ಭಾಷೆ, ಮನಸು, ಬುದ್ಧಿ ಶುದ್ಧಿಯಾಗಲಿ: ರಾಘವೇಶ್ವರ ಶ್ರೀ ಆಶಯ

| Published : Aug 11 2025, 12:35 AM IST

ಭಾಷೆ, ಮನಸು, ಬುದ್ಧಿ ಶುದ್ಧಿಯಾಗಲಿ: ರಾಘವೇಶ್ವರ ಶ್ರೀ ಆಶಯ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಶುದ್ಧ ಭಾಷೆಯ ಬದಲು ಅಪಭಾಷೆಯನ್ನು, ಕಲಬೆರಕೆ ಭಾಷೆಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಪರಿಸ್ಥಿತಿ ಬರಬಾರದು.

ಗೋಕರ್ಣ: ಭಾಷೆ, ಮನಸು, ಬುದ್ಧಿ ಶುದ್ಧ ಮಾಡಿಕೊಂಡು ಜೀವನ ಸಾರ್ಥಕಪಡಿಸಿಕೊಳ್ಳೋಣ ಎಂದು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಕರೆ ನೀಡಿದರು.

ಅಶೋಕೆಯಲ್ಲಿ ಸ್ವಭಾಷಾ ಚಾತುಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ೩೨ನೇ ದಿನವಾದ ಭಾನುವಾರ ಲಕ್ಷ್ಮೀನಾರಾಯಣಪ್ರಸಾದ ಪಕಳಕುಂಜ ಅವರಿಂದ ಸರ್ವಸೇವೆ ಸ್ವೀಕರಿಸಿ ಆಶೀರ್ವಚನ ಅನುಗ್ರಹಿಸಿದರು.

ನಮ್ಮ ಶುದ್ಧ ಭಾಷೆಯ ಬದಲು ಅಪಭಾಷೆಯನ್ನು, ಕಲಬೆರಕೆ ಭಾಷೆಯನ್ನು ಮುಂದಿನ ಪೀಳಿಗೆಗೆ ಬಿಟ್ಟು ಹೋಗುವ ಪರಿಸ್ಥಿತಿ ಬರಬಾರದು. ಶುದ್ಧ ಕನ್ನಡ ಇಂದು ಇಂಗ್ಲಿಷ್ ಪದಗಳಿಂದ ಕಲಬೆರಕೆಯಾಗಿದೆ. ನಮ್ಮದಲ್ಲದ ಶಬ್ದಗಳನ್ನು ತ್ಯಜಿಸಿ ಕನ್ನಡದ ದೀಪ ಹಚ್ಚೋಣ ಎಂದು ಸಲಹೆ ನೀಡಿದರು.

ದೇಶದ ಚರಿತ್ರೆಯಲ್ಲಿ ಭಾಷೆಯ ತಿರುಳು ಇಟ್ಟುಕೊಂಡು ಚಾತುರ್ಮಾಸ್ಯ ಕೈಗೊಂಡ ನಿದರ್ಶನಗಳಿಲ್ಲ. ಇದರ ಆಶಯವನ್ನು ಅರ್ಥ ಮಾಡಿಕೊಂಡು ಸಮಾಜ ಸ್ವಭಾಷಾ ಶುದ್ಧಿಕಾರ್ಯಕ್ಕೆ ಬೆಂಬಲವಾಗಿ ನಿಲ್ಲಬೇಕು. ಬದಲಾವಣೆಯ ಪರ್ವ ಇಂದಿನಿಂದಲೇ ಆರಂಭವಾಗಲಿ ಎಂದು ಆಶಿಸಿದರು.

ಸ್ವಭಾಷೆ ಬಳಕೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಅನಕ್ಷರಸ್ಥರಿಗೂ ಕಲಬೆರಕೆ ಭಾಷೆಯನ್ನೇ ಸಮಾಜ ಕಲಿಸುತ್ತಿದೆ. ಮತ್ತೆ ನಾವು ಮೂಲಕ್ಕೆ ಮರಳಬೇಕು ಎಂದು ಸಲಹೆ ನೀಡಿದರು.

ದಿನಕ್ಕೊಂದು ಇಂಗ್ಲಿಷ್ ಪದ ತ್ಯಜಿಸುವ ಅಭಿಯಾನದಲ್ಲಿ ಆನ್ ಮತ್ತು ಆಫ್ ಎಂಬ ಪದಗಳ ಬದಲಾಗಿ ಚಾಲೂ ಮತ್ತು ಬಂದ್ ಎಂಬ ಶಬ್ದವನ್ನು ಬಳಸುವಂತೆ ಸೂಚಿಸಿದರು. ಈ ಎರಡೂ ಪದಗಳು ಸಂಸ್ಕೃತ ಮೂಲದ್ದದಾಗಿದ್ದು, ಶುದ್ಧ ಕನ್ನಡದಲ್ಲೂ ಇದಕ್ಕೆ ಒಳ್ಳೆಯ ಪದಗಳಿವೆ. ಗ್ರಾಮ್ಯದಲ್ಲಿ ಬಳಸುವ ತೆಗೆ ಮತ್ತು ಹಾಕು, ಹೊತ್ತಿಸು ಮತ್ತು ನಂದಿಸು, ಉರಿಸು- ಆರಿಸು ಎಂಬ ಪದಗಳನ್ನು ಬಳಸಬಹುದು ಎಂದರು.

