ಅರಣ್ಯಕ್ಕೆ ಬೆಂಕಿ ಹಚ್ಚಿದರೆ ಶಿಕ್ಷೆ: ವಲಯ ಅರಣ್ಯಾಧಿಕಾರಿ ಹೇಮಂತ್ ಎಚ್ಚರಿಕೆ

| Published : Feb 10 2024, 01:45 AM IST

ಅರಣ್ಯಕ್ಕೆ ಬೆಂಕಿ ಹಚ್ಚಿದರೆ ಶಿಕ್ಷೆ: ವಲಯ ಅರಣ್ಯಾಧಿಕಾರಿ ಹೇಮಂತ್ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಕಿ ಹಚ್ಚುವುದು ಕರ್ನಾಟಕ ಅರಣ್ಯ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಅರಣ್ಯಕ್ಕೆ ಸಾರ್ವಜನಿಕರು ಬೆಂಕಿ ಹಚ್ಚಿದರೆ ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಅರಸೀಕೆರೆಯಲ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಬೆಂಕಿ ಹಚ್ಚುವುದು ಕರ್ನಾಟಕ ಅರಣ್ಯ ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದು ಸಾರ್ವಜನಿಕರು ಬೆಂಕಿ ಹಚ್ಚಿದರೇ ಶಿಕ್ಷೆಗೆ ಒಳಗಾಗಲಿದ್ದಾರೆ ಎಂದು ವಲಯ ಅರಣ್ಯಾಧಿಕಾರಿ ಹೇಮಂತ್ ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಹಿರೇಕಲ್‌ಗುಡ್ಡ, ರಾಮೇನಹಳ್ಳಿ, ಬಸ್ಲೆಕಲ್ಲು, ದೇಶಾಣಿ, ಬೆಟ್ಟದಪುರ, ಜಾಜೂರು, ಬೆಲವತ್ತಹಳ್ಳಿ ಗರುಡನಗಿರಿ, ಚಾಕನಕಟ್ಟೆ, ಡಿ.ಎಂ. ಕುರ್ಕೆ ಮೀಸಲು ಅರಣ್ಯ ಪ್ರದೇಶವು ಸುಮಾರು ೩೫ ಸಾವಿರ ಎಕರೆ ಪ್ರದೇಶವನ್ನು ಹೊಂದಿದ್ದು ಇಲ್ಲಿ ಅತ್ಯಮೂಲ್ಯವಾದ ಬೆಲೆಬಾಳುವ ಮರ, ಗಿಡಗಳು ಹಾಗೂ ಔಷಧಿ ಸಸ್ಯಗಳ ಆಗರವಿದೆ. ಅಲ್ಲದೇ ಅಂತರ್ಜಲಮಟ್ಟವನ್ನು ಹೆಚ್ಚಿಸುವ ಪ್ರದೇಶವೂ ಸಹ ಆಗಿದ್ದು ಇಲ್ಲಿ ಚಿರತೆ, ಕರಡಿ, ಜಿಂಕೆ ಸೇರಿದಂತೆ ವನ್ಯ ಪ್ರಾಣಿಗಳ ವಾಸಸ್ಥಾನವಾಗಿದ್ದು ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಓಡಾಡುವವರು ಯಾವುದೇ ಕಾರಣಕ್ಕೂ ಬೆಂಕಿಯನ್ನು ಹಚ್ಚಬಾರದು ಎಂದು ತಿಳಿಸಿದ್ದಾರೆ.

ಕಾಡಿಗೆ ಬೆಂಕಿ ಬಿದ್ದರೆ ಅರಣ್ಯ ಸಂಪತ್ತು ಹಾಗೂ ವನ್ಯಜೀವಿ ನಾಶವಾಗಲಿದೆ, ಭೂಮಿಯ ತೇವಾಂಶ ಮತ್ತು ಅಂತರ್ಜಲ ಕ್ಷೀಣವಾಗುತ್ತದೆ, ಜನ, ಜಾನುವಾರಿಗೆ ಕುಡಿಯುವ ನೀರಿನ ಅಭಾವ ಉಂಟಾಗಲಿದೆ. ಮಣ್ಣಿನ ಸವಕಳಿ ಹೆಚ್ಚುತ್ತದೆ, ಮಾನವ ವನ್ಯಜೀವಿ ಸಂಘರ್ಷ ಹೆಚ್ಚುತ್ತದೆ, ಹೊಗೆಯಿಂದ ವಾತಾವರಣ ಕಲುಷಿತಗೊಂಡು ಉಸಿರಾಟ ತೊಂದರೆಯಾಗಿ, ಹಸಿರು ಇಲ್ಲವಾಗಲಿದೆ ಎಂದರು.

ಅರಣ್ಯ ಪ್ರದೇಶಲ್ಲಿ ಬೆಂಕಿ ಬಿದ್ದರೆ ಅರಣ್ಯ ಇಲಾಖೆಯ ಗಮನಕ್ಕೆ ತರುವುದು, ಸಿಬ್ಬಂದಿಯೊಂದಿಗೆ ಬೆಂಕಿ ನಂದಿಸಲು ಸಹಕರಿಸುವುದು, ರೈತರ ತಮ್ಮ ಜಮೀನಿನ ಬದುಗಳಲ್ಲಿ ಬೆಂಕಿ ಹಾಕಿದಾಗ ಅರಣ್ಯ ಪ್ರದೇಶಕ್ಕೆ ಬರದಂತೆ ಸಾರ್ವಜನಿಕರು ಎಚ್ಚರವಹಿಸಬೇಕು ಎಂದರು.

ಅರಸೀಕೆರೆ ವಲಯ ಅರಣ್ಯಾಧಿಕಾರಿ ಹೇಮಂತ್.