ಸಾರಾಂಶ
ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕುರಿತಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿದಂತೆ ಯಾವ ಪಕ್ಷದಲ್ಲಿ ಯಾರೇ ಆರೋಪಿಗಳು ಇದ್ದರೂ ಅವರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್ ಆಗ್ರಹಿಸಿದರು.
ಹಾಸನ : ಮಹಿಳೆಯರ ಮೇಲೆ ಲೈಂಗಿಕ ಕುರಿತಂತೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಸೇರಿದಂತೆ ಯಾವ ಪಕ್ಷದಲ್ಲಿ ಯಾರೇ ಆರೋಪಿಗಳು ಇದ್ದರೂ ಅವರನ್ನು ಬಂಧಿಸಿ ತಕ್ಕ ಶಿಕ್ಷೆ ವಿಧಿಸಬೇಕೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಸ್.ಲಿಂಗೇಶ್, ಶಾಸಕ ಎಚ್.ಪಿ.ಸ್ವರೂಪ್ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪೆನ್‌ಡ್ರೈವ್ ವಿಚಾರದಲ್ಲಿ ಕಾಂಗ್ರೆಸ್ಸಿಗರ ಕೈವಾಡ ಇದೆ ಎಂದು ನಮಗೆ ಮೊದಲೇ ಅನುಮಾನ ಇತ್ತು. ಅದಕ್ಕೆ ಪೂರಕವಾಗಿ ದೇವರಾಜಗೌಡ ಕೂಡ ಹೇಳಿಕೆ ನೀಡಿದ್ದಾರೆ.
ಅನುಮಾನವಿದ್ಧ ವಿಚಾರವನ್ನು ದೇವರಾಜೇಗೌಡ ಪ್ರಸ್ತಾಪ ಮಾಡಿದ್ದಾರೆ. ಈಗಾಗಲೇ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಸಮಗ್ರ ರೀತಿಯಲ್ಲಿ ತನಿಖೆ ನಡೆಯುವ ಬಗ್ಗೆ ನಂಬಿಕೆ ಇದೆ. ಎಲ್ಲಾ ರೀತಿಯಲ್ಲಿ ತನಿಖೆ ಮಾಡಿ ಸತ್ಯ ಶೋಧನೆ ಮಾಡಿ ಕಾರಣಕರ್ತರನ್ನು ಕಂಡು ಹಿಡಿದು ನೊಂದವರಿಗೆ, ರಾಜ್ಯದ ಜನತೆಗೆ ನ್ಯಾಯ ದೊರಕಿಸಿಕೊಡಲಿದ್ದಾರೆ. ಪ್ರಮುಖ ಆರೋಪಿ ಕಾರ್ತಿಕ್ ಗೌಡ. ಲೈಂಗಿಕ ಕುರಿತಂತೆ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಅವರನ್ನೇಕೆ ವಿಚಾರಣೆ ಮಾಡುತ್ತಿಲ್ಲ. ಕಾಂಗ್ರೆಸ್ ಬೆಂಬಲಿಗರೆಂದು ತೀರ್ಮಾನ ತೆಗೆದುಕೊಂಡಿದ್ದಾರಾ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಇರಲಿ, ಯಾವುದೇ ಪಕ್ಷದಲ್ಲಿ ಯಾರೇ ಇದ್ದರೂ ಸಹ ಹಿಡಿಯುವ ಕೆಲಸ ಮಾಡಿ ಅವರಿಗೆ ತಕ್ಕ ಶಿಕ್ಷೆ ಆಗಬೇಕು. ನೊಂದ ಮಹಿಳೆಯರಿಗೆ ನ್ಯಾಯ ಒದಗಿಸುವ ಕೆಲಸ ಆಗಬೇಕು’ ಎಂದು ಒತ್ತಾಯಿಸಿದರು.
