ನಾಯಕರ, ಮಠಾಧೀಶರ ಕೈಯಲ್ಲಿ ಆಯುಧ ಕೊಡಿ

| Published : Dec 19 2023, 01:45 AM IST

ಸಾರಾಂಶ

ಪುರಾಣದ ಮಾತು ಉಲ್ಲೇಖಿಸಿ ಮಾತನಾಡಿದ ಫಕೀರ ದಿಂಗಾಲೇಶ್ವರ ಶ್ರೀಗಳು, ಈ ಹಿಂದೆ ದೇವಿಯ ಕಡೆ ಯಾವುದೇ ಸ್ವತಂತ್ರ ಆಯುಧಗಳು ಇರಲಿಲ್ಲ. ಎಲ್ಲರೂ ಒಂದೊಂದು ಆಯುಧ ಕೊಟ್ಟಿರುವ ಕಾರಣಕ್ಕೆ ದೇವಿಯು ದುಷ್ಟರ ಸಂಹಾರ ಮಾಡಿದಳು. ಇದೇ ರೀತಿ ನಮ್ಮ ನಾಯಕರಿಗೆ ಒಬ್ಬೊಬ್ಬರು ಆಯುಧ ಕೊಡಬೇಕಿದೆ ಎಂದಿದ್ದಾರೆ.

ಜಗದೀಶ ಶೆಟ್ಟರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಫಕೀರ ದಿಂಗಾಲೇಶ್ವರ ಶ್ರೀ ಮಾತು

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಇಂದು ಮಠಮಾನ್ಯಗಳನ್ನು, ಲಿಂಗಾಯತ ನಾಯಕರನ್ನು ತುಳಿಯುವ ಕಾರ್ಯವಾಗುತ್ತಿದೆ. ಇನ್ಮುಂದೆ ಸಮಾಜದ ನಾಯಕರು, ಮಠಾಧೀಪತಿಗಳ ಕೈಯಲ್ಲಿ ಆಯುಧ ಕೊಡುವ ಮೂಲಕ ಮಠ ಮಾನ್ಯಗಳು, ಗಣ್ಯರ ರಕ್ಷಣೆ ಮಾಡಬೇಕಿದೆ ಎಂದು ಶಿರಹಟ್ಟಿ ಫಕೀರೇಶ್ವರ ಮಠದ ಫಕೀರ ದಿಂಗಾಲೇಶ್ವರ ಶ್ರೀಗಳು ಭಾನುವಾರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಜನ್ಮದಿನದ ಕಾರ್ಯಕ್ರಮದಲ್ಲಿ ಹೇಳಿರುವುದು ಇದೀಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಪುರಾಣದ ಮಾತು ಉಲ್ಲೇಖಿಸಿ ಮಾತನಾಡಿದ ಶ್ರೀಗಳು, ಈ ಹಿಂದೆ ದೇವಿಯ ಕಡೆ ಯಾವುದೇ ಸ್ವತಂತ್ರ ಆಯುಧಗಳು ಇರಲಿಲ್ಲ. ಎಲ್ಲರೂ ಒಂದೊಂದು ಆಯುಧ ಕೊಟ್ಟಿರುವ ಕಾರಣಕ್ಕೆ ದೇವಿಯು ದುಷ್ಟರ ಸಂಹಾರ ಮಾಡಿದಳು. ಇದೇ ರೀತಿ ನಮ್ಮ ನಾಯಕರಿಗೆ ಒಬ್ಬೊಬ್ಬರು ಆಯುಧ ಕೊಡಬೇಕಿದೆ. ಇಂದು ಈ ಸಮಾಜದಲ್ಲಿ ಬಲಿಷ್ಠ ಆಗುತ್ತಿರುವ ವ್ಯಕ್ತಿಗಳಿಗೆ ತೊಂದರೆ ಕೊಡುವ ಕೆಲಸವಾಗುತ್ತಿದೆ. ಈ ಸ್ಥಿತಿ ಮಠಾಧಿಪತಿಗಳಿಗೂ ತಪ್ಪಿಲ್ಲ. ಅವರನ್ನೂ ತೇಜೋವಧೆ ಮಾಡುವ ಕೆಲಸ ನಡೆಯುತ್ತಿದೆ. ನಮ್ಮ ಮಠಗಳನ್ನು ನಾಶ ಮಾಡುವುದರೊಂದಿಗೆ ಎರಡನೇ ಹಂತದ ನಾಯಕರನ್ನು ರಾಜಕೀಯವಾಗಿ ನಾಶ ಮಾಡುವ ಷಡ್ಯಂತ್ರ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಮಾಜಕ್ಕೆ ಆಧಾರಸ್ತಂಭವಾಗಿರುವವರು ಜನನಾಯಕರು ಮತ್ತು ಮಠಾಧೀಶರು ಇವರಿಬ್ಬರೇ ಎಂಬುದು ನಿಮಗೆ ತಿಳಿದಿರಲಿ. ಈ ಕುರಿತು ಸಮಾಜ ಬಾಂಧವರು ಅರಿವು ಹೊಂದಿ ಎಚ್ಚೆತ್ತುಕೊಳ್ಳುವ ಕಾಲ ಬಂದಿದೆ. ಈಗಲಾದರೂ ಎಚ್ಚೆತ್ತು ಸಮಾಜದ ಸಂಘಟನೆಗೆ ಮುಂದಾಗಿ ಎಂದು ದಿಂಗಾಲೇಶ್ವರ ಶ್ರೀ ಕರೆ ನೀಡಿದ್ದರು.