷಯ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ವಿನಯ್ ಕುಮಾರ್ ವರದಿ ಮಂಡನೆ ಮಾಡಿದರು. ವೇದಿಕೆಯಲ್ಲಿ ರೋಟರಿ ಜಿಲ್ಲಾ ಕಾರ್ಯದರ್ಶಿ ಬಿ. ಗೋಪಾಲ್, ವಲಯ ಮುಖ್ಯಸ್ಥ ಡಿ. ಪುಟ್ಟಸ್ವಾಮಯ್ಯ, ಜಿಲ್ಲಾ ಸಹಪಾಲಕ ಕೆ. ಗವಿರಾಜು, ವಲಯ ಕಾರ್ಯದರ್ಶಿ ಚಂದ್ರುಗೌಡ ಮುಂತಾದವರು ಹಾಜರಿದ್ದರು.

ಪೊಟೋ೧೮ಸಿಪಿಟಿ೩: ನಗರದ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಗರ್ವನರ್ ಬಿ.ಆರ್. ಶ್ರೀಧರ್ ಉದ್ಘಾಟಿಸಿದರು.