ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಕಾರುಬಾರು

| Published : Jun 27 2024, 01:00 AM IST

ಸಾರಾಂಶ

ಕಾಡು ಮೇಡು ಬೆಟ್ಟಗುಡ್ಡ, ರೈತರ ಜಮೀನಿನ ಬದುಗಳಲ್ಲಿ ಕಾಣಸಿಗುತ್ತಿದ್ದ ನೇರಳೆ ಹಣ್ಣನ್ನು ಕೇಳುವವರೇ ಇರಲಿಲ್ಲ. ಆದರೆ ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಈ ಭಾರಿ ಜಂಬುನೇರಳೆ ಭರಪೂರ ಫಸಲು ಬಂದಿದ್ದು, ಸ್ಥಳೀಯ ಮಾರುಕಟ್ಟೆಯಲ್ಲಿ ನೇರಳೆ ಹಣ್ಣಿನ ಕಾರುಬಾರು ಜೋರಾಗಿದೆ. ನಗರ, ಪಟ್ಟಣ ಮತ್ತು ಗ್ರಾಮಗಳ ಗಲ್ಲಿ-ಗಲ್ಲಿಗಳಲ್ಲಿ ನೇರಳೆ ಹಣ್ಣಿನದ್ದೆ ಕಮಾಲ್‌. ಮಧುಮೇಹಿಗಳಿಗೆ ರಾಮಬಾಣವಾಗಿರುವ ಜಂಬುನೇರಳೆ ಹಣ್ಣಿಗೆ ಭಾರೀ ಡಿಮ್ಯಾಂಡ್ ಇದೆ. ಇದರಿಂದ ಬೆಳೆಗಾರರಿಗೂ ಭಾರೀ ಲಾಭವಾಗಲಿದೆ.

ಕಾಡು ಮೇಡು ಬೆಟ್ಟಗುಡ್ಡ, ರೈತರ ಜಮೀನಿನ ಬದುಗಳಲ್ಲಿ ಕಾಣಸಿಗುತ್ತಿದ್ದ ನೇರಳೆ ಹಣ್ಣನ್ನು ಕಂಡರೆ ಮೂಗು ಮುರಿಯುತ್ತಿದ್ದ ಕಾಲವೊಂದಿತ್ತು. ಆದರೆ ನೇರಳೆ ಹಣ್ಣಿನಲ್ಲಿ ಅಪರೂಪದ ಕಾಯಿಲೆಗಳನ್ನು ವಾಸಿಮಾಡಬಲ್ಲ, ಔಷಧೀಯ ಗುಣಗಳಿವೆ ಅನ್ನೋದು ಗೊತ್ತಾಗುತ್ತಿದ್ದಂತೆ, ನೇರಳೆ ಹಣ್ಣಿಗೆ ಬಾರೀ ಭಾರೀ ಡಿಮ್ಯಾಂಡ್ ಬಂದಿದೆ. ಮೇ ಯಿಂದ ಜುಲೈವರೆಗೆ ಲಭ್ಯ

ಮೇ ಯಿಂದ ಜುಲೈ ತಿಂಗಳುಗಳಲ್ಲಿ ಮಾತ್ರ ನೇರಳೆ ಹಣ್ಣುಗಳು ಲಭ್ಯ. ಈಗ ಬಳ್ಳಾಪುರದ ಗಲ್ಲಿ ಗಲ್ಲಿಗಳಲ್ಲಿ ಸಣ್ಣ ಹಣ್ಣಿನ ಅಂಗಡಿಯಿಂದ ದೊಡ್ಡ ದೊಡ್ಡ ಹಣ್ಣಿನ ಅಂಗಡಿಗಳಲ್ಲೂ ನೇರಳೆ ಹಣ್ಣಿನ ವಹಿವಾಟು ನಡೆಯುತ್ತಿದೆ. ನಗರದ ರಸ್ತೆಗಳಲ್ಲಿ ತಳ್ಳುಗಾಡಿಗಳಲ್ಲಿ ಮಾವಿನ ಹಣ್ಣುಗಳ ಜೊತೆಯಲ್ಲಿ ನೇರಳೆ ಹಣ್ಣುಗಳನ್ನು ಗುಡ್ಡೆ ಹಾಕಿ ಮಾರಾಟ ಮಾಡಲಾಗುತ್ತಿದೆ.