ರವಿರಾಮ ಸಿದ್ದಮೂಲೆ ಬರೆದ ''''''''ತಂತ್ರ ಸಮುಚ್ಚಯ ಶಿಲ್ಪ'''''''' ಎಂಬ ವಾಸ್ತುಶಾಸ್ತ್ರದ ಕೃತಿಯನ್ನು ಲೋಕಾರ್ಪಣೆ ಮಾಡಿದ ಶ್ರೀಗಳು, "ವಾಸ್ತುಪುರುಷನ ಮಡಿಲಿನಲ್ಲಿ ನಮ್ಮ ವಾಸ; ಆದ್ದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ವಾಸ್ತುವಿಗೆ ವಿಶೇಷ ಸ್ಥಾನವಿದೆ. ನೆಯ ಉದ್ದ ಅಗಲಗಳು ವ್ಯತ್ಯಸ್ತವಾದಾಗ ಜೀವನವೇ ಏರುಪೇರಾಗುವ ಅಪಾಯವಿದೆ. ಶಾಸ್ತ್ರೀಯವಾಗಿ ಮನೆಗಳನ್ನು ನಿರ್ಮಿಸಲು ಮಾರ್ಗರ್ಶನ ಮಾಡುವ ಕೃತಿ ಸಮಾಜಕ್ಕೆ ಉಪಯೋಗವಾಗಲಿ " ಎಂದು ಆಶಿಸಿದರು.

ಮುಕ್ರಿ ಸಮಾಜ ಮಠವನ್ನು ಸರ್ವರೀತಿಯಲ್ಲಿ ಆಶ್ರಯಿಸಿದವರು. ಹಿಂದೊಮ್ಮೆ ಮುಖ್ಯವಾಹಿನಿಯಿಂದ ಬಹುದೂರ ಇದ್ದ ಸಮಾಜ ಇಂದು ಮಠದ ಅವಿಭಾಜ್ಯ ಅಂಗವಾಗಿ ಬೆಳೆದಿದೆ. ಕಷ್ಟದ ಬದುಕು ಸವೆಸಿಕೊಂಡು ಬಂದ ಸಮಾಜದ ಬಾಳು ಬೆಳಕಾಗಲಿ ಎಂದು ಆಶಿಸಿದರು. ಮಠದ ಮೇಲೆ ಆಕ್ರಮಣಗಳು ನಡೆದಾಗ ಮಠದ ಪರ ಗಟ್ಟಿಯಾಗಿ ನಿಂತ ಸಮುದಾಯದ ಬಗ್ಗೆ ವಿಶೇಷ ಅಭಿಮಾನವಿದೆ ಎಂದು ಬಣ್ಣಿಸಿದರು.

ರಾಮಚಂದ್ರ ಭಾಗ್ವತ್, ಕಾರವಾರದ ವಕೀಲ ನಾಗರಾಜ ನಾಯಕ್, ಚಾತುರ್ಮಾಸ್ಯ ತಂಡದ ಮಂಜುನಾಥ ಸುವರ್ಣಗದ್ದೆ, ಶ್ರೀಕಾಂತ್ ಪಂಡಿತ್, ಜಿ.ಕೆ.ಹೆಗಡೆ, ಉದಯಶಂಕರ ಭಟ್ ಮಿತ್ತೂರು, ಅರುಣ್ ಹೆಗಡೆ, ಗಣೇಶ್ ಕೂಜಳ್ಳಿ, ಎನ್.ಆರ್.ರಾಘವೇಂದ್ರ, ಅರವಿಂದ ಧರ್ಬೆ, ರಾಘವೇಂದ್ರ ಮಧ್ಯಸ್ಥ, ವಿಷ್ಣು ಬನಾರಿ, ನಿಖಿಲ್, ಜಿ.ವಿ.ಹೆಗಡೆ, ಮಹಾನಂದಿ ಗೋಲೋಕ ಸಮಿತಿ ಅಧ್ಯಕ್ಷ ಡಾ.ಸೀತಾರಾಂ ಪ್ರಸಾದ್, ಕಾರ್ಯದರ್ಶಿ ಕೆ.ಪಿ.ಎಡಪ್ಪಾಡಿ, ಶಶಿಕಿರಣ್, ಡಾಲ್ಫಿನ್ ಇರಿಗೇಶನ ಗಜಾನನ ಹೆಗಡೆ, ಮಹೇಶ್ ಮುನಿಯಂಗಳ, ಕೆ.ಎನ್.ಭಟ್, ಸರ್ವಸಮಾಜದ ಸಂಯೋಜಕ ಕೆ.ಎನ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಮುಕ್ರಿ ಸಮಾಜದ ವತಿಯಿಂದ ಸುವರ್ಣ ಪಾದುಕಾಪೂಜೆ ನಡೆಯಿತು. ಮಹಾನಂದಿ ಗೋಲೋಕ ವತಿಯಿಂದ ಪಾದುಕಾಪೂಜೆ ನೆರವೇರಿತು.