ಶಾಸಕ ಎಚ್.ಪಿ.ಸ್ವರೂಪ್ ಮಾತನಾಡಿ, ‘ಲೈಂಗಿಕ ದೌರ್ಜನ್ಯ ಕುರಿತಂತೆ ತನಿಖೆ ಮಾಡಲಾಗುತ್ತಿದ್ದು, ಸತ್ಯ ಹೊರ ಬರುವುದರಿಂದ ನಾವು ಅಲ್ಲಿಯವರೆಗೂ ಕಾಯಬೇಕಾಗಿದೆ. ದೇವರಾಜೇಗೌಡರ ವಿಚಾರವನ್ನು ಮಾಧ್ಯಮದಲ್ಲಿ ನೋಡಿದ್ದು, ಯಾರು ತಪ್ಪಿತಸ್ಥರಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಮಾಜಿ ಸಚಿವ ಎಚ್.ಡಿ. ರೇವಣ್ಣ ಕೂಡ ಯಾವ ತಪ್ಪು ಮಾಡಿಲ್ಲ. ಏಕಾಏಕಿ ಒಂದೇ ದಿನದಲ್ಲಿ ಎಫ್‌ಐಆರ್ ಮಾಡಿ ಬಂಧಿಸಿರುವುದು ಬೇಸರದ ಸಂಗತಿ’ ಎಂದು ತಿಳಿಸಿದರು.
ಮುಂದೆ ಈ ರೀತಿ ಆಗಬಾರದು. ಮುಂದೆ ದೇವರು ರೇವಣ್ಣ ಅವರಿಗೆ ಹೆಚ್ಚಿನ ಶಕ್ತಿ ಕೊಟ್ಟು ದೊಡ್ಡ ಮಟ್ಟದ ಅಧಿಕಾರ ಪಡೆಯುವರು. ಬಿಜೆಪಿ ಮನೆ ಮೇಲೆ ದಾಳಿ ಮಾಡಿರುವವರು ತಮಗೆ ಪರಿಚಯವಿಲ್ಲ ಎಂದು ಹೇಳಿದರು.
ಪ್ರಜ್ವಲ್ ಬಂಧಿಸಿ ಕಠಿಣ ಕ್ರಮ ಜರುಗಿಸಿ: ವಕೀಲ ವಿನಯ್ ಗಾಂಧಿ
ಹಾಸನ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮಹಿಳೆಯರು ಕೇಸ್ ದಾಖಲಿಸಿದ್ದು, ಇಂತಹ ಅಪಾದನೆಯಲ್ಲಿ ಭಾಗಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ವಕೀಲ ವಿನಯ್ ಗಾಂಧಿ ಒತ್ತಾಯಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಜಿಲ್ಲೆಯ ಜನಪರ ಚಳುವಳಿಯ ಹಾಗೂ ಒಕ್ಕೂಟದ ಸದಸ್ಯರು ಮತ್ತು ಪ್ರಗತಿಪರ ಸಂಘಟನೆಗಳು ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಸಾರ್ವಜನಿಕರು ಒಟ್ಟಿಗೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯರ ಮೇಲೆ ನಡೆದಿರುವ ಅತ್ಯಾಚಾರ ಎಸಗಿರುವ ಬಗ್ಗೆ ಸಂತ್ರಸ್ತೆಯರು ಹೊಳೆನರಸೀಪುರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಂಬದವರು ಮಾಡಿರುವ ಅತ್ಯಾಚಾರ ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾಗಿರುವುದರಿಂದ ಇವರ ಕುಟುಂಬದವರೇ ಸಂತ್ರಸ್ತ ಪ್ರತಿಯೊಬ್ಬ ಮಹಿಳೆಯರಿಗೆ ಕೋಟ್ಯಂತರ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.ವಕೀಲರಾದ ಮುನಿಸ್ವಾಮಿ, ಜಿ.ಎನ್.ಸುರೇಶ್, ನಗರಸಭೆ ಮಾಜಿ ಸದಸ್ಯ ಆಲೀಂ ಪಾಷ ಇತರರು ಇದ್ದರು.