ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ : ಡಿಸಿ ಮೀನಾ ನಾಗರಾಜ್‌

| Published : Aug 31 2024, 01:37 AM IST

ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಖರೀದಿ : ಡಿಸಿ ಮೀನಾ ನಾಗರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‌ಗೆ 7280 ರು. ನಂತೆ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.

ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿ । ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿಯನ್ನು ಪ್ರತಿ ಕ್ವಿಂಟಲ್‌ಗೆ 7280 ರು. ನಂತೆ ಖರೀದಿ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ.ಪ್ರಸಕ್ತ ಸಾಲಿನಲ್ಲಿ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸುವ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿ ಎಕರೆಗೆ 3 ಕ್ವಿಂಟಾಲ್‌ನಂತೆ ಪ್ರತಿ ರೈತರಿಂದ ಗರಿಷ್ಠ 15 ಕ್ವಿಂಟಾಲ್ ಸೂರ್ಯಕಾಂತಿ ಖರೀದಿಸಲಾಗುವುದು. ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ಆದೇಶ ಹೊರಡಿಸಿದ ದಿನಾಂಕದಿಂದ 45 ದಿನಗಳವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಡೂರಿನಲ್ಲಿ ಖರೀದಿ ಕೇಂದ್ರ ತೆರೆಯುವಂತೆ ತಿಳಿಸಿದ ಅವರು, ಬೆಂಗಳೂರಿನ ಕರ್ನಾಟಕ ಸಹಕಾರಿ ಎಣ್ಣೆ ಬೀಜ ಬೆಳೆಗಾರರ ಮಹಾಮಂಡಳಿ ನಿಯಮಿತವನ್ನು ಖರೀದಿ ಸಂಸ್ಥೆಯನ್ನಾಗಿ ಮಾಡಲಾಗಿದೆ. ಗುಣಮಟ್ಟ ಪರಿಶೀಲನೆಗಾಗಿ ಕೃಷಿ ಇಲಾಖೆಯ ಒಬ್ಬರು ಗ್ರೇಡರ್ ಅನ್ನು ನಿಯೋಜಿಸುವಂತೆ ಹೇಳಿದರು.ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರದಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ಎಫ್.ಐ.ಡಿ ನಂಬರ್ ಮತ್ತು ಆಧಾರ್ ಸಂಖ್ಯೆ ನೀಡಿ ನೋಂದಾಯಿಸಬೇಕು. ಒಂದು ವೇಳೆ ದರ್ಶಕದಲ್ಲಿ ಮತ್ತು ಫ್ರೂಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದೇ ಇದ್ದಲ್ಲಿ ಹತ್ತಿರದ ಕೃಷಿ ಇಲಾಖೆ ಸಂಪರ್ಕಿಸಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು. ನೋಂದಣಿ ಸಮಯದಲ್ಲಿ ಆಧಾರ್‌ ಕಾರ್ಡ್, ಪಹಣಿ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ ಬುಕ್ ಪ್ರತಿ ಸಲ್ಲಿಸಬೇಕು ಎಂದು ತಿಳಿಸಿದರು.ಬೆಂಬಲ ಬೆಲೆ ಯೋಜನೆ ಸದುಪಯೋಗವನ್ನು ರೈತರು ಪಡೆಯಲು ಖರೀದಿ ಕೇಂದ್ರದ ಮುಂದೆ ಬ್ಯಾನರ್ ಆಳವಡಿಸಬೇಕು. ರೈತರಿಗೆ ಕರಪತ್ರ ವಿತರಿಸುವ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪಾಲ್ಗೊಂಡು ಇದರ ಲಾಭ ಪಡೆಯುವಂತೆ ಕ್ರಮ ವಹಿಸಬೇಕು ಎಂದರು.ಖರೀದಿ ಕೇಂದ್ರದಲ್ಲಿ ರೈತರ ಹೆಸರಿನಲ್ಲಿ ವರ್ತಕರು ತರುವ ಸೂರ್ಯಕಾಂತಿ ಖರೀದಿಸದಂತೆ ಹಾಗೂ ಖರೀದಿ ಸಂಸ್ಥೆಗಳ ಯಾವುದೇ ರೀತಿಯ ದುರುಪಯೋಗವಾಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹೇಳಿದ ಅವರು, ಈ ಯೋಜನೆಯಡಿ ಖರೀದಿ ಪ್ರಗತಿ ವಿವರವನ್ನು ಪ್ರತಿ ದಿನ ಸರ್ಕಾರಕ್ಕೆ ಹಾಗೂ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಗೆ ಇ-ಮೇಲ್ ಮೂಲಕ ಸಲ್ಲಿಸುವಂತೆ ಸೂಚಿಸಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ ವಿಶ್ವನಾಥ್ ರೆಡ್ಡಿ, ಕರ್ನಾಟಕ ಎಣ್ಣೆ ಬೀಜ ನಿಗಮ ವ್ಯವಸ್ಥಾಪಕ ಭರತ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ, ಕಡೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕೆ. ಚೈತ್ರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.30 ಕೆಸಿಕೆಎಂ 2ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ ಖರೀದಿಸುವ ಕುರಿತು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್‌ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಜಿಪಂ ಸಿಇಒ ಕೀರ್ತನಾ ಹಾಗೂ ಅಧಿಕಾರಿಗಳು ಇದ್ದರು.