ಸಾರಾಂಶ
ಮಾನಸ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಒಂದು ವಾರ ಅಕ್ರಮವಾಗಿ ಪಿಯು ಪರೀಕ್ಷೆ ನಡೆಸಿದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ಕೆ.ಎನ್.ರಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ.
ಕನ್ನಡಪ್ರಭವಾರ್ತೆ ನಾಗಮಂಗಲ
ತಾಲೂಕಿನ ಅದ್ದೀಹಳ್ಳಿ ಸರ್ಕಲ್ ಬಳಿಯಿರುವ ಮಾನಸ ಶಿಕ್ಷಣ ಸಂಸ್ಥೆಯ ಶಾಂತಿನಿಕೇತನ ಪ್ರೌಢಶಾಲೆಯಲ್ಲಿ ಒಂದು ವಾರ ಕಾಲ ಅಕ್ರಮವಾಗಿ ಪಿಯು ಪರೀಕ್ಷೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ಕೆ.ಎನ್.ರಮೇಶ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ಕೆ.ಎನ್.ರಮೇಶ್ ಅವರು ಬೆಂಗಳೂರಿನ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ ಸಂಸ್ಥೆ ಕೈಜೋಡಿಸಿ ಕಳೆದ ಡಿ.18ರಿಂದ 23ರ ವರೆಗೆ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಪಿಯು ಪರೀಕ್ಷೆ ಬರೆಸಿದ್ದರು. ಈ ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಶಾಂತಿ ನಿಕೇತನ ಪ್ರೌಢಶಾಲೆ ಮತ್ತು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಜಂಟಿಯಾಗಿ ಭೇಟಿಕೊಟ್ಟು ಸಮಗ್ರ ತನಿಖೆ ನಡೆಸಿದ್ದರು.
ಅಕ್ರಮ ಪಿಯು ಪರೀಕ್ಷೆಗೆ ಶಿಕ್ಷಕ ಕೆ.ಎನ್.ರಮೇಶ್ ಹಲವರನ್ನು ಸೇರ್ಪಡೆ ಮಾಡಿಸಿ ದಿನನಿತ್ಯ ಕರೆದುಕೊಂಡು ಬರುತ್ತಿದ್ದರೆಂದು ತನಿಖೆ ವೇಳೆ ದೃಢಪಟ್ಟಿದೆ. ಅಲ್ಲದೇ, ಪರೀಕ್ಷಾ ಸಮಯದಲ್ಲಿ ಖುದ್ದು ಹಾಜರಿದ್ದು ಪರೀಕ್ಷೆಗೆ ಪೂರಕವಾದ ಮಾರ್ಗದರ್ಶನ ನೀಡಿರುವುದಾಗಿಯೂ ಸ್ವತಃ ಶಿಕ್ಷಕ ಕೆ.ಎನ್.ರಮೇಶ್ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರಿ ನೌಕರರು ಅನಾವಶ್ಯಕವಾಗಿ ಖಾಸಗಿ ಸಂಸ್ಥೆಯಾದ ಭಾರತ್ ಇನ್ಸ್ಟಿಟ್ಯೂಟ್ ಆಫ್ ಸ್ಕೂಲಿಂಗ್ ಎಜುಕೇಷನ್ ವತಿಯಿಂದ ನಡೆಸಲಾಗುತ್ತಿದ್ದ ಪರೀಕ್ಷಾ ಕೇಂದ್ರಕ್ಕೆ ಅತಿಕ್ರಮ ಪ್ರವೇಶ ಮಾಡಿರುವುದು ನಿಯಮ ಉಲ್ಲಂಘನೆ ಹಾಗೂ ಕರ್ನಾಟಕ ನಾಗರೀಕ ಸೇವಾ ನಿಯಮ ವರ್ಗೀಕರಣ ನಿಯಂತ್ರಣ ಅಪೀಲು ನಿಯಮಗಳು 1957 ಮತ್ತು ಕರ್ನಾಟಕ ಸರ್ಕಾರಿ ನೌಕರರ ನಡತೆ ನಿಯಮ 2020ರ ನಿಯಮ ಮೂರು ಉಪನಿಯಮ ವಿರುದ್ಧವಾಗಿವೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಶಿಸ್ತುಪಾಲನಾ ಸಮಿತಿಯು ವರದಿ ನೀಡಿರುವ ಹಿನ್ನೆಲೆಯಲ್ಲಿ ನಾಗಮಂಗಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಸಹ ಶಿಕ್ಷಕ ಕೆ.ಎನ್.ರಮೇಶ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಶಿವರಾಮೇಗೌಡ ಆದೇಶ ಹೊರಡಿಸಿದ್ದಾರೆ.