೧೨ನೇ ಶತಮಾನದಲ್ಲಿನ ಶಿವಶರಣ, ಸಂತರ ಪುರಾಣ ಪ್ರವಚಣಗಳು ತತ್ರೋಪದೇಶಗಳು ಇಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಸಹಕಾರಿ
ಕಾರಟಗಿ: ಆಧುನಿಕ ಭರಾಟೆ, ಒತ್ತಡದ ಜೀವನದಿಂದ ನೆಮ್ಮದಿ, ನಮ್ಮ ಆಚಾರ್ ವಿಚಾರ ಮುಂದಿನ ಪೀಳಿಗೆಗೆ ತಿಳಿಸಲು ಪುರಾಣ ಪ್ರವಚನ ಪ್ರಸಕ್ತ ಜೀವನಕ್ಕೆ ಅತ್ಯವಶ್ಯ ಎಂದು ಹಿರೇಮಠದ ಮರುಳಸಿದ್ದಯ್ಯ ಸ್ವಾಮಿ ಹೇಳಿದರು.
ಪಟ್ಟಣದ ಆರಾಧ್ಯದೈವ ಶರಣ ಬಸವೇಶ್ವರ ಮಂಗಲ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ನಡೆಯುವ ಕಲಬುರಗಿ ಶ್ರೀಶರಣ ಬಸವೇಶ್ವರರ ೫೨ನೇ ವರ್ಷದ ಚರಿತಾಮೃತ ಪುರಾಣ ಪ್ರವಚನಕ್ಕೆ ಶುಕ್ರವಾರ ರಾತ್ರಿ ಚಾಲನೆ ನೀಡಿ ಮಾತನಾಡಿದರು.೧೨ನೇ ಶತಮಾನದಲ್ಲಿನ ಶಿವಶರಣ, ಸಂತರ ಪುರಾಣ ಪ್ರವಚಣಗಳು ತತ್ರೋಪದೇಶಗಳು ಇಂದಿನ ಪೀಳಿಗೆಯ ಭವಿಷ್ಯ ರೂಪಿಸಲು ಸಹಕಾರಿಯಾಗಿದ್ದು, ಯುವಕರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತೀ ಅವಶ್ಯವಾಗಿದೆ. ಶರಣರು ನುಡಿದಂತೆ ನಡೆಯುವ ಮೂಲಕ ಸಮಾಜಕ್ಕೆ ಇಂದಿಗೂ ಮಾದರಿಯಾಗಿದ್ದಾರೆ. ಅವರ ತತ್ವ, ನೀತಿ, ಸಂಸ್ಕಾರ, ಯುವಕರಿಗೆ ಸ್ಫೂರ್ತಿದಾಯಕವಾಗಿವೆ. ಆದ್ದರಿಂದ ಶ್ರಾವಣಮಾಸದಲ್ಲಿ ಶರಣರತತ್ವ ಚಿಂತನೆ, ಉಪದೇಶ ಶ್ರವಣ ಮಾಡಬೇಕು. ಶ್ರಾವಣಮಾಸದ ಆಚರಣೆಗೆ ವಿಶೇಷ ಅರ್ಥವಿದ್ದು, ಶರಣರ ತತ್ವ ಚಿಂತನೆ ಪ್ರವಚನ ಮೂಲಕ ತಿಳಿಯಬಹುದಾಗಿದೆ ಎಂದರು.
ವಿಶ್ವದಲ್ಲಿ ಶ್ರೇಷ್ಟ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಾದರೆ ಉತ್ತಮ ಸಂಸ್ಕಾರ ಅತ್ಯವಶ್ಯವಾಗಿದ್ದು, ಅದರೊಂದಿಗೆ ಮಾನವನಲ್ಲಿ ಮೌಢ್ಯತೆ ಕಳೆಯುತ್ತದೆ. ಆಧ್ಯಾತ್ಮದ ಬದುಕನ್ನು ಕಟ್ಟಿಕೊಳ್ಳಲು ಒಳ್ಳೆಯ ವಿಚಾರ ಹೊಂದಿರುವ ಇಂತಹ ಶ್ರಾವಣ ಸಂಜೆಯ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಭಕ್ತರು ಪಾಲ್ಗೊಳ್ಳಬೇಕು. ಸಂಸಾರಿಕ ಜೀವನದ ತೊಳಲಾಟದಿಂದ ಕ್ಷಣಕಾಲ ಶಾಂತಿ, ನೆಮ್ಮದಿ ಪಡೆಯಲು ಭಕ್ತಿಮಾರ್ಗದೊಂದಿಗೆ ಶರಣ ಮಹಿಮೆ ಆಲಿಸಿ ಪುರಾಣದಲ್ಲಿ ಪಠಿಸಿದ ಮಹತ್ವದ ವಿಚಾರಧಾರೆ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.ಪುರಾಣ ಧಾರ್ಮಿಕ ಕಾರ್ಯಕ್ರಮ ಉಚಿತ ಸಾಮೂಹಿಕ ಮದುವೆ ಸರ್ವಧರ್ಮಿಯ ಭಕ್ತ ಸಮೂಹದ ಸಹಾಯ ಸಹಕಾರದೊಂದಿಗೆ ದೇವಸ್ಥಾನದ ಪುರಾಣ ಸಮಿತಿ ನಡೆಸುತ್ತ ಬಂದಿದೆ. ಸಕಲ ಸದ್ಭಕ್ತಾಧಿಗಳು ದೇವಸ್ಥಾನದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿ ಶ್ರೀಶರಣ ಬಸವೇಶ್ವರರ ಕೃಪೆಗೆ ಪಾತ್ರರಾಗಬೇಕು ಎಂದರು.
ಈ ವೇಳೆ ಪುರಾಣ ಪ್ರವಚನಕಾರ ಶಿವಾಚಾರ್ಯ ಮಹಾಸ್ವಾಮಿಗಳು, ಪುರಾಣ ಪಠಣಕಾರ ಧರ್ಮರಾಜ ಕಲ್ಲೂರ, ತಬಲಾವಾದಕ ಶಂಕ್ರಯ್ಯ ಸ್ವಾಮಿ ಹಿರೇಮಠ ಸೇರಿದಂತೆ ಪುರಾಣ ಸಮಿತಿಯ ಗುಂಡಪ್ಪ ಕುಳಗಿ, ಜಗದೀಶಪ್ಪ ಅವರಾದಿ, ಮಲ್ಲಿಕಾರ್ಜುನ ಕೊಟಗಿ, ಗದ್ದಿ ಶರಣಪ್ಪ,ಶರಣಪ್ಪ ಅಂಗಡಿ, ಅಮರೇಶ ಕಟಾಂಬ್ಲಿ, ಪಂಪಯ್ಯಸ್ವಾಮಿ ಚೆಳ್ಳೂರುಮಠ ಸೇರಿದಂತೆ ಸದ್ಭಕ್ತಾಧಿಗಳು, ಮಹಿಳಾ ಸಂಘಟನೆಯ ಸದಸ್ಯರು, ಅರ್ಚಕ ಮುತ್ತಯ್ಯಸ್ವಾಮಿ ಸೇರಿದಂತೆ ಇತರರು ಇದ್ದರು.ಕಳಸಾರೋಹಣ: ಬೆಳಗ್ಗೆ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜೆಗಳು ನಡೆದವು. ಅರ್ಚಕರು ದೇವಸ್ಥಾನ ಮತ್ತು ಮಹಾದ್ವಾರದ ಕಳಸಗಳನ್ನು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ತಂದು ಕಳಸಾರೋಹಣ, ಧ್ವಜ ಸ್ಥಾಪನೆ ಕಾರ್ಯಕ್ರಮ ವಿದ್ಯುಕ್ತವಾಗಿ ನಡೆಸಲಾಯಿತು.