ಸಂಸ್ಕೃತಿ-ಪರಂಪರೆ ವೈಭವ ಸಾರಿದ ‘ಪುತ್ತರಿ ಮಂದ್ ನಮ್ಮೆ’

| Published : Dec 19 2024, 12:33 AM IST

ಸಾರಾಂಶ

ಐತಿಹಾಸಿಕ ಪುತ್ತರಿ ಕೋಲ್‌ ಮಂದ್‌ ನಮ್ಮೆಯಲ್ಲಿ ಕೊಡವ ಜಾನಪದ ತಜ್ಞ ಬಾಚರಣಿಯಂಡ ಅಪ್ಪಣ್ಣ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೊಡವ ಸಂಸ್ಕೃತಿ ವೈಭವ ಮರುಕಳಿಸಲಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಶ್ರೀಮಂಗಲ

ಟಿ. ಶೆಟ್ಟಿಗೇರಿಯ ತಾವಳಗೇರಿ ಮಂದ್‌ ನಾಡ್ ಪುತ್ತರಿ ಕೋಲ್ ಮಂದ್ ವೈಭವವನ್ನು ನೋಡಿದಾಗ ಮತ್ತೆ ಕೊಡವ ಸಂಸ್ಕೃತಿ ಪುನರ್ಜನ್ಮ ಪಡೆಯುತ್ತದೆ. ಕ್ರಿ.ಶ. 1600 ರ ಹಿಂದೆ ಇದ್ದಂತೆ ಕೊಡವ ಸಂಸ್ಕೃತಿಯ ವೈಭವ ಮರುಕಳಿಸಲಿದೆ ಎಂದು ಕೊಡವ ಜಾನಪದ ತಜ್ಞ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಾಚರಣಿಯಂಡ ಅಪ್ಪಣ್ಣ ಅಭಿಪ್ರಾಯಪಟ್ಟರು.

ತಾವಳಗೇರಿ ಐತಿಹಾಸಿಕ ಪುತ್ತರಿ ಕೋಲ್ ಮಂದ್ ನಮ್ಮೆಯಲ್ಲಿ ಮುಖ್ಯ ಅತಿಥಿಯಾಗಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ತಾವಳಗೇರಿ ಮಂದ್ ಬಗ್ಗೆ ಕೇಳಿದ್ದೆ, ಓದಿ ತಿಳಿದಿದ್ದೆ, ಅದರ ವೈಭವ ಸ್ವತಃ ಕಂಡು ಪುಳಕಿತನಾಗಿದ್ದೇನೆ ಎಂದರು.

ವಿದ್ವಾಂಸರು ಇತಿಹಾಸಕಾರರು ಹಾಗೂ ಹೊರಗಿನ ಇತರ ಜನಾಂಗಗಳು ಕೊಡವ ಸಂಸ್ಕೃತಿ, ಆಚಾರ ವಿಚಾರ ಪದ್ಧತಿಗಳ ಅತ್ಯಂತ ಹೆಮ್ಮೆ ಅಭಿಮಾನವನ್ನು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ನಮ್ಮ ಭಾಷೆ, ಸಂಸ್ಕೃತಿ, ಪದ್ಧತಿ, ಪರಂಪರೆ ಮೇಲೆ ಅಭಿಮಾನ ಸದಾ ನಮಗೆ ಇರಬೇಕು ಎಂದರು.

ಸಾಹಿತಿ ಬಾಚರಣಿಯಂಡ ರಾಣು ಅಪ್ಪಣ್ಣ ಮಾತನಾಡಿ, ಮರೆಯಾಗುತ್ತಿರುವ ಕೊಡವ ಸಂಸ್ಕೃತಿಯನ್ನು ಮತ್ತೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂದಿನ ಮಂದ್‌ನಲ್ಲಿ ಯುವ ಪೀಳಿಗೆ ಆಸಕ್ತಿ ಹಾಗೂ ಪ್ರದರ್ಶನವನ್ನು ನೋಡಿ ಮತ್ತೆ ಕೊಡವ ಸಂಸ್ಕೃತಿ ವೈಭವ ಸಾರಲಿದೆ ಎನ್ನುವ ಆಶಾವಾದ ಮೂಡಿದೆ. ನಮ್ಮ ಮಕ್ಕಳಿಗೆ ಕೊಡವ ಇತಿಹಾಸ ಪರಂಪರೆ ಬಗ್ಗೆ ತಿಳುವಳಿಕೆ ನೀಡಬೇಕು. ಕೊಡವ ಎಂದು ಅಭಿಮಾನ ನಮ್ಮಲ್ಲಿ ಸದಾ ಇರಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮಂದ್‌ ತಕ್ಕ ಕೈಬುಲೀರ ಹರೀಶ್ ಅಪ್ಪಯ್ಯ, ಜನಾಂಗದ ಒಳಿತಿಗಾಗಿ ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಹಸ್ತಾಂತರಿಸಲು, ಪರಂಪರೆಯಿಂದ ಬಂದಿರುವ ಆಚರಣೆಯನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇಂತಹ ಆಚರಣೆಗಳಿಗೆ ನಾವು ಪ್ರೋತ್ಸಾಹ ನೀಡಿ ಉಳಿಸಿ ಮತ್ತಷ್ಟು ಸಮೃದ್ಧವಾಗಿ ಬೆಳೆಸಲು ಮುಂದಾಗಬೇಕು ಎಂದು ಕರೆ ನೀಡಿದರು.

