ಸಾರಾಂಶ
ಹಿರೇಕೆರೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.ಪಟ್ಟಣದ ಸಿಇಎಸ್ ಕಾಲೇಜಿನಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿಂದ ಕೊಡ ಮಾಡುವ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸುಜ್ಞಾನ ನಿಧಿ ಮಾತ್ರವಲ್ಲದೆ ವೃತ್ತಿ ಕೌಶಲ್ಯ ಹಾಗೂ ಮಹಿಳೆಯರ ಸ್ವಉದ್ಯೋಗಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಒತ್ತು ನೀಡಿದ್ದು ಪಾಲಕ, ಪೋಷಕರು ವಿದ್ಯಾರ್ಥಿಗಳ ಶಿಕ್ಷಣದಲ್ಲಿ ತಮ್ಮ ಪಾತ್ರ ಅರಿತುಕೊಂಡು ಅದನ್ನು ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಬೇಕು. ಡಾ. ವೀರೇಂದ್ರ ಹೆಗ್ಗಡೆಯವರು ಆರ್ಥಿಕ ನೆರವನ್ನು ನೀಡುತ್ತಿರುವುದು ನಮ್ಮೆಲ್ಲರ ಪುಣ್ಯ. ಈ ಯೋಜನೆಯನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಕೊಳ್ಳಬೇಕು ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆದು ಬಂದ ದಾರಿ ಹಾಗೂ ಸುಜ್ಞಾನಿಧಿ ಶಿಷ್ಯ ವೇತನ ಕಾರ್ಯಕ್ರಮ ಯೋಜನೆಯ ಪಾಲುದಾರ ಸದಸ್ಯರ ಕುಟುಂಬದ ವಿದ್ಯಾರ್ಥಿಗಳಿಗೆ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣಕ್ಕೆ ನೇರವಾಗುವಲ್ಲಿ ಯಶಸ್ವಿಯಾಗಿದ್ದು, ೧೧೪ ಕೋಟಿಯಷ್ಟು ಸುಜ್ಞಾನ ನಿಧಿ ಶಿಷ್ಯವೇತನವನ್ನು ವಿತರಣೆ ಮಾಡಲಾಗಿದೆ. ಅದೇ ರೀತಿ ಹಿರೇಕೆರೂರು ತಾಲೂಕು ಯೋಜನಾ ವ್ಯಾಪ್ತಿಗೆ ಒಟ್ಟು ೧೯೬ ಅರ್ಹ ವಿದ್ಯಾರ್ಥಿಗಳಿಗೆ ಈ ದಿನ ಶಿಷ್ಯವೇತನವನ್ನು ವೀರೇಂದ್ರ ಹೆಗ್ಗಡೆಯವರು ಮಂಜೂರಾತಿ ನೀಡಿದ್ದು. ಮಂಜೂರಾತಿ ಪತ್ರವನ್ನು ಇಂದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಮಂಜುನಾಥ್ ಎಂ., ಪ್ರಾಚಾರ್ಯ ಬಿ.ಪಿ. ಹಳ್ಳೇರ, ಮಂಜುನಾಥ್ ಕಣಗೊಟಗಿ, ಕೃಷಿ ಮೇಲ್ವಿಚಾರಕ ಧರ್ಮಪ್ಪ ಜೋಗೇರ ಹಾಗೂ ಪ್ರಗತಿ ಬಂಧು ಸ್ವ ಸಹಾಯ ಸಂಘದ ಫಲಾನುಭವಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.