ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸಚಿವ ಚಲುವರಾಯಸ್ವಾಮಿ ರಾಜಕೀಯವಾಗಿ ಬೆಳವಣಿಗೆ ಕಾಣಲು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಸಹಕಾರ ಸಾಕಷ್ಟಿದೆ ಎಂಬುದನ್ನು ಮರೆತು ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ತಿರುಗೇಟು ನೀಡಿದರು.ಪಟ್ಟಣದಲ್ಲಿ ಸುದ್ದಿಗಾರೊರಂದಿಗೆ ಮಾತನಾಡಿದ ಅವರು, ಸಿ.ಎಸ್.ಪುಟ್ಟರಾಜು ಅವರು ಎಚ್.ಡಿ.ದೇವೇಗೌಡರ ಕುಟುಂಬದ ಮಾನಸ ಪುತ್ರರು. ರಾಜಕೀಯವಾಗಿ ನಿಮ್ಮಷ್ಟೆ ಸಮಾನವಾಗಿ ಬೆಳೆದಿರುವ ರಾಜಕಾರಣಿ ಅಂತಹ ನಾಯಕ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಸಚಿವ ಚಲುವರಾಯಸ್ವಾಮಿಗೆ ಸಲಹೆ ನೀಡಿದರು.
ಚಲುವರಾಯಸ್ವಾಮಿ ಅವರು ಜಿಪಂ ಉಪಾಧ್ಯಕ್ಷರನ್ನಾಗಿ ಮಾಡಲು, ಸಚಿವರಾಗಿ ಮಾಡಲು ಸಿ.ಎಸ್.ಪುಟ್ಟರಾಜು ಅವರು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಕಾಲುಕಟ್ಟಲಿಲ್ವ ಎಂದು ತಿರುಗೇಟು ನೀಡಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕಾಂಗ್ರೆಸ್ ನಾಯಕರ ಮನೆಬಾಗಿಲು ತಟ್ಟಿರುವುದನ್ನು ಸಚಿವ ಚಲುವರಾಯಸ್ವಾಮಿ ಸಾಬೀತು ಪಡಿಸಿದರೆ ಪುಟ್ಟರಾಜು ಅವರು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತಾರೆ. ತಾಕತ್ತಿದ್ದರೆ ಸಾಬೀತುಪಡಿಸಿ ಎಂದು ಸವಾಲು ಹಾಕಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೇಂದ್ರ ಸಚಿವರಾದ ಬಳಿಕ ಚಲುವರಾಯಸ್ವಾಮಿಗೆ ಹತಾಸೆ ಉಂಟಾಗಿದೆ. ಎಚ್‌ಡಿಕೆ ಗೆದ್ದರೆ ನನ್ನ ಮಂತ್ರಿಗಿರಿ ಕಳೆದುಕೊಂಡು ನಾನು ಊರು ಬಿಡಬೇಕಾಗುತ್ತದೆ ಎಂದು ಹೇಳಿದ್ದೀರಿ. ಜಿಲ್ಲೆಯ ಜನ ಕುಮಾರಸ್ವಾಮಿ ಅವರನ್ನು ಗೆಲ್ಲಿಸಿ ಮಂತ್ರಿ ಮಾಡಿದ್ದಾರೆ. ಹಾಗಂತ ನಾವು ನಿಮ್ಮ ಮಂತ್ರಿ ಸ್ಥಾನದ ರಾಜೀನಾಮೆ ಕೇಳಲ್ಲ. ದ್ವೇಷದ ರಾಜಕೀಯಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಸಹಕಾರ ನೀಡಿ ಎಂದರು.ಚಲುವರಾಯಸ್ವಾಮಿ ಅವರೇ ನಿಮ್ಮ ರಾಜಕೀಯ ಬೆಳವಣಿಗೆಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಗೊಬ್ಬರಹಾಕಿ ಬೆಳೆಸಿದ್ದಾರೆ ಎನ್ನುವುದನ್ನು ಮರೆತು ಗೌರವ ನೀಡದೆ ಟೀಕೆ ಮಾಡುವುದು ಸರಿಯಲ್ಲ ಎಂದರು.