ಬಾಚರಣಿಯಂಡ ಅಪ್ಪಣ್ಣ ಹಾಗೂ ರಾಣು ಅಪ್ಪಣ್ಣ ಅವರಿಗೆ ಅವರು ಕೊಡವ ಸಂಸ್ಕೃತಿಗೆ ಸಲ್ಲಿಸಿರುವ ಸೇವೆ ಸಾಧನೆ ಪರಿಗಣಿಸಿ ಸನ್ಮಾನಿಸಲಾಯಿತು.

ಕೈಬುಲೀರ ಐನ್ ಮನೆಯಿಂದ ಹೆಣ್ಣು ಕುದುರೆ (ಕುದುರೆ ವೇಷಧಾರಿ) ಹಾಗೂ ಟಿ. ಶೆಟ್ಟಿಗೇರಿ ಕೋರ ಕೋಟ್ ಅಯ್ಯಪ್ಪ ದೇವಸ್ಥಾನದಿಂದ ಗಂಡು ಕುದುರೆ ಸಹಿತ ಒಡ್ಡೋಲಗದೊಂದಿಗೆ ಮಂದ್‌ಗೆ ಹತ್ತುವ ಮೂಲಕ ಪುತ್ತರಿ ಕೋಲ್ ಮಂದ್‌ಗೆ ಸಾಂಪ್ರದಾಯಿಕವಾಗಿ ಚಾಲನೆ ನೀಡಲಾಯಿತು. ಈ ಸಂದರ್ಭ ನಾಡಿನ ಜನರಿಂದ ಪುತ್ತರಿ ಕೋಲಾಟ್ ನಡೆಯಿತು. ನಂತರ ಪೆರುಮಳೇಶ್ವರ ಪಟ್ಟಿಯಲ್ಲಿ ತಕ್ಕ ಮುಖ್ಯಸ್ಥರು ಪ್ರಾರ್ಥಿಸಿ, ಮಂದ್ ಕಾರ್ಯಕ್ರಮ ನಡೆಯಿತು.

ಮಂದ್‌ನಲ್ಲಿ ಟಿ.ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ತಂಡ, ಟಿ. ಶೆಟ್ಟಿಗೇರಿ ರೂಟ್ಸ್ ಶಾಲಾ ಮಕ್ಕಳ ತಂಡದಿಂದ ಪುತ್ತರಿ ಕೋಲಾಟ್, ಪರೆಯ ಕಳಿ, ಉಮ್ಮತಾಟ್, ಬೊಳಕಾಟ್ ಪ್ರದರ್ಶನ ನಡೆಯಿತು.

ಹಗ್ಗಜಗ್ಗಾಟ ಸ್ಪರ್ಧೆ: ಮಹಿಳೆಯರು ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆ ನಡೆಯಿತು.

ಮಹಿಳೆಯರ ವಿಭಾಗದಲ್ಲಿ ವಗರೆ ಗ್ರಾಮ ಪ್ರಥಮ, ಟಿ. ಶೆಟ್ಟಿಗೇರಿ ಗ್ರಾಮ ದ್ವಿತೀಯ ಹಾಗೂ ನೆಮ್ಮಲೆ ಗ್ರಾಮ ತಂಡ ತೃತೀಯ ಸ್ಥಾನ ಪಡೆಯಿತು. ಪುರುಷರ ವಿಭಾಗದಲ್ಲಿ ವಗರೆ ಗ್ರಾಮ ಪ್ರಥಮ, ಟಿ. ಶೆಟ್ಟಿಗೇರಿ ಗ್ರಾಮ ದ್ವಿತೀಯ ಹಾಗೂ ತಾವಳಗೇರಿ ಗ್ರಾಮ ತಂಡ ತೃತೀಯ ಸ್ಥಾನ ಪಡೆಯಿತು.

ವೇದಿಕೆಯಲ್ಲಿ ತಡಿಯಂಗಡ ರಮೇಶ್, ಕುಪ್ಪುಡೀರ ತಿಲಕದಾಸ್, ಮನ್ನೆರ ರಾಜು ಮೊಣ್ಣಪ್ಪ, ಮಾಂಗುಟ್ಟೀರ ಕಾಶಿ, ಚೊಟ್ಟೆಕೊರಿಯಂಡ ಶ್ರೀನಿವಾಸ್, ಕಟ್ಟೇರ ಅಚ್ಚಪ್ಪ,ಈಶ್ವರ, ಚೆಟ್ಟಂಗಡ ಹ್ಯಾರಿ ದೇವಯ್ಯ, ಚೊಟ್ಟೆಯಾಂಡ ಮಾಡ ವಿಶ್ವನಾಥ್, ಟಿ. ಶೆಟ್ಟಿಗೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಉಪಾಧ್ಯಕ್ಷೆ ಮನ್ನೆರ ಸರು ರಮೇಶ್, ಕಾರ್ಯದರ್ಶಿ ಕಳ್ಳಿಚಂಡ ದೀನಾ ಉತ್ತಪ್ಪ ಮತ್ತು ಸದಸ್ಯರು ಹಾಜರಿದ್ದರು.