ಸಾರಾಂಶ
ರಾಮಕೃಷ್ಣ ದಾಸರಿ
ರಾಯಚೂರು : ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ 1, 2 ಮತ್ತು 3ರ ಉತ್ತರ ಪತ್ರಿಕೆಗಳ ಮೌಲ್ಯಮಾಪನದ ಸಂಭಾವನೆ ಇನ್ನು ಸಂದಾಯವಾಗಿಲ್ಲ. ಕಳೆದ ನಾಲ್ಕು ತಿಂಗಳಿನಿಂದ ಸಂಭಾವನೆ ವಿಳಂಬವಾಗುತ್ತಿದೆ ಎಂದು ಗ್ಯಾರಂಟಿ ಖ್ಯಾತಿಯ ರಾಜ್ಯ ಸರ್ಕಾರದ ವಿರುದ್ಧ ಮೌಲ್ಯಮಾಪಕರು ತೀವ್ರ ಅಸಮಾಧಾನಗೊಂಡಿದ್ದಾರೆ.
ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಒಟ್ಟು 34 ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕಾಗಿ ಸುಮಾರು 65 ಸಾವಿರ ಪ್ರಾಚಾರ್ಯರು, ಉಪನ್ಯಾಸಕರು, ಅಧಿಕಾರಿ, ಸಿಬ್ಬಂದಿ ವರ್ಗವನ್ನು ನಿಯುಕ್ತಿಗೊಳಿಸಲಾಗಿತ್ತು. ಪರೀಕ್ಷೆ 1,2 ಮತ್ತು 3 ಹೀಗೆ ವಿವಿಧ ಹಂತದಲ್ಲಿ ನಡೆದ ಮೌಲ್ಯಮಾಪನ ಪ್ರಕ್ರಿಯೆಗೆ ಒಟ್ಟು ₹75 ಕೋಟಿ ಸಂಭಾವನೆ ನೀಡಬೇಕಾಗಿದ್ದು, ಪ್ರಕ್ರಿಯೆ ಪೂರ್ಣಗೊಂಡು ನಾಲ್ಕು ತಿಂಗಳು ಕಳೆಯುತ್ತಿದ್ದರೂ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಬಾಕಿ ಸಂಭಾವನೆ ಸಂದಾಯ ಮಾಡಿಲ್ಲ.
ಇಷ್ಟೇ ಅಲ್ಲದೇ ಕಳೆದ 2023 ಹಾಗೂ 2024ರಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷಾ ಕಾರ್ಯದಲ್ಲಿ ಜಾಗೃತದಳ, ವಿಶೇಷ ಜಾಗೃತ ದಳ ಸದಸ್ಯರಾಗಿ ಕಾರ್ಯನಿರ್ವಹಿಸಿದ ಉಪನ್ಯಾಸಕರಿಗೆ ಪರೀಕ್ಷಾ ಕಾರ್ಯ ಸಂಭಾವನೆ, ಪ್ರಯಾಣ ಭತ್ಯೆ ಮತ್ತು ದಿನಭತ್ಯೆ ಹಾಗೂ 2025ರಲ್ಲಿ ಪಿಯುಸಿ ಪರೀಕ್ಷೆ 1, 2 ಮತ್ತು 3ರ ಪರೀಕ್ಷಾ ಕಾರ್ಯ ಮತ್ತು ಮೌಲ್ಯ ಮಾಪನಾ ಕಾರ್ಯನಿರ್ವಹಿಸಿರುವ ಪ್ರಾಚಾರ್ಯರು, ಉಪನ್ಯಾಸಕರು ಹಾಗೂ ಸಿಬ್ಬಂದಿ ಸಂಭಾವನೆ, ದಿನಭತ್ಯೆ ಮತ್ತು ಮೌಲ್ಯಮಾಪನಾ ಸಂಭಾವನೆಯನ್ನು ಕೂಡಲೇ ಸಂದಾಯ ಮಾಡಬೇಕು ಎಂದು ಉಪನ್ಯಾಸಕರು ಮಂಡಳಿಗೆ ಆಗ್ರಹಿಸಿದ್ದಾರೆ.
ಮಂಡಳಿಗೆ ಮನವಿ ಸಲ್ಲಿಕೆ
ಸುಮಾರು 65 ಸಾವಿರ ಜನರು ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದು, ₹75 ಕೋಟಿ ಸಂಭಾವನೆ ಬಿಡುಗಡೆ ಮಾಡಲು ಈಗಾಗಲೇ ರಾಜ್ಯ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಗೆ ಮನವಿ ಸಲ್ಲಿಸಲಾಗಿದೆ.
-ಎ.ಎಚ್.ನಿಂಗೇಗೌಡ, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಸಂಘ.
ಹೋರಾಟ ನಡೆಸುತ್ತೇವೆ
ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಮೌಲ್ಯಮಾಪನ ಪ್ರಕ್ರಿಯೆ ನಡೆಸಿದವರಿಗೆ ಸಂಭಾವನೆ ಇನ್ನೂ ಮಂಜೂರಾಗಿಲ್ಲ. ನೇರವಾಗಿ ಉಪನ್ಯಾಸಕರ ಖಾತೆಗೆ ಜಮಾ ಮಾಡುವುದಾಗಿ ಮಂಡಳಿ ನೀಡಿದ್ದ ಭರವಸೆ ಹುಸಿಯಾಗಿದ್ದು, ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು.
-ನರಸಪ್ಪ ಭಂಡಾರಿ, ಜಿಲ್ಲಾಧ್ಯಕ್ಷ, ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕ ಸಂಘ.