ಸಾರಾಂಶ
- ಸೋಯಾಬಿನ್, ಸೂರ್ಯಯಕಾಂತಿಗೂ ನೆರವು । ಕೇಂದ್ರ ಅಸ್ತು
- ಅತಿವೃಷ್ಟಿ ಕಾರಣ ನೆರವು ಕೋರಿದ್ದ ಜೋಶಿ ಮನವಿಗೆ ಮನ್ನಣೆ----
ರಾಜ್ಯ ಸರ್ಕಾರ ಖರೀದಿಕೇಂದ್ರ ಆರಂಭಿಸಲಿ
ಕೇಂದ್ರದ ಬೆಂಬಲ ಬೆಲೆ ಯೋಜನೆಗೆ ರಾಜ್ಯ ಸರ್ಕಾರವೂ ನೆರವು ನೀಡಬೇಕು. ಈ ಕೂಡಲೇ ರಾಜ್ಯಾದ್ಯಂತ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕು.- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ--ಕನ್ನಡಪ್ರಭ ವಾರ್ತೆ ನವದೆಹಲಿಅತಿವೃಷ್ಟಿಯಿಂದಾಗಿ ತತ್ತರಿಸಿರುವ ಕರ್ನಾಟಕದ ರೈತರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ ಜೋಶಿ ಅವರ ಒತ್ತಾಸೆ ಮೇರೆಗೆ ನವರಾತ್ರಿ ಕೊಡುಗೆಯಾಗಿ ಬೆಂಬಲ ಬೆಲೆಯಲ್ಲಿ ಐದು ಧಾನ್ಯಗಳ ಖರೀದಿಗೆ ಅನುಮತಿ ನೀಡಿದೆ.2025-26ನೇ ಸಾಲಿನ ಮುಂಗಾರಿನಲ್ಲಿ ಬೆಳೆದ ಹೆಸರು ಕಾಳು, ಉದ್ದಿನ ಕಾಳು, ನೆಲಗಡಲೆ(ಶೇಂಗಾ), ಸೋಯಾಬಿನ್ ಮತ್ತು ಸೂರ್ಯಕಾಂತಿ ಧಾನ್ಯಗಳನ್ನು ಕೇಂದ್ರದ ಬೆಂಬಲ ಬೆಲೆಯಲ್ಲಿ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಕುರಿತು ಕೇಂದ್ರ ಕೃಷಿ ಸಚಿವರು ಜೋಶಿ ಅವರಿಗೆ ಖುದ್ದು ಪತ್ರ ಬರೆದು ಮಾಹಿತಿ ನೀಡಿದ್ದಾರೆ.ಪ್ರಸಕ್ತ ಮುಂಗಾರಿನಲ್ಲಿ ಕರ್ನಾಟಕದ ಬೆಳೆಗಾರರು ಅತಿವೃಷ್ಟಿಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹೆಸರು, ಉದ್ದು, ಶೇಂಗಾ, ಸೋಯಾಬಿನ್ ಹಾಗೂ ಸೂರ್ಯಕಾಂತಿ ಧಾನ್ಯಗಳನ್ನು ಬೆಂಬಲ ಬೆಲೆಯಲ್ಲಿ ಖರೀದಿಗೆ ನೆರವಾಗುವಂತೆ ಕೋರಿ ಸಚಿವ ಜೋಶಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ್ ಅವರಿಗೆ ಪತ್ರ ಬರೆದಿದ್ದರು.ಈ ಮನವಿಗೆ ಸ್ಪಂದಿಸಿದ ಪ್ರಧಾನಿ ಮೋದಿ ಅವರು ತಕ್ಷಣವೇ ಕರ್ನಾಟಕದ ರೈತರ ನೆರವಿಗೆ ಮುಂದಾಗುವಂತೆ ತಿಳಿಸಿದ್ದರು. ಅಂತೆಯೇ ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್ ಅವರು ಬೆಳೆಗಾರರ ಹಿತದೃಷ್ಟಿಯಿಂದ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀದಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ಸಹ ನೀಡಿದ್ದಾರೆ.ಯಾವುದೆಷ್ಟು ಖರೀದಿಗೆ ಕೇಂದ್ರ ಅಸ್ತು?:
ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಕರ್ನಾಟಕದಿಂದ 38000 ಮೆಟ್ರಿಕ್ ಟನ್ ಹೆಸರು ಕಾಳು, 60,810 ಮೆಟ್ರಿಕ್ ಟನ್ ಉದ್ದು, 15,650 ಮೆಟ್ರಿಕ್ ಟನ್ ಸೂರ್ಯಕಾಂತಿ, 61,148 ಮೆಟ್ರಿಕ್ ಟನ್ ಕಡಲೆಬೀಜ ಮತ್ತು 1,15,000 ಮೆಟ್ರಿಕ್ ಟನ್ ಸೋಯಾಬಿನ್ ಖರೀದಿಗೆ ಅನುಮತಿ ನೀಡಿದೆ ಎಂದು ಸಚಿವ ಜೋಶಿ ತಿಳಿಸಿದ್ದಾರೆ.ಜಿಲ್ಲಾವಾರು ಖರೀದಿ ಕೇಂದ್ರಕ್ಕೆ ಜೋಶಿ ಒತ್ತಾಯ:ಕೇಂದ್ರ ಸರ್ಕಾರವು ಕರ್ನಾಟಕದ ರೈತರಿಗೆ ಕಲ್ಪಿಸಿರುವ ಈ ಬೆಂಬಲ ಬೆಲೆ ಯೋಜನೆ ನೆರವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಒದಗಿಸಬೇಕು. ಈ ಕೂಡಲೇ ರಾಜ್ಯಾದ್ಯಂತ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ತೆರೆದು ಧಾನ್ಯಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಜೋಶಿ ಒತ್ತಾಯಿಸಿದ್ದಾರೆ.ಪ್ರಧಾನಿ ಮತ್ತು ಕೃಷಿ ಸಚಿವರಿಗೆ ಧನ್ಯವಾದ:
ಕರ್ನಾಟಕದ ರೈತರ ಸಂಕಷ್ಟ ಅರಿತು ಈ ಮೂಲಕ ನೆರವಿಗೆ ಧಾವಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾಣ್ ಅವರಿಗೆ ಸಚಿವ ಜೋಶಿ ರಾಜ್ಯದ ರೈತರ ಪರವಾಗಿ ಧನ್ಯವಾದ ಸಹ ಅರ್ಪಿಸಿದ್ದಾರೆ.