ಜನಸಂಪರ್ಕ ಸಭೆ: 50ಕ್ಕೂ ಹೆಚ್ಚು ಅಹವಾಲು ಸಲ್ಲಿಕೆ

| Published : Sep 05 2025, 01:00 AM IST

ಸಾರಾಂಶ

ಕರಿಕೆ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ನೂರಾರು ಜನರು ಪಾಲ್ಗೊಂಡು 50ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕರಾದ ಎ.ಎಸ್.ಪೊನ್ನಣ್ಣ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ತಾಲೂಕಿನ ಭಾಗಮಂಡಲ ಹೋಬಳಿಯ ಕರಿಕೆ ಗ್ರಾಮದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ನೂರಾರು ಜನರು ಪಾಲ್ಗೊಂಡು 50 ಕ್ಕೂ ಹೆಚ್ಚು ಅಹವಾಲುಗಳು ಸಲ್ಲಿಕೆಯಾದವು. ಕರಿಕೆ ಗ್ರಾಮದ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಅಲ್ಲಿನ ಸ್ಥಳೀಯರು ಸಾಲಾಗಿ ನಿಂತು ಭೂಮಿ ದುರಸ್ತಿ, ಆರ್‌ಟಿಸಿ ಸರಿಪಡಿಸುವುದು, ರಸ್ತೆ ನಿರ್ಮಾಣ ಮಾಡುವುದು, ಬಸ್ ಸೌಕರ್ಯ ಕಲ್ಪಿಸುವುದು, ವಿದ್ಯುತ್ ಪರಿವರ್ತಕ ನಿರ್ಮಾಣ ಹಾಗೂ ವಿದ್ಯುತ್ ಮಾರ್ಗ ಸರಿಪಡಿಸುವುದು, ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಮತ್ತಷ್ಟು ಮೂಲ ಸೌಲಭ್ಯ ಕಲ್ಪಿಸಿ ಹೆಚ್ಚಿನ ವಿದ್ಯಾರ್ಥಿಗಳ ಸೇರ್ಪಡೆಗೆ ಶ್ರಮಿಸುವುದು, ಜೊತೆಗೆ ಶಿಕ್ಷಕರನ್ನು ನಿಯೋಜಿಸುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸ್ಥಳೀಯರು ಬೆಳಕು ಚೆಲ್ಲಿದರು. ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕು:

ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ತಾಲೂಕು ಹಾಗೂ ಹೋಬಳಿ ಕೇಂದ್ರದಿಂದ ತುಂಬಾ ದೂರದಲ್ಲಿರುವ ಕರಿಕೆ ಗ್ರಾಮಸ್ಥರ ಅಹವಾಲು ಆಲಿಸುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಇಲ್ಲಿನ ಸಮಸ್ಯೆಗಳ ಬಗ್ಗೆ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯ ನಡುವೆಯೂ ಸಹ ಇರುವವರು ಕೆಲಸ ಮಾಡಬೇಕು. ಭೂಮಿ ದುರಸ್ತಿ ಸಂಬಂಧ 25 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಭೂಮಿ ದುರಸ್ತಿ ಮಾಡುವುದು, ಆರ್‌ಟಿಸಿ ಸರಿಪಡಿಸುವುದು ಸೇರಿದಂತೆ ಅರಣ್ಯ, ಕಂದಾಯ ಇಲಾಖೆಗೆ ಸಂಬಂಧ ಸಮಸ್ಯೆ ಬಗೆಹರಿದಲ್ಲಿ ಕೃಷಿಕರ ಸಮಸ್ಯೆಗಳಿಗೆ ಸ್ಪಂದಿಸಿದಂತಾಗುತ್ತದೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರರು ನಿರ್ದೇಶನ ನೀಡಿದರು. ಆತಂಕ ಕಡಿಮೆ ಮಾಡಬೇಕು:

