ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಶಿವಯೋಗ ಸಾಧನೆ ಮಾಡಿದರೆ ತನು-ಮನ-ಭಾವ ಶುದ್ಧಿಯಾಗುವುದರ ಜತೆಗೆ ಮಾನಸಿಕ ಕಳವಳ, ಗೊಂದಲಗಳಿಂದ ಮುಕ್ತಿ ದೊರೆಯುತ್ತದೆ ಎಂದು ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.ನಗರದ ಹೊರವಲಯದಲ್ಲಿರುವ ಶೀಬಾರದ ಶ್ರೀ ಗುರುಪಾದ ಮುರುಘರಾಜೇಂದ್ರ ಶ್ರೀಗಳವರ ವನದಲ್ಲಿ ಭಾನುವಾರ ನಡೆದ ಶ್ರಮದಾನ, ಶಿವಯೋಗ ಪ್ರಾತ್ಯಕ್ಷಿಕೆ, ಗಾನ ನಮನ, ನುಡಿ ನಮನ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಸೇರಿದಂತೆ ಅಪರೂಪದ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಬಸವಾದಿ ಶಿವಶರಣರ ವಚನಗಳು ಮಾನವನನ್ನು ಮಹದೇವನನ್ನಾಗಿಸುವ ಮೌಲ್ಯಗಳನ್ನು ಒಳಗೊಂಡಿವೆ. ಇಷ್ಟಲಿಂಗದ ಮೂಲಕ ಮನಸ್ಸನ್ನು ಏಕಾಗ್ರಗೊಳಿಸುತ್ತವೆ ಎಂದರು.ಖ್ಯಾತ ಗಾಯಕಿ ಡಾ.ಎಸ್.ಜಾನಕಿ ಅವರಿಗೆ ಗಾನ ನಮನ ಸಲ್ಲಿಸಲಾಯಿತು. ಹಿರಿಯ ಗಾಂಧಿವಾದಿ ಎಚ್.ಹನುಮಂತಪ್ಪ ಅವರ ಸಮಾಜಮುಖಿ ಸೇವೆಯನ್ನು ಸ್ಮರಿಸಿ ನುಡಿ ನಮನ ಅರ್ಪಿಸಲಾಯಿತು. ಇದೇ ವೇಳೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಕೆ.ಪಿ. ಓಂಕಾರಮೂರ್ತಿ ಸೇರಿದಂತೆ ಶಿಕ್ಷಣ, ಸಮಾಜಸೇವೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.
ಎಸ್.ವಿ.ಗುರುಮೂರ್ತಿ ಅವರ ಸ್ಯಾಕ್ಸೋಫೋನ್ ವಾದನದೊಂದಿಗೆ ಆರಂಭವಾದ ಗಾನ ನಮನ ಕಾರ್ಯಕ್ರಮದಲ್ಲಿ ಜ್ಯೋತಿಗಿರೀಶ್, ಸತ್ಯನಾರಾಯಣ, ಡಾ. ಚೇತನ್, ಪ್ರಣತಿ, ಚಂದ್ರಕಲಾ, ಕಲ್ಪಶ್ರೀ, ಶ್ರೀನಿವಾಸ್ ಸೇರಿದಂತೆ ಹಲವರು ಎಸ್. ಜಾನಕಿ ಅವರ ಜನಪ್ರಿಯ ಗೀತೆಗಳನ್ನು ಹಾಡಿ ನೆರೆದವರನ್ನು ಭಾವುಕರನ್ನಾಗಿಸಿದರು.
ಈ ಸಂದರ್ಭದಲ್ಲಿ ಎಸ್.ಜೆ.ಎಂ. ವಿಶ್ವವಿದ್ಯಾಲಯದ ಕುಲಪತಿ ಡಾ. ಕೆ.ಬಿ.ಗುಡಸಿ, ಗಾಯತ್ರಿ ಶಿವರಾಂ, ನಾಗರಾಜ ಸಂಗಂ, ಕವಿ ಗಂಗಾಧರಪ್ಪ, ಮಲ್ಲಿಕಾರ್ಜುನಪ್ಪ, ಗೌಳಿರುದ್ರಪ್ಪ, ವಕೀಲರಾದ ಉಮೇಶ್, ಗುತ್ತಿನಾಡು ಪ್ರಕಾಶ್, ವರ್ತಕ ತಿಪ್ಪೇಸ್ವಾಮಿ, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಆಯುಷ್ ಯೋಗ ಸಂಸ್ಥೆಯ ಪ್ರಸನ್ನಕುಮಾರ್, ಮಂಜುನಾಥ್, ಬಸವರಾಜ್, ಶಿವಯೋಗಿ, ಸೇರಿದಂತೆ ವಿವಿಧ ಮಠಾಧೀಶರು ಕಲಾವಿದರು, ಕಲಾಭಿಮಾನಿಗಳು, ಭಕ್ತರು, ಸಾರ್ವಜನಿಕರು, ಎಸ್.ಜೆ.ಎಂ. ವಿದ್ಯಾಪೀಠದ ಕೆಲ ಶಾಲಾಕಾಲೇಜುಗಳ ನೌಕರರು ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಮಾಜ, ಸಂಘಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೂ ಮುನ್ನಾ ವಿದ್ಯಾರ್ಥಿಗಳು, ಭಕ್ತರು ಹಾಗೂ ಸಾರ್ವಜನಿಕರು ವನದಲ್ಲಿ ಸಸಿ ನೆಡುವುದು, ಗಿಡಗಳಿಗೆ ಪಾತಿ ಮಾಡುವುದು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ಶ್ರಮದಾನ ನಡೆಸಿದರು.