ಕೆ.ಜಿ ನೇರಳೆ ಹಣ್ಣಿಗೆ ಈ ಭಾರಿ ರೂ150 ರಿಂದ 200 ರೂಗೆ ಮಾರಾಟವಾಗುತ್ತಿದೆ. ಆದರೆ ಕಳೆದ ಬಾರಿ ಫಸಲು ಕಡಿಮೆ ಬಂದಿದ್ದರಿಂದ ಇನ್ನೂರು, ಮುನ್ನೂರು ರೂಪಾಯಿ ಕೊಟ್ಟು ಸಾರ್ವಜನಿಕರು ಖರೀದಿ ಮಾಡಿದ್ದರು.

ಎರಡೇ ದಿನ ಬಾಳಿಕೆ

ಕೊಯ್ದಿಟ್ಟ ನೇರಳೆ ಹಣ್ಣು ಹೆಚ್ಚು ಎಂದರೆ ಎರಡು ದಿನ ಬಾಳಿಕೆ ಬರುತ್ತದೆ. ಆಮೇಲೆ ಹಾಳಾಗಲು ಆರಂಭವಾಗುತ್ತದೆ. ಹಾಗಾಗಿ ವ್ಯಾಪಾರಸ್ಥರು ಆದಷ್ಟೂ ಒಂದೇ ದಿನದಲ್ಲಿ ಮಾರಾಟ ಮಾಡಲು ಯತ್ನಿಸುತ್ತಾರೆ. ಸಂಜೆ ಹೊತ್ತಿಗೆ ಮುಗಿಯದಿದ್ದರೆ, ಕಡಿಮೆ ದರಕ್ಕೆ ಕೊಡುವವರೂ ಇದ್ದಾರೆ.

ಹಲವಾರು ಕಾಯಿಲೆಗಳಿಗೆ ರಾಮಬಾಣವಾದ ನೇರಳೆ ಹಣ್ಣನ್ನು ಅತಿಯಾಗಿ ಸೇವಿದರೆ ಅಪಾಯಕಾರಿಯಾಗಬಹುದು ಎಂದು ಧನ್ವಂತರಿ ವೈದ್ಯ ಕೃಷ್ಣ ಮೂರ್ತಿ ಎಚ್ಚರಿಸಿದ್ದಾರೆ. ಇದರಿಂದ ನೇರಳೆ ಮರಗಳನ್ನು ಬೆಳೆದ ರೈತರಿಗೆ ಪುಲ್ ಡಿಮ್ಯಾಂಡೋ ಡಿಮ್ಯಾಂಡ್. ಮೇನಿಂದ ಜುಲೈ ತಿಂಗಳಲ್ಲಿ ಹಣ್ಣಿಗೆ ಬಾರೀ ಬೇಡಿಕೆ ಬಂದು ಹಣ್ಣುಗಳ ವರ್ತಕರು ರೈತರ ತೋಟಗಳಿಗೆ ಬಂದು ಖರೀದಿಸುತ್ತಿದ್ದಾರೆ. ಇನ್ನು ಹೂ ಮೊಗ್ಗು ಇರುವಾಗಲೇ ನೇರಳೆ ಮರಗಳ ಗುತ್ತಿಗೆ ಪಡೆಯುತ್ತಾರೆ.

ನೇರಳೆ ಬೆಳೆಯಲು ಸೌಲಭ್ಯ

ಇನ್ನು ಚಿಕ್ಕಬಳ್ಳಾಪುರ ತೋಟಗಾರಿಕಾ ಇಲಾಖೆ, ಮಹಾತ್ಮಾಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ, ಸಸಿಯಿಂದ ನಾಟಿ ಮಾಡೋವರೆಗೂ ಎಲ್ಲಾ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ತೋಟಗಾರಿಕಾಧಿಕಾರಿಗಳು ತಿಳಿಸಿದ್ದಾರೆ.