ವನ್ಯ ಪ್ರಾಣಿಗಳ ಹಾವಳಿ ನಿಯಂತ್ರಣ ಮಾಡುವಲ್ಲಿ ಅರಣ್ಯ ಇಲಾಖೆ ಮುಂದಾಗಬೇಕು. ಆ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ವನ್ಯಪ್ರಾಣಿಗಳ ಚಟುವಟಿಕೆ ಬಗ್ಗೆ ಜನರಿಗೆ ಮಾಹಿತಿ ನೀಡಿ, ಜನರ ಆತಂಕ ಕಡಿಮೆ ಮಾಡಬೇಕು. ಸಾರ್ವಜನಿಕರ ಜತೆ ನಿರಂತರ ಸಂಪರ್ಕ ಇದ್ದಲ್ಲಿ ಸಮಸ್ಯೆಗಳು ತಾವಾಗಿಯೇ ಬಗೆ ಹರಿಯಲಿವೆ. ಆ ನಿಟ್ಟಿನಲ್ಲಿ ಅಧಿಕಾರಿಗಳು ಕಾಳಜಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು. ಕರಿಕೆ ಗ್ರಾಮದ ಜನರು ಭೂಮಿ ದುರಸ್ತಿ, ಆರ್‌ಟಿಸಿ ಸರಿಪಡಿಸುವುದು ಸೇರಿದಂತೆ ಕೃಷಿ, ಜಾತಿ, ಆದಾಯ ಮತ್ತಿತರ ಸರ್ಕಾರದ ಸೌಲಭ್ಯ ಪಡೆಯಲು ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದಾಗ ಸತಾಯಿಸದೆ ನೀಡಬೇಕು. ಹತ್ತ್ತಾರು ಕಿ.ಮೀ. ದೂರದಿಂದ ಬರುವ ಗ್ರಾಮಸ್ಥರಿಗೆ ನಾಳೆ ಬನ್ನಿ ಎಂದು ಹೇಳಲು ಮನಸ್ಸು ಹೇಗೆ ಬರುತ್ತದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಸಿಟ್ಟಾದರು. ಜನಸಂಪರ್ಕ ಸಭೆಯಲ್ಲಿ ಸಲ್ಲಿಕೆಯಾದ ಅಹವಾಲುಗಳನ್ನು ಬಗೆಹರಿಸಿ ಪರಿಹಾರ ಕುರಿತು ತ್ವರಿತವಾಗಿ ವರದಿ ನೀಡುವಂತೆ ತಹಸೀಲ್ದಾರ್ ಹಾಗೂ ತಾ.ಪಂ.ಇಒಗೆ ಸೂಚಿಸಿದರು. ಸರ್ಕಾರದ ಮಹತ್ವಾಕಾಂಕ್ಷೆ ಕಾರ್ಯಕ್ರಮಗಳು ಗ್ರಾಮೀಣ ಪ್ರದೇಶದವರಿಗೆ ತಲುಪಬೇಕು. ಇವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಸರ್ಕಾರ ಹೋಬಳಿ ಮಟ್ಟದಲ್ಲಿ ಜನಸಂಪರ್ಕ ಸಭೆಯನ್ನು ಏರ್ಪಡಿಸಿದ್ದು, ಭೂಮಿ, ರಸ್ತೆ, ಕುಡಿಯುವ ನೀರು, ಅರಣ್ಯ, ಶಾಲಾ ಶಿಕ್ಷಣ ಹೀಗೆ ವಿವಿಧ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಿದ್ದು ಶೀಘ್ರ ಬಗೆಹರಿಸುವಂತೆ ಎ.ಎಸ್.ಪೊನ್ನಣ್ಣ ಅವರು ಸೂಚಿಸಿದರು. ಬಡವರಿಗೆ ಬಿಪಿಎಲ್ ಕಾರ್ಡ್ ಕಲ್ಪಿಸುವ ಸಂಬಂಧ ಸರ್ಕಾರದ ಹಂತದಲ್ಲಿ ಗಮನಸೆಳೆಯಲಾಗುವುದು, ಈ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಚರ್ಚಿಸಲಾಗುವುದು ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಕಲ್ಪಿಸುವುದು, ವಿದ್ಯುತ್ ಪರಿವರ್ತಕಗಳ ನಿರ್ಮಾಣ ಸೇರಿದಂತೆ ಹಲವು ಅಹವಾಲುಗಳಿಗೆ ಸ್ಪಂದಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಸಾರ್ವಜನಿಕರ ಅಹವಾಲು ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆದು ಕೂಡಲೇ ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಎ.ಎಸ್.ಪೊನ್ನಣ್ಣ ಅವರು ನಿರ್ದೇಶನ ನೀಡಿದರು. ಕರಿಕೆ ಗ್ರಾ.ಪಂ.ಅಧ್ಯಕ್ಷರಾದ ಬಾಲಚಂದ್ರ ನಾಯರ್, ಉಪಾಧ್ಯಕ್ಷರಾದ ಕಲ್ಪನಾ ಜಗದೀಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷರಾದ ನೆರವಂಡ ಉಮೇಶ್, ಸ್ಥಳೀಯರಾದ ರಮಾನಾಥ್ ಬೇಕಲ್, ಹರೀಶ್, ತಹಸೀಲ್ದಾರ್ ಶ್ರೀಧರ, ತಾ.ಪಂ.ಇಒ ಶೇಖರ್, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.