ಸಾರಾಂಶ
ನರಸಿಂಹರಾಜಪುರ, ಪಿಯುಸಿ ವಿದ್ಯಾರ್ಥಿಗಳ ಭೌತಿಕ ಹಾಗೂ ಮಾನಸಿಕ ಬದಲಾವಣೆ ಹಂತವಾಗಿದೆ ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನ್ ಗೌಡ ಹೇಳಿದರು.
ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಮೆಲ್ ಮಾತೆಯ ದಿನ, ವಿದ್ಯಾರ್ಥಿ ಸಂಘ ಉದ್ಘಾಟನೆ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಪಿಯುಸಿ ವಿದ್ಯಾರ್ಥಿಗಳ ಭೌತಿಕ ಹಾಗೂ ಮಾನಸಿಕ ಬದಲಾವಣೆ ಹಂತವಾಗಿದೆ ಎಂದು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ನಿರಂಜನ್ ಗೌಡ ಹೇಳಿದರು.ತಾಲೂಕಿನ ಮೆಣಸೂರು ಗ್ರಾಮದಲ್ಲಿರುವ ಮೌಂಟ್ ಕಾರ್ಮೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಮೆಲ್ ಮಾತೆಯ ದಿನ, ವಿದ್ಯಾರ್ಥಿ ಸಂಘದ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸ್ವಾಗತ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಪೋಷಕರ ಕಷ್ಟ ಅರಿತು ಉತ್ತಮ ವ್ಯಾಸಂಗ ಮಾಡಬೇಕು. ಪಿಯುಸಿ ಭೌತಿಕ ಮತ್ತು ಮಾನಸಿಕ ಬದಲಾವಣೆ ತರುವ, ಬದುಕಿಗೆ ಬುನಾದಿ ಹಾಕುವ ಹಂತವಾಗಿದೆ. ಪ್ರತಿಯೊಂದು ಸುಂದರವಾಗಿ ಕಾಣುವ, ಆಕರ್ಷಿತ ವಾಗುವ ಸಂದರ್ಭ, ಚಂಚಲವಾಗುವ ಮನಸ್ಸನ್ನು ನಿಯಂತ್ರಣದಲ್ಲಿಟ್ಟು ಕೊಂಡು ಓದಿಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿ ದೆಸೆಯಲ್ಲಿ ಉತ್ತಮ ಆಚಾರ, ವಿಚಾರಗಳು ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಕಷ್ಟಪಟ್ಟರೆ ಮಾತ್ರ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲಿ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು. ಗುರುಹಿರಿಯರು ಪೋಷಕರಿಗೆ ಗೌರವಿಸುವುದನ್ನು ಕಲಿಯಬೇಕು. ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ನಾಯಕತ್ವ ಗುಣ ಬೆಳೆಸಿಕೊಳ್ಳ ಬೇಕು ಎಂದರು.ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಪಿ.ಆರ್.ಸದಾಶಿವ ಮಾತನಾಡಿ, ಪಿಯುಸಿ ಹಂತ ಜೀವನದ ದಿಕ್ಕನ್ನು ಬದಲಾಯಿಸುವ ಹಂತ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ತನ್ನದೇ ಆದ ಸಾಮರ್ಥ್ಯವಿದ್ದು ಅವಕಾಶಗಳನ್ನು ಸಮರ್ಪಕವಾಗಿ ಬಳಸಿ ಕೊಂಡಾಗ ಯಶಸ್ಸುಗಳಿಸಲು ಸಾಧ್ಯ. ಜೀವನದಲ್ಲಿನ ಸೋಲು, ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳ ಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಕಾರ್ಮೆಲ್ ವಿದ್ಯಾಸಂಸ್ಥೆ ವ್ಯವಸ್ಥಾಪಕಿ ಸಿಸ್ಟರ್ ಜೋಯಿಸ್ ಮಾತನಾಡಿ, ಶಿಕ್ಷಣವೆಂದರೆ ಕೇವಲ ಬರೆಯವುದು, ಓದುವುದನ್ನು ಕಲಿಯುವುದಲ್ಲ. ಮಕ್ಕಳಲ್ಲಿ ಮಾನವೀಯ ಮೌಲ್ಯ, ನೈತಿಕತೆ, ಪರಸ್ಪರ ನಂಬಿಕೆ. ಪ್ರೀತಿ, ವಿಶ್ವಾಸಗಳನ್ನು ಬೆಳೆಸುವುದಾಗಿದೆ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದ ಸಮಾಜದಲ್ಲಿ ಆದರ್ಶ ನಾಗರಿಕರಾಗಿ ಬದುಕ ಬೇಕೆಂದರು.ಪ್ರಾಂಶುಪಾಲೆ ಸಿಸ್ಟರ್ ಶುಭಾ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.ವಿದ್ಯಾರ್ಥಿಗಳಾದ ಬಿಬಿ ಆಯಿಷಾ, ದರ್ಶನಾ, ಅನನ್ಯ, ಜೇಸ್ನಾ ಮತ್ತು ತಂಡ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಮೆಲ್ ಮಾತೆ ಹಬ್ಬದ ಪ್ರಯುಕ್ತ ಅತಿಥಿಗಳು ಕೇಕ್ ಕತ್ತರಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.