ಕಾವೇರಿ ಸಮಸ್ಯೆ ಬಂದಾಗ ಸಿಎಂ ಸಿದ್ದರಾಮಯ್ಯ ಎಚ್.ಡಿ.ದೇವೇಗೌಡರ ಮನೆಗೆ ತೆರಳಿ ಸಲಹೆ ಕೇಳಿದ್ದರು. ಇದೀಗ ಎಚ್‌ಡಿಕೆ ಅವರು ಕೇಂದ್ರ ಸಚಿವರಾಗಿ ಉನ್ನತ ಸ್ಥಾನದಲ್ಲಿದ್ದಾರೆ. ನೀವು ಮತ್ತು ನಿಮ್ಮೆಲ್ಲಾ ಶಾಸಕರು ಎಚ್.ಡಿ. ಕುಮಾರಸ್ವಾಮಿ ಅವರ ಮನೆಗೆ ಹೋಗಿ ಕಾವೇರಿ ಸಮಸ್ಯೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಚರ್ಚಿಸಿ ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಿ ಎಂದರು.ದೆಹಲಿಯಲ್ಲಿ ನಡೆದ ಸರ್ವಪಕ್ಷದ ಸಭೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಭಾಗವಹಿಸಿ ಸಿಎಂ ಸಿದ್ದರಾಮಯ್ಯ ಜತೆ ಚರ್ಚಿಸಲಿಲ್ಲವೇ?, ಒಬ್ಬ ಕೇಂದ್ರದ ಸಚಿವರು ಜನತಾದರ್ಶನ ನಡೆಸಿದರೆ ಅಧಿಕಾರಿಗಳು ಸಭೆಗೆ ಹೋಗದಂತೆ ಸುತ್ತೊಲೆ ಹೊರಡಿಸಿ ದ್ವೇಷದ ರಾಜಕೀಯ ಮಾಡುತ್ತೀರಾ ಎಂದು ಚಲುವರಾಯಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ನಿಮ್ಮಿಂದ ಬುದ್ಧಿ ಕಲಿಯಬೇಕಾದ ಅಗತ್ಯತೆ ಇಲ್ಲ. ಕಾವೇರಿ ಸಮಸ್ಯೆ ಬಗ್ಗೆಯೂ ಕೇಂದ್ರದೊಂದಿಗೆ ಚರ್ಚಿಸಿ ಸಮಸ್ಯೆ ಕ್ರಮವಹಿಸಲಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು ಚುನಾವಣೆಗೆ ಸ್ಪರ್ಧಿಸಿದ ಬಳಿಕ ಸಚಿವ ಚಲುವರಾಯಸ್ವಾಮಿ ಅವರ ಮಾತಿನ ಶೈಲಿಯೇ ಬದಲಾಗಿದೆ. ಅಧಿಕಾರದ ಅಮಲು ತಲೆಗೆ ಏರಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಸಿ.ಎಸ್.ಪುಟ್ಟರಾಜು ನಿಮ್ಮಷ್ಟೆ ಸಮಾನ ನಾಯಕರು. ನೀವು ಜಿಪಂ ಸದಸ್ಯರಾಗಿದ್ದಾಗ ಅವರು ಜಿಪಂ ಸದಸ್ಯರಾಗಿದ್ದರು. ನಿಮ್ಮಂತೆಯೇ ಮೂರು ಭಾರಿ ಶಾಸಕರು, ಸಂಸದರು, ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ನಾವು ಪುಟ್ಟರಾಜು ಅವರಂತೆ ಉದ್ಯಮಿಯಲ್ಲ ಎಂದು ಹೇಳುತ್ತೀರಲ್ಲ. ಹಾಗದರೆ ಚುನಾವಣೆಗೆ ಬದನೆಕಾಯಿ, ಬೆಂಡೆಕಾಯಿ ಬೆಳೆದು ಅದರಿಂದ ಬಂದ ಹಣದಿಂದ ಚುನಾವಣೆ ಮಾಡಿದ್ರಾ ಎಂದು ಹರಿಹಾಯ್ದರು.ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್ ಮಾತನಾಡಿ, ಕೇಂದ್ರ ಸಚಿವ ಎಚ್‌ಡಿಕೆ ಅಭಿನಂದನೆ ಸಮಾರಂಭಕ್ಕೆ ಬಂದ ಜನರು ಹಸಿದು ಹೋಗಬಾರದೆಂದು ಊಟದ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಸಾವಿರಾರು ಸಂಖ್ಯೆಯಲ್ಲಿ ಊಟ ಮಾಡಿ ಹೋಗಿದ್ದಾರೆ. ಇದು ಜನರನ್ನು ತೋರಿಸಬೇಕು ಎಂಬ ಉದ್ದೇಶ ನಮ್ಮದಲ್ಲ ಎಂದರು.
ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಅವರು ಯಾವಾಗ ಬಂದು ಜನರ ತಲೆ ಏಣಿಕೆ ಮಾಡಿದರೋ ನನಗೆ ಗೊತ್ತಿಲ್ಲ. ಹಗುರುವಾಗಿ ಮಾತನಾಡೋದನ್ನು ಬಿಟ್ಟು ನೀವು 5 ಸಾವಿರ ಜನಕ್ಕೂ ಊಟ ಮಾಡಿಸಿ ನೋಡಿ ಅದರ ಕಷ್ಟ ತಿಳಿಯುತ್ತದೆ ಎಂದು ತಿರುಗೇಟು ನೀಡಿದರು.ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಚಲುವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ನಿರ್ದೇಶಕ ರಾಮಕೃಷ್ಣೇಗೌಡ, ವಿ.ಎಸ್.ನಿಂಗೇಗೌಡ, ಪುರಸಭೆ ಸದಸ್ಯರಾ ಗಿರೀಶ್, ಸೋಮಶೇಖರ್, ಬೊಮ್ಮರಾಜು, ಆನಂದ್, ಮಲ್ಲಿಗೆರೆ ರವಿಕರ ಸೇರಿದಂತೆ ಹಲವರು ಇದ್ದರು.