ಪುಟ್ಟಣ್ಣ ಪಿಆರ್‌ಒ ಅಲ್ಲ, ಸಮಸ್ತ ಶಿಕ್ಷಕರ ಧ್ವನಿ

| Published : Feb 09 2024, 01:49 AM IST

ಸಾರಾಂಶ

ರಾಮನಗರ: ಕೋವಿಡ್ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ನೆರವಿಗೆ ಧಾವಿಸಿದ ಪುಟ್ಟಣ, ಶಿಕ್ಷಕ ಸಮುದಾಯದ ಧ್ವನಿಯಾಗಿದ್ದಾರೆ. ಸೋಲಿನ ಭೀತಿಯಿಂದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ರಂಗನಾಥ್ ಕ್ಷುಲ್ಲಕ ಟೀಕೆಗಳಲ್ಲಿ ತೊಡಗಿದ್ದಾರೆ ಎಂದು ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ವಾಗ್ದಾಳಿ ನಡೆಸಿದರು.

ರಾಮನಗರ: ಕೋವಿಡ್ ಸಂಕಷ್ಟ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ನೆರವಿಗೆ ಧಾವಿಸಿದ ಪುಟ್ಟಣ, ಶಿಕ್ಷಕ ಸಮುದಾಯದ ಧ್ವನಿಯಾಗಿದ್ದಾರೆ. ಸೋಲಿನ ಭೀತಿಯಿಂದ ಬಿಜೆಪಿ - ಜೆಡಿಎಸ್ ಮೈತ್ರಿ ಅಭ್ಯರ್ಥಿ ರಂಗನಾಥ್ ಕ್ಷುಲ್ಲಕ ಟೀಕೆಗಳಲ್ಲಿ ತೊಡಗಿದ್ದಾರೆ ಎಂದು ಕ್ಯಾಮ್ಸ್ ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪುಟ್ಟಣ್ಣ ಅವರು ವಿಧಾನ ಪರಿಷತ್‌ನಲ್ಲಿ ಶಿಕ್ಷಕರ ಸಮಸ್ಯೆ ಬಗ್ಗೆ ಚರ್ಚಿಸಿ ಪರಿಹಾರ ದೊರಕಿಸಿಕೊಟ್ಟಿದ್ದಾರೆ. ಶಿಕ್ಷಕರ ಸಮಸ್ಯೆ ಎದುರಿಸುವ ಸಲುವಾಗಿ ಹಲವಾರು ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಅಂತಹ ವ್ಯಕ್ತಿಯನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಪಿಆರ್‌ಒ ಎಂದಿರುವ ರಂಗನಾಥ್ ಹೇಳಿಕೆ ನೋವು ತರಿಸಿದೆ ಎಂದರು.

ಪುಟ್ಟಣ್ಣ ಅವರು ಖಾಸಗಿ ಶಾಲಾ ಆಡಳಿತ ಮಂಡಳಿಯ ಪಿಆರ್‌ಒ ಆಗಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ. ನಿಜವಾಗಿಯೂ ಪಿಆರ್ ಒ ಆಗಿದ್ದರೆ ನಾವು ಸಹ ಅವರನ್ನು ವಿರೋಧ ಮಾಡುತ್ತೇವೆ ಎಂದು ಸವಾಲು ಹಾಕಿದರು.

ಕೋವಿಡ್ ಕಾಲದಲ್ಲಿ ಖಾಸಗಿ ಶಿಕ್ಷಕರು ಬೀದಿಗೆ ಬಿದ್ದರು. ಅವರ ಪರವಾಗಿ ಹಿಂದಿನ ಸರ್ಕಾರದಲ್ಲಿ ಹಣ ಬಿಡುಗಡೆ ಮಾಡಿಸುವಲ್ಲಿ ಪುಟ್ಟಣ್ಣ ಯಶಸ್ವಿಯಾಗಿದ್ದಾರೆ. ಅಂದು ಪುಟ್ಟಣ್ಣ ಪಿಆರ್‌ಒ ಆಗಿರಲಿಲ್ಲ. ಶಿಕ್ಷಕರ ಸಮಸ್ಯೆಗೆ ಧ್ವನಿಯಾಗಿ ನಿಂತಿದ್ದರು. ಹಾಗಾಗಿ ಅವರನ್ನು ಪಿಆರ್‌ಒ ಎನ್ನುವುದಾದರೆ, ಬಸವರಾಜ ಹೊರಟ್ಟಿ, ಮರಿತಿಬ್ಬೇಗೌಡ ಅವರೆಲ್ಲರನ್ನೂ ತಿರಸ್ಕಾರ ಮಾಡಬೇಕು. ರಂಗನಾಥ್ ತಮ್ಮ ಹೇಳಿಕೆಯಿಂದಾಗಿ ಇವರಿಗೆಲ್ಲ ಅಗೌರವ ತೋರಿಸಿದ್ದಾರೆ ಎಂದು ಹೇಳಿದರು.

ಈ ಬಾರಿಯ ಚುನಾವಣೆಯಲ್ಲಿ ಖಾಸಗಿ ಶಾಲಾ ಶಿಕ್ಷಕರು ರಂಗನಾಥ್ ಅವರನ್ನು ತಿರಸ್ಕಾರ ಮಾಡಲಿದ್ದಾರೆ. ಶಿಕ್ಷಕರ ಪರವಾಗಿ 15ಕ್ಕೂ ಹೆಚ್ಚು ಪ್ರತಿಭಟನೆ ಮಾಡಿರುವುದಾಗಿ ರಂಗನಾಥ್ ಸುಳ್ಳು ಹೇಳಿದ್ದಾರೆ. ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಸಮಸ್ಯೆಗೆ ಬಗ್ಗೆ ಅವರು ಎಂದೂ ಧ್ವನಿ ಎತ್ತಲಿಲ್ಲ. ಹಾಗಾಗಿ ರಂಗನಾಥ್ ಅವರು ಶಿಕ್ಷಕರ ಕ್ಷೇತ್ರದಿಂದ ಅಭ್ಯರ್ಥಿಯಾಗಲು ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಟ್ಟಣ್ಣ ಅವರಿಗೆ ಕೆಲಸ ಮಾಡಲು ಬಿಡದಿದ್ದಾಗ ಪಕ್ಷ ತೊರೆದರು. ನಮ್ಮ ಒಕ್ಕೂಟ ಪುಟ್ಟಣ್ಣ ಅವರ ಪರ ನಿಂತಿದೆ. ನಮ್ಮ ಒಕ್ಕೂಟವೂ ಪಕ್ಷದ ಪರ ಅಲ್ಲ. ವ್ಯಕ್ತಿ ಪರವಾಗಿದೆ. ನಮ್ಮ ಒಕ್ಕೂಟದ ಪರ ನಿಂತಿರುವ ಪುಟ್ಟಣ್ಣ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಶಶಿಕುಮಾರ್ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಪಟೇಲ್ ರಾಜು, ಕಾರ್ಯದರ್ಶಿ ಸುನೀಲ್, ರಾಮನಗರ ಅಧ್ಯಕ್ಷ ಬಾಲಗಂಗಾಧರ ಮೂರ್ತಿ, ಕ್ಯಾಮ್ ಪ್ರತಿನಿಧಿ ಪ್ರದೀಪ್, ಅಲ್ತಾಫ್ ಇತರರಿದ್ದರು.8ಕೆಆರ್ ಎಂಎನ್ 7.ಜೆಪಿಜಿ

ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.