ಸಾರಾಂಶ
ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ, ಬಿಳಿಜೋಳ ಖರೀದಿಸಲು ಜಿಲ್ಲೆಯ ಆರು ತಾಲೂಕುಗಳಲ್ಲಿ ಈಗಾಗಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸರ್ಕಾರ ಆಯಾ ಬೆಳೆಗಳಿಗೆ ಪ್ರತಿ ಕ್ವಿಂಟಲ್‌ನಂತೆ ಬೆಲೆ ನಿಗದಿಪಡಿಸಿದೆ.
ಹೊಸಪೇಟೆ: 2023- 24ನೇ ಸಾಲಿನ ಮುಂಗಾರು ಋತುವಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಮತ್ತು ಬಿಳಿಜೋಳ ಖರೀದಿ ಮಾಡಲಾಗುತ್ತಿದ್ದು, ಜಿಲ್ಲೆಯ ರೈತರು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಕೃಷಿ ಮಾರಾಟ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದರು.ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ರಾಗಿ, ಬಿಳಿಜೋಳ ಖರೀದಿಸಲು ಜಿಲ್ಲೆಯ ಆರು ತಾಲೂಕುಗಳಲ್ಲಿ ಈಗಾಗಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಸರ್ಕಾರ ಆಯಾ ಬೆಳೆಗಳಿಗೆ ಪ್ರತಿ ಕ್ವಿಂಟಲ್‌ನಂತೆ ಬೆಲೆ ನಿಗದಿಪಡಿಸಿದೆ. ಜಿಲ್ಲೆಯ ರೈತರು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು. ನೋಂದಣಿ ಕುರಿತು ರೈತರಿಗೆ ಜಾಗೃತಿ ಮೂಡಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ, ಪ್ರಸಕ್ತ ಸಾಲಿನ ಕನಿಷ್ಠ ಬೆಂಬಲ ಬೆಲೆಯಡಿ ಪ್ರತಿ ಕ್ವಿಂಟಲ್ ರಾಗಿಗೆ 3846, ಹೈಬ್ರಿಡ್ ಬಿಳಿಜೋಳಕ್ಕೆ ₹3180 ಹಾಗೂ ಮಾಲ್ದಂಡಿ ಬಿಳಿಜೋಳಕ್ಕೆ ₹3225 ದರ ನಿಗದಿಪಡಿಸಿದ್ದು, ವಿಜಯನಗರ ಜಿಲ್ಲೆಗೆ ಖರೀದಿ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯನ್ನು ಸರ್ಕಾರವು ನೇಮಿಸಿದೆ. ಜಿಲ್ಲೆಯಲ್ಲಿ ಬೆಂಬಲ ಬೆಲೆಯಲ್ಲಿ ಜ. 3ರ ವರೆಗೆ ಜಿಲ್ಲೆಯ 117 ರೈತರಿಂದ 2840 ಕ್ವಿಂಟಲ್ ಪ್ರಮಾಣದಷ್ಟು ನೋಂದಣಿಯಾಗಿದೆ. ನೋಂದಣಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ರಾಗಿ ಮತ್ತು ಬಿಳಿಜೋಳ ಬೆಳೆಗಾರರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಮಾಹಿತಿ ನೀಡಿದರು.ಖರೀದಿ ಕೇಂದ್ರ, ಅಧಿಕಾರಿಗಳ ವಿವರ:
ಖರೀದಿ ಕೇಂದ್ರಗಳನ್ನು ಆಯಾ ತಾಲೂಕಿನ ಎಪಿಎಂಸಿ ಯಾರ್ಡ್‌ಗಳಲ್ಲಿ ಪ್ರಾರಂಭಿಸಲಾಗಿದ್ದು, ರೈತರು ನೋಂದಣಿಗಾಗಿ ಖರೀದಿ ಕೇಂದ್ರಗಳ ಅಧಿಕಾರಿಗಳಾದ ಹೊಸಪೇಟೆಯ ಆನಂದ್ ಎರಗುಲ್ ಮೊ. 7019544230, ಹರಪ್ಪನಹಳ್ಳಿಯ ಪರಶುರಾಮ್ ಕುಲಕಾರ್ ಮೊ. 9972403676, ಹಗರಿಬೊಮ್ಮನಹಳ್ಳಿಯ ಯು.ವಿ ಅಥಣಿಮಠ್ ಮೊ. 9740827093, ಹಡಗಲಿಯ ಮಂಜುನಾಥ್ ವಡ್ಡರ್ ಮೊ. 9845274145, ಕೂಡ್ಲಿಗಿಯ ರಾಜು ತಿಪ್ಪಶೆಟ್ಟಿ ಮೊ. 8073814583 ಹಾಗೂ ಕೊಟ್ಟೂರಿನ ಚಿದಾನಂದ ನವಲಗುಂದ ಮೊ. 9480752045 ಸಂಪರ್ಕಿಸಬಹುದು ಎಂದರು.ಈ ಸಂದರ್ಭದಲ್ಲಿ ಕೃಷಿ ಮಾರಾಟ ಮಂಡಳಿಯ ಜಿಲ್ಲಾ ವ್ಯವಸ್ಥಾಕ ಸಂಗಮೇಶ ಸೇರಿದಂತೆ ಖರೀದಿ ಕೇಂದ್ರಗಳ ಅಧಿಕಾರಿಗಳು ಉಪಸ್ಥಿತರಿದ್ದರು.